ಸೋಮವಾರಪೇಟೆ, ಏ.19: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಬಹುತೇಕ ಕುಟುಂಬಗಳು ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಕುಟುಂಬಗಳಿಗೆ ಅಕ್ಕಿ, ಗೋದಿಯ ಜತೆಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಪ.ಪಂ. ಜನಪ್ರತಿನಿಧಿಗಳ ತಂಡ ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದೆ.
ಪಟ್ಟಣ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್‍ದಾರರಿದ್ದು, ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ಮತ್ತು ಗೋದಿಯನ್ನು ನೀಡಲಾಗುತ್ತಿದೆ. ಲಾಕ್‍ಡೌನ್‍ನಿಂದ ಎಲ್ಲಾ ಕೆಲಸ ಕಾರ್ಯಗಳೂ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಕೊಳ್ಳುವ ಶಕ್ತಿ ಇಲ್ಲವಾಗಿದೆ. ಈ ಹಿನ್ನೆಲೆ ದಿನೋಪಯೋಗಿ ಆಹಾರದ ಸಾಮಗ್ರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಮಾಡಲಾಗಿದೆ.
ವಾರ್ಡ್‍ಗಳಲ್ಲಿರುವ ಸಾರ್ವಜನಿಕರ ಸಂಕಷ್ಟವನ್ನು ಪರಿಹರಿಸಲು ಸರ್ಕಾರದ ಮಟ್ಟದಲ್ಲಿ ಕ್ರಮವಹಿಸಬೇಕೆಂದು ಸದಸ್ಯರುಗಳಾದ ನಳಿನಿ ಗಣೇಶ್, ಬಿ.ಆರ್. ಮಹೇಶ್, ಪಿ.ಕೆ. ಚಂದ್ರು, ಶುಭಕರ್, ಜೀವನ್ ಅವರುಗಳು ಮನವಿ ಮಾಡಿದ್ದಾರೆ.