ಯುವ ಪತ್ರಕರ್ತರಿಬ್ಬರಿಗೆ ಕೊರೊನಾ

ಚೆನ್ನೈ, ಏ. 19: ಸಮಾಜದ ಆಗುಹೋಗುಗಳನ್ನು ಸುದ್ದಿ ಮಾಡುವ ಪತ್ರಕರ್ತರಿಗೂ ಇದೀಗ ಕೊರೊನಾ ಸೋಂಕು ತಗುಲಿದೆ. ತಮಿಳು ನಾಡಿನ ಚೆನ್ನೈಯಲ್ಲಿ 24-25 ವರ್ಷದ ಯುವ ಪತ್ರಕರ್ತರಿಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಚೆನ್ನೈ ನಗರಕ್ಕೆ ಸಂಬಂಧಿಸಿದ, ಪಾಲಿಕೆ ವಿಷಯಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತನನ್ನು ಇತ್ತೀಚೆಗೆ ಕೋವಿಡ್-19ಗೆ ಸಂಬಂಧಿಸಿದ ಸುದ್ದಿಗಳ ವರದಿ ಮಾಡಲು ನಿಯೋಜಿಸಲಾಗಿತ್ತು. ಇವರು ತಮಿಳು ದೈನಿಕ ಪತ್ರಿಕೆಯ ವರದಿಗಾರರಾಗಿದ್ದು ಚೆನ್ನೈ ಪಕ್ಕದ ಟ್ರಿಪ್ಲಿಕೇನ್ ಹತ್ತಿರ ನೆಲೆಸಿದ್ದಾರೆ. ಇತ್ತೀಚೆಗೆ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಗಳಿಗೆ ಮತ್ತು ಕೋವಿಡ್-19ಗೆ ಸಂಬಂಧಿಸಿದ ಸುದ್ದಿಗಳಿಗೆ ಸಂಬಂಧಪಟ್ಟ ಕಡೆ ಹೋಗಿ ಬರುತ್ತಿದ್ದರು. ಆದರೆ ಯಾವುದೇ ಕೊರೊನಾ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವುದು ತಿಳಿದುಬಂದಿಲ್ಲ ಎಂದು ಚೆನ್ನೈ ಮಹಾ ನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಟ್ರಿಪ್ಲಿಕೇನ್‍ನಲ್ಲಿ ಇದೇ ಮೊದಲ ಕೊರೋನಾ ಪ್ರಕರಣವಾಗಿದೆ. ತಾವು ವರದಿ ಮಾಡುತ್ತಿದ್ದ ಸಮಯದಲ್ಲಿ ಈ ಪತ್ರಕರ್ತ ರಿಪೊನ್ ಕಟ್ಟಡಕ್ಕೆ ಆಗಾಗ ಹೋಗಿಬರುತ್ತಿದ್ದರು. ಕೊರೊನಾ ಸೋಂಕಿನ ಲಕ್ಷಣ ಬಂದ ಕೂಡಲೇ ಅವರಾಗಿಯೇ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

369 ರೋಹಿಂಗ್ಯಾಗಳ ಪತ್ತೆಗೆ ಕ್ರಮ

ಲಕ್ನೋ, ಏ. 19: ಮಾರ್ಚ್ ಮಧ್ಯದಲ್ಲಿ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾಅತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ 369 ರೋಹಿಂಗ್ಯಾ ಮುಸ್ಲಿಮರನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಪೊಲೀಸರು ಎಂಟು ಜಿಲ್ಲೆಗಳಲ್ಲಿ ಲುಕ್‍ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಅಲಿಘಡ, ಮಥುರಾ, ಕಾನ್ಪುರ್, ಮೀರತ್, ಮುಜಫ್ಫರ್‍ನಗರ, ಸಹರಾನ್‍ಪುರ, ಫಿರೋಜಾಬಾದ್ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಗಳಿಗೆ ರಾಜ್ಯ ಡಿಜಿಪಿ ಕಚೇರಿಯಿಂದ ಎಸ್‍ಒಎಸ್ ಕಳುಹಿಸಲಾಗಿದೆ.

ಸೋಂಕಿನಿಂದ ಬಂಟ್ವಾಳದ ಮಹಿಳೆ ಸಾವು

ಮಂಗಳೂರು, ಏ. 19: ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಸುಮಾರು 45 ವರ್ಷ ಪ್ರಾಯದ ಮಹಿಳೆಯೊಬ್ಬರು ರವಿವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗಾಗಿ ಜಿಲ್ಲೆಯಲ್ಲಿ ಕೊರೊನಾಗೆ ಇದು ಮೊದಲ ಬಲಿಯಾಗಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಈ ಮಹಿಳೆಗೆ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್‍ಗೆ ದಾಖಲಿಸಲಾಗಿತ್ತು. ಅವರ ಗಂಟಲಿನ ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಬಂದಿದ್ದು, ಈ ಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಮನುಷ್ಯನ ಸೃಷ್ಟಿ

ಪ್ಯಾರಿಸ್, ಏ. 19: ಕೊರೊನಾ ವೈರಸ್ ಮನುಷ್ಯನ ಸೃಷ್ಟಿ ಎಂಬ ಆರೋಪವನ್ನು ಫ್ರೆಂಚ್ ವೈರಾಲಜಿಸ್ಟ್ ಮಾಡಿದ್ದಾರೆ. ಏಡ್ಸ್ ವೈರಸ್‍ಗೆ ಸಂಬಂಧಿಸಿದಂತೆ ನಡೆದ ಸಂಶೋಧನೆಯಲ್ಲಿ ಸಹ-ಸಂಶೋಧಕರಾಗಿದ್ದ ಪ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ ಈ ಆರೋಪ ಮಾಡಿದ್ದಾರೆ. 2008 ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈಗ ಕೊರೊನಾ ವೈರಸ್ ಬಗ್ಗೆ ಮಾತನಾಡಿರುವ ಮೊಂಟಾಗ್ನಿಯರ್, ಚೀನಾದ ಪ್ರಯೋಗಾಲಯದಲ್ಲಿ ಏಡ್ಸ್ ವೈರಸ್‍ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ಈ ವೈರಸ್ ನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಇದು ನೈಸರ್ಗಿಕವಾಗಿ ಉತ್ಪತ್ತಿಯಾಗಿರುವ ವೈರಸ್ ಅಲ್ಲ. ಮಾನವ ಸೃಷ್ಟಿ ವೈರಸ್ ಎಂದು ಹೇಳಿದ್ದಾರೆ. ಪ್ರೆಂಚ್‍ನ ಸುದ್ದಿವಾಹಿನಿಯೊಂದು ನಡೆಸಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಲ್ಯೂಕ್ ಮೊಂಟಾಗ್ನಿಯರ್, ಕೊರೊನಾ ವೈರಸ್‍ನ ಜೀನೋಮ್ (ಜೀವಕೋಶಗಳ ಗುಚ್ಛ)ದಲ್ಲಿ ಹೆಚ್‍ಐವಿ ಅಂಶಗಳು, ಮಲೇರಿಯಾ ವೈರಾಣು ಇರುವುದು ಪತ್ತೆಯಾಗಿದೆ. ಇದು ಸ್ವಾಭಾವಿಕವಾಗಿ ಕಾಣಲು ಸಾಧ್ಯವಿಲ್ಲ ಆದ್ದರಿಂದ ಕೊರೊನಾ ವೈರಸ್‍ನ ಜೀನೋಮ್ ಅತ್ಯಂತ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸುಧಾಮೂರ್ತಿ ನೆರವು

ಬೆಂಗಳೂರು, ಏ. 19: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಸಹಸ್ರಾರು ಕಾರ್ಮಿಕರು ಹಾಗೂ ಕಲಾವಿದರ ನೆರವಿಗೆ ಇನ್ಫೋಸಿಸ್, ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಮುಂದಾಗಿದ್ದಾರೆ. ಸಿನಿಮಾ ಕಾರ್ಮಿಕರ 18 ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕರುಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ಇನ್ಫೋಸಿಸ್ ಫೌಂಡೇಶನ್ ವಿತರಿಸುತ್ತಿದ್ದು, ಈ ಕಾರ್ಯಕ್ಕೆ ನಗರದ ಬನಶಂಕರಿ ಪೋಸ್ಟ್ ಆಫೀಸ್ ಬಳಿ ಚಾಲನೆ ನೀಡಲಾಯಿತು. ನಿರ್ಮಾಪಕ ರಮೇಶ್ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು, ಕಾರ್ಮಿಕರ ಸಂಘದ ಉಪಾಧ್ಯಕ್ಷ ರವಿ ಶಂಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಅವಕಾಶ

ನವದೆಹಲಿ, ಏ. 19: ಲಾಕ್‍ಡೌನ್‍ನಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ, ಕೆಲವು ಷರತ್ತುಗಳೊಂದಿಗೆ ರಾಜ್ಯದೊಳಗೆ ಆಯಾ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಆದಾಗ್ಯೂ, ಮೇ ರವರೆಗೂ ವಿಸ್ತರಣೆಯಾಗಿರುವ ಲಾಕ್‍ಡೌನ್ ವೇಳೆಯಲ್ಲಿ ಅಂತರ್ ರಾಜ್ಯಗಳ ನಡುವೆ ಸಂಚರಿಸಲು ಕಾರ್ಮಿಕರಿಗೆ ಅವಕಾಶ ನೀಡಿಲ್ಲ ಎಂದು ಗೃಹ ಕಾರ್ಯದರ್ಶಿ ಅಜಯ್ ಬಲ್ಲಾಳ್ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ಹರಡುವಿಕೆ ಕಾರಣದಿಂದ ಕೈಗಾರಿಕೆಗಳು, ಕೃಷಿ, ನಿರ್ಮಾಣ ಮತ್ತಿತರ ವಲಯಗಳ ಕೆಲಸಗಾರರು ತಾವು ಮಾಡುತ್ತಿದ್ದ ಕೆಲಸದ ಸ್ಥಳದಿಂದ ಹೊರಹೋಗಿದ್ದು, ತಮ್ಮ ಮನೆಗಳು ಅಥವಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ತೆರೆದಿರುವ ಪರಿಹಾರ ಶಿಬಿರಗಳಲ್ಲಿ ಇದ್ದಾರೆ ಎಂದು ಬಲ್ಲಾಳ್ ಆದೇಶದಲ್ಲಿ ತಿಳಿಸಿದ್ದಾರೆ.

ಚರಂಡಿಯಲ್ಲಿ ಕಲ್ಲಂಗಡಿ ತೊಳೆದವರ ಬಂಧನ

ಚಿಕ್ಕೋಡಿ, ಏ. 19: ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ನಿಪ್ಪಾಣಿಯ ಬಸವೇಶ್ಚರ ಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಪಟ್ಟಣದ ಭೋಪಳೆ ಗಲ್ಲಿಯ ಶಾಬಾಜ್ ಮುನ್ನಾ ಸತಾರಿ (20) ಹಾಗೂ ರಿಯಾನ್ ಆಯಾಜ್ ಮಡ್ಡೆ (19) ಬಂಧಿತರು. ಈ ಯುವಕರು ಕಲ್ಲಂಗಡಿ ಹಣ್ಣುಗಳನ್ನ ಚರಂಡಿಯಲ್ಲಿ ತೊಳೆದು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋವನ್ನು ನೋಡಿದ್ದ ನಿಪ್ಪಾಣಿಯ ಕೆಲವರು ಆರೋಪಿಗಳನ್ನು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳು ಈ ಕೃತ್ಯವನ್ನು ಮಾರ್ಚ್ 28 ರಂದು ಎಸಗಿದ್ದು, ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬಸವೇಶ್ವರ ಚೌಕ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿ ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.

ಗುರುದ್ವಾರದಲ್ಲಿನ ಗುಮ್ಮಟ ಕುಸಿತ

ನವದೆಹಲಿ, ಏ. 19: ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ ಸಾಹೀಬ್ ಗುರುದ್ವಾರದಲ್ಲಿನ ಗುಮ್ಮಟ ಕುಸಿತ ವಿಚಾರವನ್ನು ಭಾರತ ಪಾಕಿಸ್ತಾನದ ಗಮನಕ್ಕೆ ತಂದಿದೆ ಎಂಬುದು ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ. ಗುರುದ್ವಾರದಲ್ಲಿನ ಗುಮ್ಮಟ ಕುಸಿತ ಸಿಖ್ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದೆ. ಸಿಖ್ ಸಮುದಾಯದ ಭಾವನೆಗಳಿಗೆ ಅನುಗುಣವಾಗಿ, ಹೊಸದಾಗಿ ನಿರ್ಮಿಸಲಾದ ರಚನೆಗಳಿಗೆ ಹಾನಿಯಾಗಲು ಕಾರಣವಾದ ನ್ಯೂನತೆಗಳನ್ನು ತುರ್ತಾಗಿ ಸರಿಪಡಿಸಿ ಪರಿಹಾರ ನೀಡಬೇಕೆಂದು ಭಾರತ ಪಾಕಿಸ್ತಾನವನ್ನು ಒತ್ತಾಯಿಸಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಭಾರತದಲ್ಲಿನ ಗುರುದಾಸ್ ಪುರದ ದೇರಾ ಬಾರಾ ಸಾಹೀಬ್ ಮತ್ತು ಪಾಕಿಸ್ತಾನದ ಕರ್ತಾರ್‍ಪುರ ಸಾಹೀಬ್ ಗುರುದ್ವಾರ ನಡುವಣ ಸಂಪರ್ಕ ಕಲ್ಪಿಸುವ ಕಾರಿಡಾರ್‍ನ್ನು ಉಭಯ ರಾಷ್ಟ್ರಗಳ ನಡುವಣ ಒಪ್ಪಂದದಿಂದ ಪ್ರಾರಂಭಿಸಲಾಗಿದೆ.