ನಾಪೆÇೀಕ್ಲು, ಏ. 19 : ಪಟ್ಟಣದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ವಾರದ 3 ದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೂ ಕೂಡ ದಿನದಿಂದ ದಿನಕ್ಕೆ ಜನ ದಟ್ಟಣೆ, ವಾಹನ ದಟ್ಟಣೆ ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಸಾರ್ವಜನಿಕರು ಲಾಕ್ಡೌನ್ ಹಿನ್ನಲೆಯಲ್ಲಿ ಹಲವು ದಿನಗಳಿಗೆ ಆಗುವ ಅಗತ್ಯ ವಸ್ತುಗಳನ್ನು ಒಮ್ಮೆಲೇ ಖರೀದಿಸುವ ಬದಲು ವಾರದ ಮೂರು ದಿನಗಳು ಪಟ್ಟಣಕ್ಕೆ ಆಗಮಿಸುತ್ತಿರುವದು ಆತಂಕಕಾರಿ ಬೆಳವಣಿಗೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜನಧನ್ ಖಾತೆದಾರರಿಗೆ ನೀಡಿದ 500 ರೂ. ಪಡೆಯಲು ಬ್ಯಾಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿರುವದು ಕಂಡು ಬರುತ್ತಿದೆ. ಕೂಡಲೇ ಬ್ಯಾಂಕಿನಿಂದ ಹಣ ಡ್ರಾಗೊಳಿಸದಿದ್ದರೆ ಹಣವನ್ನು ವಾಪಾಸು ಪಡೆಯಲಾಗುತ್ತದೆ ಎಂಬ ಸುಳ್ಳು ಸುದ್ದಿ ಹರಡಿರುವ ಕಾರಣ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವದಾಗಿ ತಿಳಿದು ಬಂದಿದೆ. ಉಳಿದಂತೆ ಮೀನು, ಮಾಂಸ, ತರಕಾರಿಗಳ ಖರೀದಿ ಭರದಿಂದ ನಡೆಯಿತು.