ನಾಪೋಕ್ಲು, ಏ. 19 : ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಿಎಚ್‍ಒ ಡಾ.ಕೆ.ಮೋಹನ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥ ಚಂಡೀರ ದೇವರಾಜ್ ಇಲ್ಲಿನ ಆರೋಗ್ಯಾಧಿಕಾರಿಗಳ ವಿರುದ್ದ ದೂರು ನೀಡಿದ್ದರೆನ್ನಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ರೋಗಿಗಳು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದರೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತಗೊಂಡಿತ್ತು. ವೈದ್ಯಾಧಿಕಾರಿ ಮೋಹನ್ ಪ್ರತಿಕ್ರಿಯಿಸಿ ಸಂತೆಯ ದಿನ ಹಾಗೂ ಇತರ ದಿನಗಳಲ್ಲಿ ಅಧಿಕ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಕೊರೊನಾ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗುತ್ತಿದೆ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಂದ ರೋಗಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ನಾಳೆಯಿಂದ ಪೋಲಿಸರ ನಿಯಂತ್ರಣದಲ್ಲಿ ರೋಗಿಗಳ ತಪಾಸಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮನ್ಸೂರ್ ಆಲಿ ಮಾತನಾಡಿ, ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಜನರಿಗೆ ಸ್ಪಂದಿಸಬೇಕು ಎಂದರು.
-ದುಗ್ಗಳ