ಕುಶಾಲನಗರ, ಸೆ. 29: ಕಾಡಾನೆ ಹಾವಳಿ ಹೆಚ್ಚಿರುವ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ಪ್ರದೇಶಗಳಿಗೆ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಡಾನೆಗಳ ಹಾವಳಿ ಮಿತಿಮೀರಿದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ರೈತರೊಂದಿಗೆ ಸಂವಾದ ನಡೆಸಲು ಗ್ರಾಮಸ್ಥರ ಕೋರಿಕೆ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ನಾಗರಿಕರೊಂದಿಗೆ ಸಮಸ್ಯೆಗಳನ್ನು ಆಲಿಸಿದರು.
ರೈತರಿಂದ ಅಗತ್ಯ ಮಾಹಿತಿ ಪಡೆದುಕೊಂಡ ವಲಯ ಅರಣ್ಯಾಧಿಕಾರಿಗಳು ಮೀನುಕೊಲ್ಲಿ ಅರಣ್ಯ ಪ್ರದೇಶದಿಂದ ಕಾಡಾನೆಗಳು ಚಿನ್ನೂರು, ದುಬಾರೆ, ಹೊಸಪಟ್ಟಣ, ದಾಸವಾಳ, ರಂಗಸಮುದ್ರ ಗ್ರಾಮಗಳತ್ತ ನುಗ್ಗುತ್ತಿರುವ ಕಾರಣ ಈ ಭಾಗದಲ್ಲಿ 400 ಮೀಟರ್ ಉದ್ದಕ್ಕೆ ಆನೆ ಕಂದಕ ನಿರ್ಮಾಣಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಇದರೊಂದಿಗೆ 15 ಕಿಮೀ ಉದ್ದಕ್ಕೆ ಸೋಲಾರ್ ತಂತಿ ಅಳವಡಿಸಿ ಮಣ್ಣು ತುಂಬಿರುವ ಆನೆ ಕಂದಕಗಳ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳುವ ಬಗ್ಗೆ ಮಾಹಿತಿ ಒದಗಿಸಿದರು.
ಈ ಸಂದರ್ಭ ಗ್ರಾಪಂ ಮಾಜಿ ಸದಸ್ಯರುಗಳಾದ ಕೆ.ವಿ.ಪ್ರೇಮಾನಂದ, ಜೆ.ಸಿ.ತಮ್ಮಯ್ಯ, ಸ್ಥಳೀಯ ರೈತರಾದ ಸಿ.ಎಲ್.ವಿಶ್ವ, ಕೆಮ್ಮಾರನ ಉತ್ತಯ್ಯ, ಕೆಮ್ಮಾರನ ಜರಿ, ಅಯ್ಯಂಡ್ರ ಯತೀಶ್, ಬಾಲಕೃಷ್ಣ, ಬೆಳ್ಳಿಯಪ್ಪ, ಸುರೇಶ್, ನಡುಮನೆ ಭರತ್, ಮೀನುಕೊಲ್ಲಿ ಹಾಡಿ ಪ್ರಮುಖರಾದ ಜೆ.ಕೆ.ಕುಮಾರ್, ಜೆ.ಕೆ.ರಘು, ಜೆ.ಕೆ.ತಮ್ಮು, ಅರಣ್ಯ ರಕ್ಷಕರಾದ ಸುಬ್ರಾಯ ಮತ್ತಿತರರು ಇದ್ದರು.