ಮಡಿಕೇರಿ, ಏ. 19: ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಮಾರ್ಚ್ ಅಂತ್ಯದೊಳಗೆ ಮನೆಗಳನ್ನು ಹಸ್ತಾಂತರಿಸುವುದಾಗಿ ಜಿಲ್ಲಾಡಳಿತ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜಂಬೂರು ಸಂತ್ರಸ್ತರ ಸಂಘ ಕೂಡಲೇ ವಸತಿ ಕಲ್ಪಿಸಲು ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಕೆ. ಗಾಂಧಿ ಹಾಗೂ ಇತರರು, 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂಪೂರ್ಣವಾಗಿ ಮನೆಗಳನ್ನು ಕಳೆದುಕೊಂಡ 148 ಕುಟುಂಬಗಳಿಗೆ ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದ ಒಳಗೆ ಮನೆಗಳನ್ನು ಹಸ್ತಾಂತರಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ ಇದುವರೆಗೂ ಜಿಲ್ಲಾಡಳಿತ ಕೊಟ್ಟ ಮಾತನ್ನು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ ನಿಗದಿಯಾಗಿದ್ದ 10 ಸಾವಿರ ರೂ. ಬಾಡಿಗೆ ಹಣವನ್ನೂ ಕಳೆದ ಡಿಸೆಂಬರ್ ಬಳಿಕ ನೀಡುತ್ತಿಲ್ಲ. ಕಾರ್ಮಿಕರು ಕೆಲಸವಿಲ್ಲದೆ, ರೈತರು ಬೆಳೆ ಬೆಳೆÉಯಲಾಗದೆ ಸಂಕಷ್ಟದಲ್ಲಿದ್ದು, ಇದೀಗ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ ಸಂತ್ರಸ್ತರೆಲ್ಲರೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ನೀಡುವ ಪಡಿತರ ಹಾಗೂ ಆಹಾರ ಕಿಟ್ಗಳು ಕೂಡಾ ಸಂತ್ರಸ್ತರಿಗೆ ದೊರಕುತ್ತಿಲ್ಲ. ಜನಪ್ರತಿನಿಧಿಗಳೂ ಸಂತ್ರಸ್ತರ ಅಳಲು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2018ರ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದ ಮೊದಲ ಪಟ್ಟಿಯಲ್ಲಿ ಇರುವವರಿಗೆ ಈಗಾಗಲೇ ಸಿದ್ಧವಾಗಿರುವ ಮನೆಗಳನ್ನು ಹಸ್ತಾಂತರಿಸಿದಲ್ಲಿ ಸರ್ಕಾರಕ್ಕೆ ಬಾಡಿಗೆ ಹಣವೂ ಉಳಿಯುತ್ತಿತ್ತು. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿಲ್ಲ. ಸಂತ್ರಸ್ತರು ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ ಸೋಮವಾರಪೇಟೆ ಮುಂತಾದ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಇದೀಗ ಬಾಡಿಗೆ ಹಣವನ್ನೂ ನೀಡದಿರುವುದರಿಂದ ಸಂತ್ರಸ್ತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಎಸ್. ರೀತ್ ಕುಮಾರ್, ಕಾರ್ಯದರ್ಶಿ ಪಿ.ಪಿ. ಸುಬ್ಬಯ್ಯ ಹಾಗೂ ಸಹ ಕಾರ್ಯದರ್ಶಿ ಎನ್.ಸಿ. ಸುದರ್ಶನ್ ಉಪಸ್ಥಿತರಿದ್ದರು.