ಮಡಿಕೇರಿ, ಏ.19 : ತಾಲೂಕಿನ ಬೆಟ್ಟಗೇರಿ ಸಮೀಪದ ಕಾಡಲೇರ್ ಕೆ.ಎಸ್. ಆನಂದ ಇವರ ಲೈನ್ ಮನೆಯಲ್ಲಿರುವ ನಂಜನಗೂಡಿನ 1 ಮತ್ತು ತಮಿಳುನಾಡಿನ 9 ಕಾರ್ಮಿಕರು ಊರಿಗೆ ಹೋಗಬೇಕು ಎಂದು ತಿಳಿಸಿದ್ದರು. ಈ ಹಿನ್ನೆಲೆ ತಕ್ಷಣ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಸಮಾಧಾನಪಡಿಸಿ ಕೋವಿಡ್-19 ರ ಕುರಿತು ತಿಳಿಸಿ ಮೇ 3 ರವರೆಗೆ ಸದ್ಯದ ಸ್ಥಳದಲ್ಲಿ ಇರುವಂತೆ ಮನವರಿಕೆ ಮಾಡಿದ್ದಾರೆ.

ಜೊತೆಗೆ ಕಾರ್ಮಿಕರೆಲ್ಲರಿಗೂ ಮಾಸ್ಕ್, ಹ್ಯಾಂಡ್‍ವಾಶ್, ಸೋಪ್ ಮತ್ತು ಸ್ಯಾನಿಟೈಸರ್ ವಿತರಿಸಿ ತೋಟದ ಮಾಲೀಕರಿಗೆ ಕಾರ್ಮಿಕರನ್ನು ಕಾಳಜಿಯಿಂದ ನೋಡಿಕೊಳ್ಳಲು ತಿಳಿಸಲಾಗಿದೆ.

ನಂತರ ಮಡಿಕೇರಿಯ ಅಗ್ನಿಶ್ಯಾಮಕ ಠಾಣೆಗೆ ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಭೇಟಿ ನೀಡಿ, ಮಾಸ್ಕ್, ಹ್ಯಾಂಡ್‍ವಾಶ್, ಸೋಪ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರು ಮಾಹಿತಿ ನೀಡಿದ್ದಾರೆ. ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಹೆಚ್.ಆರ್. ಮುರಳೀಧರ್ ಇತರರು ಇದ್ದರು.