ಸೋಮವಾರಪೇಟೆ, ಏ.19: ಇಲ್ಲಿನ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಮಡಿಕೇರಿಯ ಡಾ. ಬಿ.ಸಿ. ನವೀನ್‍ಕುಮಾರ್ ನೇತೃತ್ವದ ವೈದ್ಯರುಗಳ ತಂಡದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.

ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 33 ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ರಕ್ತ ಪರೀಕ್ಷೆ, ರಕ್ತದೊತ್ತಡ ಸೇರಿದಂತೆ ಇತರ ಸಾಮಾನ್ಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.

ಕೆಲ ಪೌರಕಾರ್ಮಿಕರು ಮಧುಮೇಹ ರೋಗದಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದರು. ಸೋಮವಾರಪೇಟೆ ಜನೌಷಧಿ ಮಳಿಗೆಯ ಮಂಜುನಾಥ್ ಅವರು ಪೌರಕಾರ್ಮಿಕರಿಗೆ ಔಷಧಿ, ಮಾತ್ರೆಗಳನ್ನು ಉಚಿತವಾಗಿ ವಿತರಿಸಿದರು. ಮಡಿಕೇರಿ ಮೆಡಿಕಲ್ ಕಾಲೇಜಿನ ಡಾ. ಪುರುಷೋತ್ತಮ್ ಚಿಕಿತ್ಸೆ ನೀಡಿದರು. ಈ ಸಂದರ್ಭ ಪ.ಪಂ. ಮುಖ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.