ನಾಪೋಕ್ಲು, ಏ. 19: ಇಲ್ಲಿನ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ಗುರುವಾರ ನೆರವೇರಿಸಲಾಯಿತು. ಡಾ. ನವೀನ್ ಕುಮಾರ್ ಮತ್ತು ತಂಡದವರು ಜಿಲ್ಲಾದ್ಯಂತ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ನಡೆಸುತ್ತಿದ್ದು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಮಂಚಯ್ಯ ಸೇರಿದಂತೆ 28 ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಇದಕ್ಕೂ ಮೊದಲು ಭಾಗಮಂಡಲದಲ್ಲಿ ನಡೆದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ 35 ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ವೈದ್ಯರ ತಂಡದಲ್ಲಿ ಡಾ. ಪುರುಷೋತ್ತಮ್ ಸಿ.ಎನ್. ಹಾಗೂ ಡಾ.ಕಿರಣ್ ಎಸ್.ಜಿ. ಇದ್ದರು.

ಈ ಸಂದರ್ಭ ಡಾ. ನವೀನ್ ಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಕೊರೊನಾ ಸೋಂಕಿ ನಿಂದಾಗಿ ದೇಶ ವಿಪತ್ತಿನಲ್ಲಿರುವ ಸಂದರ್ಭ ಪೌರಕಾರ್ಮಿಕರು, ವೈದ್ಯರು ಹಾಗೂ ಪೊಲೀಸರು ಅವಿರತವಾಗಿ ದುಡಿಯುತ್ತಿದ್ದು, ವಿಶೇಷವಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ಜಿಲ್ಲಾದ್ಯಂತ ನಡೆಸಿ ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗಳ ತಪಾಸಣೆ ನಡೆದಿದ್ದು, ಸಿದ್ದಾಪುರ ಠಾಣೆಯ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸುವ ಮೂಲಕ ಕಾರ್ಯಕ್ರಮ ಅಂತ್ಯ ಗೊಳ್ಳಲಿದೆ ಎಂದರು. ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನುಮುತ್ತಪ್ಪ ಮಾತನಾಡಿ, ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿ ಪೊಲೀಸರು ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿದ್ದಾರೆ. ತಜ್ಞ ವೈದ್ಯರಿಂದ ಪೊಲೀಸರ ಆರೋಗ್ಯ ತಪಾಸಣೆಯ ಕಾರ್ಯ ಸ್ತುತ್ಯಾರ್ಹ ಎಂದರು.

ಕಾರ್ಯಕ್ರಮದಲ್ಲಿ ಠಾಣಾಧಿಕಾರಿ ಮಂಚಯ್ಯ ಮತ್ತು ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಪಿಡಿಓ ಚೋಂದಕ್ಕಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.