ಮಡಿಕೇರಿ, ಏ. 18: ಪ್ರಕೃತಿಯ ನೆಲೆಯಾಗಿದ್ದು, ವಿಶಿಷ್ಟವಾದ ಭೌಗೋಳಿಕತೆ - ಪ್ರಾಕೃತಿಕತೆಯೊಂದಿಗೆ ಕೈಗಾರಿಕೆಗಳಂತಹ ಉದ್ಯಮಗಳಿಲ್ಲದೆ ಕೃಷಿ ಆಧಾರಿತವಾಗಿರುವ ಕೊಡಗು ಜಿಲ್ಲೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಂಕಷ್ಟ ಎದುರಿಸುವಂತಾಗಿದೆ. 2018 ಹಾಗೂ 2019ರಲ್ಲಿ ಜಿಲ್ಲೆ ಈ ಹಿಂದೆಯೂ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಲುಗಿ ಹೋಗಿದೆ. ಅದೆಷ್ಟೋ ವರ್ಷಗಳಿಂದ ಕೊಡಗು ಭಾರೀ ಮಳೆ - ಗಾಳಿಯನ್ನು ಎದುರಿಸಿ ನಿಂತಿದ್ದರೂ ಈ ಎರಡು ವರ್ಷಗಳಲ್ಲಿ ಘಟಿಸಿದ ದುರಂತಗಳು ಜಿಲ್ಲೆ ಹಾಗೂ ಜಿಲ್ಲೆಯ ಜನತೆಯನ್ನು ಕಂಗೆಡಿಸಿದೆ. ಈ ಪರಿಸ್ಥಿತಿ ಜಿಲ್ಲೆಯಲ್ಲಿ ಸೇನಾ ಕಾರ್ಯಾಚರಣೆ - ಹೆಲಿಕಾಫ್ಟರ್ ಕಾರ್ಯಾಚರಣೆಯ ಅನಿವಾರ್ಯತೆಯನ್ನು ಸೃಷ್ಟಿಸಿತ್ತಲ್ಲದೆ, ಭೂಕುಸಿತ, ಬೆಟ್ಟ ಜರಿತ... ರಸ್ತೆ ಸಂಪರ್ಕಗಳ ಕಡಿತದಂತಹ ದಾರುಣತೆಗಳಿಂದ ಮಾತ್ರವಲ್ಲದೆ ಅಪಾರವಾದ ಆಸ್ತಿಪಾಸ್ತಿ ಹಾನಿ -ಮಾನವ- ಜಾನುವಾರು ಪ್ರಾಣ ಹಾನಿಗಳಿಗೆ ಕಾರಣವಾಗಿ ಜಿಲ್ಲೆ ಅಕ್ಷರಶಃ ನಲುಗಿಹೋಗಿದೆ. ಈ ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಕಷ್ಟ - ನಷ್ಟಗಳಿಂದ ನಿಧಾನಗತಿಯಲ್ಲಿ ಜಿಲ್ಲೆ ಮೇಲೇಳುತ್ತಿರುವಂತೆ ಈ ಬಾರಿ ಇಡೀ ವಿಶ್ವವನ್ನು ಅಲುಗಾಡಿಸುತ್ತಿರುವ ಕೊರೊನಾ ಎಂಬ ಹೆಮ್ಮಾರಿ ಮಗದೊಮ್ಮೆ ಕೊಡಗಿನ ಮೇಲೆ ಪ್ರಹಾರ ಬೀರಿದೆ. ಎಲ್ಲಾ ರೀತಿಯ ಚಟುವಟಿಕೆಗಳ ಕುಸಿತದಿಂದ ಚೇತರಿಕೆಯನ್ನು ಕಾಣಬೇಕಿರುವುದು ಅನಿವಾರ್ಯ ಎಂಬ ಸನ್ನಿವೇಶದಲ್ಲಿ 2020ರಲ್ಲಿ ಮಳೆಗಾಲಕ್ಕೂ ಮುನ್ನವೇ ಕೊರೊನಾ ರೋಗವನ್ನು ಮೆಟ್ಟಿನಿಲ್ಲಲು ಪ್ರಯತ್ನ ನಡೆಸಬೇಕಾಗಿದೆ. ಕೊಡಗಿನಲ್ಲಿ ಹೇಳಿ - ಕೇಳಿ ಹಲವಾರು ಕೆಲಸ ಕಾರ್ಯಗಳು, ವ್ಯಾಪಾರ ವಹಿವಾಟು, ಸಭೆ - ಸಮಾರಂಭಗಳಿಗೆ ಬೇಸಿಗೆಯ ಈ ಸಂದರ್ಭದ ಕೆಲವು ತಿಂಗಳುಗಳು ಮಾತ್ರ ಲಭ್ಯವಾಗುತ್ತದೆ. ಆದರೆ 2020ರ ಬೇಸಿಗೆಯಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ಪ್ರಸ್ತುತದ ಜನತೆ ಈ ಹಿಂದೆಂದೂ ಅನುಭವಿಸಿದ ನೆನಪುಗಳಿಲ್ಲ.ಇಡೀ ದೇಶವೇ ಕೊರೊನಾದಿಂದಾಗಿ ಬುಡಮೇಲಾದಂತಿದ್ದು, ತಿಂಗಳಿಗೂ ಅಧಿಕ ಕಾಲ ‘ಲಾಕ್‍ಡೌನ್’ ಎಂಬ ನಿರ್ಬಂಧಕ್ಕೆ ಒಳಗಾಗಿದ್ದು, ಇದರಿಂದ ಕೊಡಗೂ ಹೊರತಾಗಿಲ್ಲ. ಮಾರ್ಚ್ ಎರಡನೆಯ ವಾರದಿಂದಲೇ ಈ ಸನ್ನಿವೇಶ ಉಂಟಾಗಿದ್ದು, ಲಾಕ್‍ಡೌನ್ ಇದೀಗ ಮೇ 3ರ ತನಕವೂ ವಿಸ್ತರಿಸಲ್ಪಟ್ಟಿದೆ. ಈ ಅವಧಿಯ ಬಳಿಕವೂ ಇನ್ನೇನಾಗಲಿದೆ ಎಂಬುದು ಯಾರಿಗೂ ಖಚಿತತೆ ಇಲ್ಲವಾಗಿದೆ.ಇತರೆಡೆಗಳಿಗಿಂತ ವಿಭಿನ್ನ ಕೊಡಗು ಪ್ರಾಕೃತಿಕವಾಗಿ ಹಾಗೂ ಭೌಗೋಳಿಕವಾಗಿ ಇತರೆಡೆಗಳಿಗಿಂತ ವಿಭಿನ್ನವಾದದ್ದು. ಇಲ್ಲಿ ಬಹುತೇಕ ಜೂನ್ ತಿಂಗಳಿನಿಂದ ಸೆಪ್ಟೆಂಬರ್ - ಅಕ್ಟೋಬರ್ ತನಕವೂ ಮಳೆಗಾಲ ಕಂಡುಬರುತ್ತದೆ. ಪ್ರಸ್ತುತ ವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಕೊರೊನಾದಿಂದಾಗಿ ಅಗತ್ಯತೆ ಯಾವುದೇ ಕೆಲಸ - ಕಾರ್ಯಗಳು, ಇನ್ನಿತರ ಚಟುವಟಿಕೆಗಳು ನಡೆಯದಂತಾಗಿವೆ. ಇದೀಗ ಮೇ 3ರ ತನಕ ಲಾಕ್‍ಡೌನ್ ಮುಂದುವರೆದಿದ್ದು, ಒಂದು ವೇಳೆ ಇದು ತೆರವುಗೊಂಡರೂ ಮಳೆಗಾಲ ಆರಂಭದ
(ಮೊದಲ ಪುಟದಿಂದ) ಸಮಯಕ್ಕೆ ಸಿಗುವ ಕಾಲಾವಕಾಶ ಕೆಲವು ದಿನಗಳು ಮಾತ್ರ. ಕೊರೊನಾ ಪರಿಸ್ಥಿತಿ ನಿಭಾಯಿಸಲು ಪ್ರಯಾಸದ ಪ್ರಯತ್ನ ಮುಂದುವರಿಸಿರುವ ಜಿಲ್ಲಾಡಳಿತಕ್ಕೆ ತಕ್ಷಣವೇ ಮತ್ತೊಂದು ಸವಾಲೂ ಖಚಿತ. ಏಕೆಂದರೆ ಕಳೆದ ಎರಡು ವರ್ಷ ಜಿಲ್ಲೆ ಸತತವಾಗಿ ಪ್ರಾಕೃತಿಕ ದುರಂತವನ್ನು ಕಂಡಿದ್ದು, ಈ ವರ್ಷವೂ ಮಳೆಗಾಲದ ಆಗಮನವೆಂದರೆ ಜನತೆಗೆ ಈಗಿನಿಂದಲೇ ಆತಂಕ ಆವರಿಸುತ್ತಿದೆ. ಕೊರೊನಾದ ಸನ್ನಿವೇಶದ ನಡುವೆ ಜಿಲ್ಲಾಡಳಿತ ಇದಕ್ಕೂ ಸಜ್ಜಾಗಬೇಕಿದೆ. ಈಗಾಗಲೇ ಕಳೆದ ವರ್ಷದಂತೆ ಮಳೆಗಾಲಕ್ಕೆ ಮುನ್ನೆಚ್ಚರಿಕೆಯಾಗಿ ಎನ್.ಡಿ.ಆರ್.ಎಫ್. (ವಿಪತ್ತು ನಿರ್ವಹಣಾ ತಂಡ) ತಂಡವನ್ನು ಮೇ ತಿಂಗಳಿನಲ್ಲಿಯೇ ಜಿಲ್ಲೆಗೆ ವ್ಯವಸ್ಥೆ ಮಾಡಲು ಕೋರಿ ಸರಕಾರಗಳೊಂದಿಗೆ ವ್ಯವಹರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿರುವ ಪೊಲೀಸ್ ತಂಡವನ್ನು ಇದಕ್ಕಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರೂ ದೂರದೃಷ್ಟಿತ್ವದೊಂದಿಗೆ ತಾಲೀಮು ನಡೆಸಲು ಸಜ್ಜುಗೊಳಿಸುತ್ತಿದ್ದಾರೆ. ದುರಂತಗಳ ಸರಮಾಲೆಯೇ ಎದುರಾಗುತ್ತಿರುವುದು ವಿಪರ್ಯಾಸವೆಂಬಂತಾಗಿದ್ದು, ಕೊರೊನಾ ಸಂಕಷ್ಟದ ನಡುವೆಯೇ ಮಳೆಗಾಲದ ಆಗಮನವೂ ಜಿಲ್ಲೆಯ ಜನತೆ ಹಾಗೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೂ ಮತ್ತೊಂದು ಸವಾಲಾಗಲಿದೆ. -ಶಶಿ ಸೋಮಯ್ಯ