ಮಡಿಕೇರಿ, ಏ. 18: ಪಡಿತರ ವ್ಯವಸ್ಥೆಯಡಿ ಅಕ್ಕಿ, ಗೋಧಿಯನ್ನು ಮಾತ್ರ ವಿತರಿಸಲಾಗುತ್ತಿದ್ದು, ಕುಟುಂಬವೊಂದಕ್ಕೆ ಅಗತ್ಯವಾದ ಬೆÉೀಳೆಕಾಳು ಸೇರಿದಂತೆ ಎಲ್ಲ ಸಾಮಗ್ರಿ ಒಳಗೊಂಡ ಆಹಾರದ ಕಿಟ್‍ಗಳನ್ನು ಜಿಲ್ಲೆಯ ಪ್ರತಿ ಬಡ, ಕಾರ್ಮಿಕ ಕುಟುಂಬಕ್ಕೆ ತಲುಪಿಸುವ ಕಾರ್ಯ ನಡೆಯಬೇಕಿದೆ. ಇದಕ್ಕಾಗಿ ಜಿಲ್ಲೆಯ ಇಬ್ಬರು ಶಾಸಕರುಗಳ ನೇತೃತ್ವದಲ್ಲಿ ಎಲ್ಲಾ ಪಕ್ಷಗಳು ಮತ್ತು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಒಳಗೊಂಡಂತೆ ಸಮಿತಿಯೊಂದನ್ನು ರಚಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತಕ್ಕಾದರೆ ಕಾನೂನಿನ ಮಿತಿಯಲ್ಲಷ್ಟೆ ಕಾರ್ಯ ನಿರ್ವಹಿಸಲು ಸಾಧ್ಯ. ಆದರೆ, ರಾಜಕೀಯ ರಹಿತವಾದ ಇಂತಹ ಸಮಿತಿ ರಚನೆಯಾದಲ್ಲಿ ಅಗತ್ಯ ದೇಣಿಗೆಯನ್ನು ಸಂಗ್ರಹಿಸಿ, ಪ್ರತಿ ಗ್ರಾಮಮಟ್ಟದ ಪ್ರತಿ ಬಡ ಕುಟುಂಬಕ್ಕೆ ಸಮರ್ಪಕವಾಗಿ ಆಹಾರ ಸಾಮಗ್ರಿಗಳ ಕಿಟ್ ಒದಗಿಸಲು ಸಾಧ್ಯವಿದೆ ಎಂದರು.
ಕೊರೊನಾ ಸಾಂಕ್ರಾಮಿಕ ರೋಗ ಲಾಕ್‍ಡೌನ್ ಮೂಲಕ ನಿಯಂತ್ರಣಕ್ಕೆ ಬಂದಿರಬಹುದಾದರೂ, ಇದರ ನಡುವೆ ಅಗತ್ಯ ಕೆಲಸ ಕಾರ್ಯಗಳಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಬಡವರ್ಗದ ಮಂದಿಯ ಪ್ರತಿ ಮನೆ ಮನೆಗಳಿಗೆ ತೆರಳಿ ಆಹಾರದ ಕಿಟ್ ತಲುಪಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು. ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಆಹಾರ ದೊರಕಿ ಸುವ ಕಾರ್ಯ ನಡೆಯಬೇಕೆಂದು ತಿಳಿಸಿದರು.
ಮನೆಯಲ್ಲೆ ರಂಜಾನ್
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ತಾ. 24 ರಿಂದ ರಂಜಾನ್ ಉಪವಾಸ ಆರಂಭವಾಗಲಿದೆ. ಈ ಹಂತದಲ್ಲಿ ಮುಸ್ಲಿಂ ಬಾಂಧವರು ಯಾವುದೇ ಕಾರಣಕ್ಕೂ ಹಬ್ಬಾಚರಣೆಯ ಹಿನ್ನೆಲೆ ಬೀದಿಗಿಳಿಯದೆ, ತಮ್ಮ ಪ್ರಾರ್ಥನೆ ಮೊದಲಾದವುಗಳನ್ನು ಮನೆಯಲ್ಲೆ ಮಾಡಿಕೊಳ್ಳುವ ಮೂಲಕ, ಸರ್ಕಾರದ ಆದೇಶಗಳನ್ನು ಗೌರವಿಸಿ, ಪಾಲಿಸ ಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಸುನಿಲ್ ಹಾಗೂ ಮಹಿಳಾ ಘಟಕದ ಕಾರ್ಯದರ್ಶಿ ಲೀಲಾ ಶೇಷಮ್ಮ ಉಪಸ್ಥಿತರಿದ್ದರು.