ವಿಜಯಲಕ್ಷ್ಮಿ, ಜ್ಯೋತಿ, ಜಗದೀಶ, ರಾಮ, ಮಂಜುನಾಥ, ಅಶೋಕ, ಸಾಗರ್, ಅನುರಾಧ, ಭಾಗ್ಯಲಕ್ಷ್ಮಿ, ಚಕ್ರವರ್ತಿ, ಕೊಹಿನೂರು, ಸ್ವಾಮಿ, ಮಹಾರಾಜ..., ಪುಷ್ಪಕ್..... ಇವು ಕೊಡಗಿನ ಗ್ರಾಮೀಣ ಜನರ ಪಾಲಿಗೆ ಕೇವಲ ಹೆಸರುಗಳಷ್ಟೇ ಅಲ್ಲ.. ಇವು ಮನದಲ್ಲಿ ನಿತ್ಯಸ್ಮರಣೆಯ ಆಪದ್ಬಾಂಧವರು. ಕೊಡಗಿನ ಗ್ರಾಮೀಣ ಜನತೆಗೆ ಹೆಂಡತಿ ಹೆಸರು ಪಕ್ಕನೇ ನೆನಪಿಗೆ ಬರಲಿಕ್ಕಿಲ್ಲ. ಆದ್ರೆ ಇಂಥ ಹಲವು ಹೆಸರುಗಳು ಮಾತ್ರ ಮನದಿಂದ ಮರೆಯಾಗಲಿಕ್ಕಿಲ್ಲ ಎಂಬಂತೆ ಅಚ್ಚೊತ್ತಿದೆ.
ಇದು ಕೊಡಗಿನ ಗ್ರಾಮೀಣ ಸಾರಿಗೆ ಒಂದು ರೀತಿಯಲ್ಲಿ ಕೊಡಗಿನ ಜೀವನಾಡಿಗಳು. ಗಿರಿಜಿಲ್ಲೆಯಲ್ಲಿ ಖಾಸಗಿ ಬಸ್‍ಗಳು ಇಲ್ಲದೇ ಇಲ್ಲಿನ ಜನಜೀವನವನ್ನು ಊಹಿಸಲು ಸಾಧ್ಯವಿಲ್ಲ. ತಲತಲಾಂತರಗಳಿಂದ ಕೊಡಗಿನ ಜನರು ಖಾಸಗಿ ಬಸ್‍ಗಳನ್ನು ಅವಲಂಭಿಸಿದ್ದಾರೆ. ಮನೆಯಿಂದ ಪೇಟೆಗೆ ಹೋಗಲು ಖಾಸಗಿ ಬಸ್ ಬೇಕು, ಶಾಲೆ-ಕಾಲೇಜಿಗೆ ಹೋಗಲೂ ಖಾಸಗಿ ಬಸ್ ಬೇಕು, ಬಳಕುವ ರಸ್ತೆಗಳಲ್ಲಿ ಬಿಮ್ಮನೆ ಸಾಗುವ ಖಾಸಗಿ ಬಸ್‍ಗಳೆಂದರೆ ಹಳ್ಳಿಗಳ ಲಕ್ಷಾಂತರ ಜನರಿಗೆ ಇವೆಲ್ಲಾ ತಮ್ಮದೇ ಸ್ವಂತ ಬಸ್ ಎಂಬಂತಾಗಿದೆ. ಖಾಸಗಿ ಬಸ್‍ಗಳ ಡ್ರೈವರ್, ಕಂಡಕ್ಟರ್, ಕ್ಲೀನರ್‍ಗಳು ತಮ್ಮ ಮನೆಯ ಸದಸ್ಯರಂತೇ ಆಗಿಬಿಟ್ಟಿದ್ದಾರೆ.
ಕಳೆದ ಎರಡು ವರ್ಷಗಳಿಂದ ತೀವ್ರ ಸಂಕಷ್ಟದಲ್ಲಿದ್ದ ಖಾಸಗಿ ಬಸ್ ಉದ್ಯಮ ಲಾಕ್‍ಡೌನ್‍ನಿಂದಾಗಿ ಮತ್ತಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಲಾಕ್‍ಡೌನ್ ಮುಗಿದ ನಂತರವೂ ಅದೆಷ್ಟು ಬಸ್‍ಗಳು ಮತ್ತೆ ರಸ್ತೆಗಿಳಿಯು ತ್ತವೇ ಎಂಬ ಸಂಶಯ ಕಾಡುತ್ತಿದೆ. ಕೊಡಗಿನಲ್ಲಿ ಖಾಸಗಿ ಬಸ್‍ಗಳ ಕಷ್ಟಕರÀ ದಿನಗಳಿಗೆ ಅಂತ್ಯವೇ ಇಲ್ಲವೇ ? ಅನೇಕರ ಜೀವನದ ನಾನಾ ಕಥೆಗೆ ಕಾರಣವಾಗಿದ್ದ ಪ್ರತಿನಿತ್ಯ ಜಿಲ್ಲೆಯ 55,000 ಪ್ರಯಾಣಿಸುತ್ತಿದ್ದ ಕೊಡಗಿನ ಖಾಸಗಿ ಬಸ್‍ಗಳ ವ್ಯಥೆಯ ಕಥೆಯಿದು.
................
ಕೊಡಗಿನಲ್ಲಿ 2002 ರಲ್ಲಿ 212 ಖಾಸಗಿ ಬಸ್‍ಗಳಿದ್ದವು. ಆದರೆ ಹಲವು ಕಾರಣಗಳಿಂದಾಗಿ ವರ್ಷದಿಂದ ವರ್ಷಕ್ಕ ಖಾಸಗಿ ಬಸ್‍ಗಳ ಸಂಖ್ಯೆ ಕಡಿಮೆ ಯಾಗುತ್ತಾ ಹೋಯಿತು. 2018ರಲ್ಲಿ 159ಕ್ಕೆ ಕುಸಿದ ಬಸ್ ಸಂಖ್ಯೆ ಈ ವರ್ಷ ಲಾಕ್‍ಡೌನ್‍ಗೆ ಮೊದಲು 148 ಕ್ಕೆ ತಲುಪಿದೆ. ಬಸ್‍ಗಳನ್ನು ಅನಿವಾರ್ಯ ಕಾರಣಗಳಿಂದ ಸಂಚರಿಸಲು ಅಸಾಧ್ಯವಾದಲ್ಲಿ ಸಾರಿಗೆ ಇಲಾಖೆಗೆ ಅಂಥ ಬಸ್‍ಗಳನ್ನು ನಿರ್ದಿಷ್ಟ ತಿಂಗಳಿಗೆ ಸರೆಂಡರ್ ಮಾಡುವ ಅವಕಾಶವಿದೆ. ಈ ಸರೆಂಡರ್ ತಿಂಗಳಲ್ಲಿ ಬಸ್‍ಗೆ ತೆರಿಗೆ ಕಟ್ಟುವ ಅಗತ್ಯವಿಲ್ಲ. ಇದನ್ನು ಬಳಸಿಕೊಂಡ ಕೊಡಗಿನ 102 ಖಾಸಗಿ ಬಸ್‍ಗಳನ್ನು ಏಪ್ರಿಲ್ ತಿಂಗಳಲ್ಲಿ ಸರೆಂಡರ್ ಮಾಡಲಾಗಿದೆ.
ಮಲೆನಾಡು ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಹಲವಾರು ದಶಕಗಳ ಇತಿಹಾಸವಿದ್ದ ಗ್ರಾಮೀಣ ಸಹಕಾರ ಸಾರಿಗೆ ಶಂಕರ್ ಸಂಸ್ಥೆಯ 80 ಬಸ್ ಗಳು ಎರಡು ತಿಂಗಳ ಹಿಂದೆ ಸಂಚಾರ ಸ್ಥಗಿತಗೊಳಿಸಿದ್ದವು. ಅಂಥಹುದ್ದೇ ಸ್ಥಿತಿ ಕೊಡಗಿಗೂ ಬರುವ ಸಾಧ್ಯತೆ ಇಲ್ಲದಿಲ್ಲ ಎನ್ನುತ್ತಾರೆ ಕೊಡಗು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ.
ಡಿಸೇಲ್ ದರ ಹೆಚ್ಚಾದರೂ ಟಿಕೇಟ್ ಬೆಲೆ ಹೆಚ್ಚು ಮಾಡುವಂತಿಲ್ಲ. ಅಗತ್ಯ ಬಿಡಿಭಾಗಗಳ ಬೆಲೆ ತಿಂಗಳು-ತಿಂಗಳೂ ಜಾಸ್ತಿಯಾಗುತ್ತಿದೆ. ಪ್ರಯಾಣಿಕರಿಗೆ ಈ ಹೊರೆ ಹಾಕುವಂತಿಲ್ಲ. ಕಾರ್, ಜೀಪ್, ವ್ಯಾನ್‍ಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿ ಖಾಸಗಿ ಬಸ್ ಪ್ರಯಾಣಿಕರ ಸಂಖ್ಯೆ ಯಲ್ಲಿಯೂ ಭಾರೀ ಕುಸಿತ ಉಂಟಾಗಿದೆ. ಸಿಬ್ಬಂದಿ ವೇತನ ಸರ್ಕಾರದ ತೆರಿಗೆ, ವಿಮೆ ಸೇರಿದಂತೆ ಪ್ರತೀ ಬಸ್‍ಗೂ ಪ್ರತೀ ಸೀಟಿಗೆ ದಿನಕ್ಕೆ ಕನಿಷ್ಟ 1 ಸಾವಿರ ರೂ. ವೆಚ್ಚವಾಗುತ್ತದೆ. ಅನೇಕ ಮಾರ್ಗಗಳಲ್ಲಿ ಹಲವು ಬಸ್‍ಗಳು ಪ್ರಯಾಣಿಕರಿಲ್ಲದೇ ಖಾಲಿ ಸಂಚರಿಸುತ್ತಿದೆ. ಪ್ರಯಾಣಿಕರಿಗೆ ಸೇವೆ ನೀಡಬೇಕೆಂದು ನಾವು ಬಸ್ ಮಾರ್ಗ ಸಂಚಾರ ನಿಲ್ಲಿಸದೇ ಕಷ್ಟದಲ್ಲಿಯೇ ಬಸ್ ಸಂಚಾರ ಮಾಡುತ್ತಿದ್ದೆವು. ಆದರೆ ಲಾಕ್‍ಡೌನ್ ನಂತರದ ದಿನಗಳಲ್ಲಿ ಇದೇ ಸ್ಥಿತಿಯನ್ನು ಎಷ್ಟು ಬಸ್ ಮಾಲೀಕರು ಮುಂದುವರಿಸುತ್ತಾರೆ ಎಂದು ಹೇಳಲು ಕಷ್ಟ ಎಂದರು ರಮೇಶ್ ಜೋಯಪ್ಪ.
ಕೊಡಗಿನ ಹೊರಕ್ಕೆ ಮೈಸೂರು, ಮಂಗಳೂರುಗಳಿಗೆ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಖಾಸಗಿ ಬಸ್ ಸಂಚಾರ ಅಸಾಧ್ಯ. ಹೀಗಾಗಿ ಮಂಗಳೂರು, ಮೈಸೂರು, ಉಡುಪಿ ಜಿಲ್ಲೆಗಳಂತೆ ಕೊಡಗಿನಿಂದ ಈ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರ ಅಸಾಧ್ಯ, ಇದರಿಂದಾಗಿ ಕೊಡಗಿನ ಒಳಗಡೇ ಗ್ರಾಮೀಣ ಭಾಗಗಳಲ್ಲಿಯೇ ಖಾಸಗಿ ಬಸ್‍ಗಳನ್ನು ನಷ್ಟವಾದರೂ ಓಡಿಸಲೇಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಖಾಸಗಿ ಬಸ್ ಮಾಲೀಕರ ಪಾಲಿಗೆ ಕೊಡಗು ದ್ವೀಪದಂತಾಗಿದೆ ಎಂದು ರಮೇಶ್ ಹೇಳಿಕೊಂಡರು. ಹಾಗೇ ನೋಡಿದರೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹೊಸ ಖಾಸಗಿ ಬಸ್ ಸ್ಟಾಂಡ್ ಆದ ಬಳಿಕ ಒಮ್ಮೆಯೂ ನೆಮ್ಮದಿಯಾಗಿ ಖಾಸಗಿ ಬಸ್‍ಗಳು ಅಲ್ಲಿ ನಿಂತದ್ದಿಲ್ಲ. ಒಂದಲ್ಲ ಒಂದು ಸಮಸ್ಯೆಗಳು ಖಾಸಗಿ ಬಸ್ ಉದ್ಯಮವನ್ನು ಕಾಡುತ್ತಲೇ ಇದ್ದದ್ದು ಕಾಕತಾಳೀಯ. ಬಹುತೇಕ ಖಾಸಗಿ ಬಸ್ ಮಾಲೀಕರ ಬಸ್‍ಗಳು ದೊಡ್ಡದಿರಬಹುದು. ಆದರೆ ಈ ಮಾಲೀಕರ ಬ್ಯಾಂಕ್ ಖಾತೆಯಲ್ಲಿ ದುಡ್ಡೇ ಇಲ್ಲದಂಥ ದುಸ್ಥಿತಿಯಿದೆ. ಕಳೆದ ಕೆಲವು ವರ್ಷಗಳಲ್ಲಿ ಅನೇಕರು ಬಸ್ ಮಾರಿದ್ದಾರೆ. ಗುತ್ತಿಗೆಗೆ ನೀಡಿದ್ದಾರೆ. ಸಾಕಪ್ಪಾ ಸಾಕು ಬಸ್ ಸಹವಾಸ ಎಂದುಕೊಂಡವರಿದ್ದಾರೆ. ಲಾಕ್‍ಡೌನ್ ಬಸ್ ಮಾಲೀಕರಿಗೆ ತಂದೊಡ್ಡಿರುವ ಆರ್ಥಿಕ ಹೊಡೆತ ಸುಧಾರಿಸಲು ಬಹಳ ವರ್ಷಗಳೇ ಬೇಕಾಗಲಿದೆ. ಈ ನಡುವೆ ಭಾವನಾತ್ಮಕವಾಗಿ ಜನರಿಗೆ ಸಂಚಾರ ಸೇವೆ ನೀಡಬೇಕೆಂದು ರಮೇಶ್ ಜೋಯಪ್ಪ ಅವರಂಥವರು ಬಸ್ ಸಂಚಾರಕ್ಕೆ ನಷ್ಟದ ಮಾರ್ಗದಲ್ಲಿಯೂ ಮುಂದಾಗಿದ್ದಾರೆ. ತನ್ನ ತಂದೆ ಭಾಗಮಂಡಲದ ಹೊಸೂರು ಜೋಯಪ್ಪ 57 ವರ್ಷದ ಹಿಂದೆ ತಾನು ಹುಟ್ಟಿದ ದಿನವೇ ಖರೀದಿಸಿದ ಬಸ್‍ನಿಂದಾಗಿ ತನಗೂ ಬಸ್‍ಗೂ ಭಾವನಾತ್ಮಕ ನಂಟಿದೆ ಎಂದು ಅವರು ಹೇಳಿದರು. ಇದೇ ರೀತಿ ಪ್ರಯಾಣಿಕರು ಹಾಗೂ ಬಸ್ ಮಾಲೀಕರಿಗೂ ಒಂದು ರೀತಿಯಲ್ಲಿ ಭಾವನಾತ್ಮಕ ನಂಟು ಬೆಸೆದಿದ್ದು ಹೀಗಾಗಿಯೇ ಕೊಡಗಿನಲ್ಲಿ ಖಾಸಗಿ ಬಸ್ ಸಂಚಾರ ಮುಂದುವರೆದೇ ಇದೆ. 2 ವರ್ಷಗಳ ಮಳೆ ಹೊಡೆತದಿಂದಲೇ ಸಾಕಷ್ಟು ನಷ್ಟವಾಗಿತ್ತು. ಇದೀಗ ಒಳ್ಳೆ ಕಲೆಕ್ಷನ್ ಸಂದರ್ಭವೇ ಕೊರೊನಾ ಹೊಡೆತ ನೀಡಿದೆ. ಸುಧಾರಿಸುವುದು ಹೇಗೋ ಎಂದು ಮರುಗಿದರು ಬಸ್ ಮಾಲೀಕ ರೋರ್ವರು. ಕೊಡಗಿನ ಗ್ರಾಮೀಣ ಸಾರಿಗೆ, ಗ್ರಾಮಸ್ಥರ ಒಲುಮೆಯ ಸಂಚಾರಿ ಖಾಸಗಿ ಬಸ್‍ಗಳು ಲಾಕ್‍ಡೌನ್ ಮುಗಿದ ಬಳಿಕ ಮತ್ತೆ ಅದೇ ವೇಗದಿಂದ ರಸ್ತೆಗಿಳಿಯಲಿ ಎಂಬುದೇ ಇಂಥ ಬಸ್‍ಗಳನ್ನು ನೆಚ್ಚಿಕೊಂಡವರ ಪ್ರಾರ್ಥನೆ ಕೂಡ ಹೌದು.
ಕೊನೇ ಹನಿ
ಭಾಗಮಂಡಲ ಮೂಲದ ಡಾ. ಕುಷ್ವಂತ್ ಕೋಳಿಬೈಲು ಬರೆಯುವಂತೆ.... ಭಾಗ್ಯದ ಬಳೆಗಾರ ತವರು ಮನೆಗೆ ಸಂದೇಶ ತಲುಪಿಸಿದರೆ ಕೊಡಗಿನ ಖಾಸಗಿ ಬಸ್‍ಗಳು ತವರೂರುಗಳಿಗೆ ತಿಂಡಿತಿನಿಸು ತಲುಪಿಸುತ್ತಿದ್ದವು. ಜನರು ಕೈಯಲ್ಲಿ ಗಡಿಯಾರ ಕಟ್ಟಿಕೊಳ್ಳದೇ ಹೋದರೂ ತೋಟ ಗದ್ದೆಗಳಲ್ಲಿ ಕೆಲಸ ಮಾಡುವಾಗ ಬಸ್ ಸಾಗಿದ್ದನ್ನು ಕಂಡು ಸಮಯ ನಿರ್ಧರಿಸುತ್ತಿದ್ದರು. ಕೊಡಗಿನ ಖಾಸಗಿ ಬಸ್‍ಗಳ ಸಮಯಪಾಲನೆ, ಜನಪ್ರಿಯತೆ ನಿಜಕ್ಕೂ ಮಾದರಿ. ಖಾಸಗಿ ಬಸ್‍ಗಳ ಖಾಸಗಿ ನೆನಪುಗಳು ಕೊಡಗಿನ ಜನರ ಬಳಿ ಬೇಕಾದಷ್ಟಿದೆ.