ಮಡಿಕೇರಿ, ಏ.18: ವಿವಿಧ ಇಲಾಖೆ ವ್ಯಾಪ್ತಿಯ ಸ್ಥಗಿತಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಕೂಡಲೇ ಆರಂಭಿಸುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯ ಸ್ಥಗಿತಗೊಂಡಿರುವ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‍ಗಳಿಂದ ಶನಿವಾರ ಮಾಹಿತಿ ಪಡೆದು ಅವರು ಮಾತನಾಡಿದರು. ಕಟ್ಟಡ ಕಾರ್ಮಿಕರನ್ನು ಹೊರ ಜಿಲ್ಲೆಯಿಂದ ಅಥವಾ ಸ್ಥಳೀಯವಾಗಿ ಕರೆದುಕೊಂಡು ಬರುವಾಗ ಸರಿಯಾದ ಮಾರ್ಗದರ್ಶನ ಅನುಸರಿಸಬೇಕು. ಬಂದ ನಂತರ ಸ್ಕ್ರೀನಿಂಗ್ ಮಾಡಬೇಕು. ಕಟ್ಟಡ ಕಾಮಗಾರಿ ಕಾರ್ಮಿಕರಿಗೆ ಸ್ಥಳದಲ್ಲಿಯೇ ವಾಸಿಸಲು ವ್ಯವಸ್ಥೆ ಮಾಡಬೇಕು. ಜೊತೆಗೆ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜೂನ್ ನಂತರ ಮಳೆಗಾಲ ಆರಂಭವಾಗುವುದರಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೊರ ಜಿಲ್ಲೆಯಿಂದ ಅಥವಾ ಹೊರ ರಾಜ್ಯದಿಂದ ಬರುವ ಕಚ್ಛಾ ವಸ್ತುಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಂದ ವಾಹನ ಪಾಸ್ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದರು. ಹೊರ ಜಿಲ್ಲೆಯಿಂದ ಸಿಮೆಂಟ್, ಕಬ್ಬಿಣ, ವಿದ್ಯುತ್ ಕಂಬ ಮತ್ತಿತರ ಕಚ್ಛಾ ವಸ್ತುಗಳನ್ನು ತರಿಸಬೇಕಿದೆ. ಜೊತೆಗೆ ಹೊರ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳಬೇಕಿದ್ದು ಇದಕ್ಕಾಗಿ ವಾಹನ ಪಾಸ್ ವ್ಯವಸ್ಥೆ ಮಾಡಬೇಕಾಗಿ ಲೋಕೋಪಯೋಗಿ ಇಲಾಖೆ ಇಇ ಮಧುಸೂದನ್, ಜಿಲ್ಲಾ ಪಂಚಾಯತ್ ಇಇ ಪ್ರಭು, ಸೆಸ್ಕ್ ಇಇ ಸೋಮಶೇಖರ, ಕುಡಿಯುವ ನೀರು ವಿಭಾಗದ ಇಇ ರೇವಣ್ಣನವರ್ ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಲೋಕೋಪಯೋಗಿ ಇಲಾಖೆಯ ಎಇಇ ಶಿವರಾಂ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ರಾಘವೇಂದ್ರ, ಕೆಆರ್‍ಐಡಿಎಲ್ ಇಂಜಿನಿಯರ್, ಅನನ್ಯ ವಾಸುದೇವ ಇತರರು ಇದ್ದರು.