ಮಡಿಕೇರಿ, ಏ. 19: ಕೊರೊನಾ ಲಾಕ್‍ಡೌನ್‍ನಂತಹ ಕ್ಲಿಷ್ಟಕರ ಸನ್ನಿವೇಶದಿಂದಾಗಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಯೋಧರೊಬ್ಬರು ತಮ್ಮ ಹೆತ್ತಾಕೆಯ ಅಂತಿಮ ದರ್ಶನಕ್ಕೆ ತಲುಪಲಾಗದಂತಹ ದುಃಖದ ಘಟನೆಯೊಂದು ನಡೆದಿದೆ.

ಕುಂಜಿಲಗೇರಿ ಬೊಳ್ಳುಮಾಡು ವಿನ ಸೇನಾ ಕುಟುಂಬವೊಂದಕ್ಕೆ ಎದುರಾದ ಪರಿಸ್ಥಿತಿ ಇದಾಗಿದೆ. ಬಿಎಸ್‍ಎಫ್‍ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಬಟ್ಟಕಾಳಂಡ ತಿಮ್ಮಯ್ಯ (ಚಿಮ್ಮ) ಅವರ ಪತ್ನಿ ಗಿಣಿ ಗಂಗಮ್ಮ (69) ತಾ. 18 ರಂದು ರಾತ್ರಿ ನಿಧನರಾಗಿದ್ದರು. ಈ ದಂಪತಿಗಳ ಇಬ್ಬರು ಪುತ್ರರೂ ಭಾರತೀಯ ಸೇನೆಯಲ್ಲಿ ಯೋಧರಾಗಿದ್ದಾರೆ. ಇವರ ಪೈಕಿ ಓರ್ವ ಪುತ್ರರಾಗಿರುವ ನೂತನ್ ಜೋಯಪ್ಪ ಪ್ರಸ್ತುತ ಜಮ್ಮುಕಾಶ್ಮೀರ ವಲಯದ ಕಾರ್ಗಿಲ್‍ನಲ್ಲಿ 301 ಲೈಟ್ ರೆಜಿಮೆಂಟ್‍ನಲ್ಲಿ ಕರ್ತವ್ಯದಲ್ಲಿದ್ದರೆ; ಮತ್ತೋರ್ವ ಪುತ್ರ ರೋಷನ್ ಕಾಳಪ್ಪ ಪಂಜಾಬ್‍ನ ಫಿರೋಜ್‍ಪುರದಲ್ಲಿ 37 ಕೂರ್ಗ್ ರೆಜಿಮೆಂಟ್‍ನಲ್ಲಿದ್ದಾರೆ.

ಒಂದು ರೀತಿಯಲ್ಲಿ ಅದೃಷ್ಟವೆಂಬಂತೆ ರೋಷನ್ ಕಾಳಪ್ಪ ಕಳೆದ ಒಂದೂವರೆ ತಿಂಗಳ ಹಿಂದೆ ರಜೆಯಲ್ಲಿ ಮನೆಗೆ ಆಗಮಿಸಿದ್ದು; ಬಳಿಕ ಲಾಕ್‍ಡೌನ್‍ನಿಂದಾಗಿ ಕರ್ತವ್ಯಕ್ಕೆ ಮರಳಲು ಸಾಧ್ಯವಾಗದ ಕಾರಣ ಇಲ್ಲೇ ಉಳಿಯುವಂತಾಗಿದ್ದು; ಇವರಿಗೆ ಮಾತ್ರ ತಾಯಿಯ ಅಂತಿಮ ವಿಧಿ - ವಿಧಾನದ ಅವಕಾಶ ಸಿಕ್ಕಿದೆ. ಈ ಸೇನಾ ಕುಟುಂಬದ ಹೆಮ್ಮೆಯ ಮಾತೆ, ನಿನ್ನೆ ರಾತ್ರಿ ವಯೋಸಹಜ ವಾಗಿ ಅಸುನೀಗಿದ್ದು; ಇವರ ಅಂತ್ಯಕ್ರಿಯೆಗೆ ಓರ್ವ ಪುತ್ರ ಮಾತ್ರ ಪಾಲ್ಗೊಳ್ಳುವಂತಾಗಿತ್ತು.

ಕಾರ್ಗಿಲ್‍ನಲ್ಲಿರುವ ನೂತನ್ ಜೋಯಪ್ಪ ಅವರಿಗೆ ಸುದ್ದಿ ತಲುಪಿದರೂ; ವಿಮಾನವಾಗಲಿ, ರೈಲು ಸಂಚಾರವಾಗಲಿ ಇಲ್ಲದ ಕಾರಣ ಅನುಮತಿಯೊಂದಿಗೂ ಪಾಲ್ಗೊಳ್ಳಲು ಅಸಾಧ್ಯವಾಗಿದೆ. ಈ ಶೋಕದ ನಡುವೆ ಇಂದು ಮೃತೆ ಗಿಣಿ ಗಂಗಮ್ಮ ಅವರ ಅಂತ್ಯಕ್ರಿಯೆ ನಡೆಸಲಾಯಿತು.