ಮಡಿಕೇರಿ, ಸೆ. 29: ತಲಕಾವೇರಿ ಭಾಗಮಂಡಲ ಕ್ಷೇತ್ರಕ್ಕೆ ಭಕ್ತರು ಅವರವರ ಸಾಂಪ್ರದಾಯಿಕ ವೇಷ ಭೂಷಣದೊಂದಿಗೆ ಆಗಮಿಸುವುದನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ತಡೆಯುವ ಅವಕಾಶವಿಲ್ಲವೆಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಸ್ಪಷ್ಟಪಡಿಸಿದ್ದಾರೆ . ಆದರೆ ಇದರ ಬಗ್ಗೆ 2019ನೇ ಇಸವಿಯಲ್ಲಿ ಮಡಿಕೇರಿಯ ಕೆಳಗಿನ ಕೊಡವ ಸಮಾಜದಲ್ಲಿ ಕೊಡಗಿನ ಉಭಯ ಸಮಾಜದವರು ಮತ್ತು ಕೆಲವು ಸಂಘ ಸಂಸ್ಥೆಯ ಪ್ರಮುಖರು ಮತ್ತು ಕೊಡಗಿನ ಎಲ್ಲ ಶಾಸಕರು ಒಳಗೊಂಡು ಚರ್ಚಿಸಿ, ಕ್ಷೇತ್ರದ ಸಂಪ್ರದಾಯವನ್ನು ಹಳೆಯ ರೂಢಿ ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ ಕೊಂಡು ಹೋಗುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಅದರಂತೆ ತಾ. 26 ರಂದು ಪದ್ಧತಿಯಂತೆ ಬಲ್ಲಡ್ಕ ಮನೆಯಿಂದ ತಂದ ಅಕ್ಕಿಯನ್ನು ಪತ್ತಾಯಕ್ಕೆ ಹಾಕುವ ಸಂದರ್ಭ ಕೆಲವರು ತಮ್ಮ ಗಮನಕ್ಕೆ ಬಾರದೆ ಅವರವರ ಸಾಂಪ್ರದಾಯಿಕ ಉಡುಗೆಯಲ್ಲಿ ಹಾಜರಿದ್ದರು. ಕಾರ್ಯಕ್ರಮ (ಮೊದಲ ಪುಟದಿಂದ) ಮುಗಿದ ನಂತರ ಅವರಿಗೆ ಸಮಿತಿ ವತಿಯಿಂದ ತಿಳಿ ಹೇಳಲಾಯಿತು. ಆ ಸಮಯದಲ್ಲಿ ಭಾಗಮಂಡಲದ ಗೌಡ ಸಮಾಜದ ಪ್ರಮುಖರೂ ಹಾಜರಿದ್ದು, ಆ ಸಂದರ್ಭ ತುಟಿ ಪಿಟಿಕ್ ಅನ್ನದೆ ನಂತರದ ದಿನಗಳಲ್ಲಿ ಅದನ್ನು ಸಮಿತಿಯ ಗಮನಕ್ಕೂ ತಾರದೆ, ತಾವೇ ಚರ್ಚಿಸಿ ಪತ್ರಿಕಾ ಹೇಳಿಕೆ ಕೊಡುವುದರ ಔಚಿತ್ಯವೇನಿತ್ತು?
ಇದನ್ನು ಕೊಡಗಿನ ಪ್ರತಿಷ್ಠಿತ ಜನಾಂಗದ ಎರಡು ಸಮಾಜಗಳಾದ ಕೊಡವ ಹಾಗೂ ಗೌಡ ಸಮಾಜದ ಪದಾಧಿಕಾರಿಗಳು ಮನಗಂಡರೆ ಒಳಿತೆಂದು ಅವರು ಹೇಳಿದರು. ವ್ಯವಸ್ಥಾಪನಾ ಸಮಿತಿ ಮತ್ತು ಆಡಳಿತ ಮಂಡಳಿಗೆ ಕ್ಷೇತ್ರದ ಅಭಿವೃದ್ಧಿ ಮತ್ತು ಅದರ ಶುಚಿತ್ತ್ವವನ್ನು ಮಾತ್ರ ಮುನ್ನಡೆಸಲು ಅವಕಾಶವಿದೆ ಅಲ್ಲದೆ, ಕ್ಷೇತ್ರದ ಆಚಾರ ವಿಚಾರ ಪದ್ಧತಿಯಲ್ಲಿ ಎಲ್ಲೂ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲವೆಂದರು .
ಮುಂದುವರಿದ ಅವರು ಹಾಗೇನಾದರೂ ಅಲ್ಪಸ್ವಲ್ಪ ಬದಲಾವಣೆಗೊಂಡ ಪದ್ಧತಿಯನ್ನು ಸರಿಪಡಿಸಬೇಕೆಂದರೂ, ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಲ್ಲಿ ಅಷ್ಟಮಂಗಲ ಪ್ರಶ್ನೆಯ ಮುಖಾಂತರವೇ, ಜಿಲ್ಲಾಧಿಕಾರಿ, ಭಕ್ತಾದಿಗಳು ಹಾಗೂ ಕ್ಷೇತ್ರದ ಶಾಸಕರ ಜೊತೆಯಲ್ಲಿ ಚರ್ಚಿಸಿ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ಅನುಷ್ಠಾನ ಗೊಳಿಸಲಾಗುವುದೆಂದರು. ಹಾಗೆಯೆ ಹಲವು ಆಚಾರಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ ಎಂದರು.
ತಲಕಾವೇರಿ-ಭಾಗಮಂಡಲ ಕ್ಷೇತ್ರವು ಕೊಡಗಿನ ಒಂದು ಜನಾಂಗದ ಕುಲ ದೈವವಾದರೂ, ಕೊಡಗಿನ ಸಮಸ್ತ ನಾಗರಿಕರು ಮಾತೆಯನ್ನು ಭಕ್ತಿಯಿಂದ ಪೂಜಿಸುತ್ತಾರೆಂದರು. ಆದುದರಿಂದ ಯಾವುದೇ ಒಂದು ಜನಾಂಗದ ಸಮಾಜವು, ಅಥವಾ ಸಂಘ ಸಂಸ್ಥೆಗಳಿಗೆ ಕ್ಷೇತ್ರದ ಬಗ್ಗೆ ಟೀಕಿಸುವುದಾಗಲಿ, ಮುಕ್ತ ಅಭಿಪ್ರಾಯವನ್ನು ನೀಡುವುದಾಗಲಿ ಮಾಡುವುದು ಭಕ್ತರಲ್ಲಿ ಗೊಂದಲಕ್ಕೆ ಎಡೆಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರದ ಬಗ್ಗೆ ಜಾತಿ ರಾಜಕೀಯ ಮಾಡುವುದಾಗಲಿ ಅದು ಕಾನೂನು ರೀತಿಯ ಅಪರಾಧವಾಗುತ್ತದೆ. ಕ್ಷೇತ್ರದ ಒಳಿತು ಕೆಡುಕನ್ನು ನಿರ್ಧರಿಸುವುದಕ್ಕೆ ಸರಕಾರವು ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಯನ್ನು ನೇಮಿಸಿ, ಅವರ ಕೆಳಗೆ ಕ್ಷೇತ್ರದಲ್ಲಿ ಒಬ್ಬ ಕಾರ್ಯನಿರ್ವಹಣಾಧಿಕಾರಿ ಮತ್ತು ಒಬ್ಬ ಪಾರುಪತ್ಯಗಾರನನ್ನು ನೇಮಿಸಿರುತ್ತದೆ. ಇದೆಲ್ಲದರ ಉಸ್ತುವಾರಿಯನ್ನು ಹೊತ್ತ ಸರಕಾರದ ವತಿಯಿಂದ ಎಲ್ಲರನ್ನೂ ಒಳಗೊಂಡ ಒಂಬತ್ತು ಜನರ ವ್ಯವಸ್ಥಾಪನಾ ಸಮಿತಿಯನ್ನು ನೇಮಿಸಲಾಗಿದೆ ಎಂದು ವಿವರಿಸಿದರು.
ಕೋಡಿ ಪೆÇನ್ನಪ್ಪ ಅವರು ಇದರ ಬಗ್ಗೆ ಅಥವಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾದ ತನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲವೆಂದರು. ಏಕೆಂದರೆ 2019ರಲ್ಲಿ ಕೋಡಿ ಪೆÇನ್ನಪ್ಪ ಮತ್ತು ಅವರ ಜೊತೆಗೂಡಿ ಹೋದ ಸಂಘ ಸಂಸ್ಥೆಯ ಮುಖಂಡರುಗಳು ಮಂಡೀರ ಕುಟುಂಬಸ್ಥರ ಒಡಗೂಡಿ ಅವರ ದೊಡ್ಡಮನೆಯಲ್ಲಿ ಉಭಯಕಡೆಯವರು ಚರ್ಚಿಸಿ ಯಾವ ತೀರ್ಮಾನಕ್ಕೆ ಬಂದಿದ್ದರೆಂದು ಅವರು ಗೌಡ ಸಮಾಜಕ್ಕೆ ತಿಳಿಸಲಿ ಎಂದರು. ಅವರು ಸ್ವಂತ ಆತ್ಮಾವಲೋಕನ ಮಾಡಿಕೊಂಡು ಕ್ಷೇತ್ರದ ಅಗಸ್ತೇಶ್ವರ ಗುಡಿಯ ಮುಂದೆ ನಿನ್ನೆಯ ಸಭೆ ಸೇರಿದ ಅವರ ನಾಗರಿಕ ಸಮಾಜಕ್ಕೆ ತಿಳಿಸಲಿ ಎಂದು ಆಹ್ವಾನಿಸಿದರು. ಈ ರೀತಿಯಲ್ಲಿ ಕಚ್ಚಾಡುವ ಗೌಡ ಮತ್ತು ಕೊಡವ ಸಮಾಜದವರು ವರ್ಷದ 365 ದಿವಸ ಎಲ್ಲಿರುತ್ತಾರೆಂದು ಅವರು ಪ್ರಶ್ನಿಸಿದರು. ಪ್ರತಿ ತುಲಾ ಸಂಕ್ರಮಣದ ಜಾತ್ರೆಯ ಸಮಯದಲ್ಲಿ ಇವರ ಜೊತೆಯಲ್ಲಿ ಕೆಲವು ಸಂಘ ಸಂಸ್ಥೆಯವರು ಕೂಡಿಕೊಂಡು ಗೊಂದಲ ಸೃಷ್ಟಿಸುವುದು ಏಕೆ ಎಂದು ಪ್ರಶ್ನಿಸಿದರು.
ರೂಢಿ ಸಂಪ್ರದಾಯದಂತೆ ಬಳ್ಳಡ್ಕ ಮನೆಯ ತಕ್ಕ ಮುಖ್ಯಸ್ಥರು ಪತ್ತಾಯಕ್ಕೆ ಅಕ್ಕಿ ಹಾಕಿರುತ್ತಾರೆ. ಅವರ ಜೊತೆಯಲ್ಲಿ ಅಲ್ಲಿಗೆ ಆಗಮಿಸಿದ ಇತರ ಭಕ್ತರು ಹಾಜರಿದ್ದರು ಎಂದರು.
ಇನ್ನಾದರೂ ಎಲ್ಲ ಕೊಡಗಿನ ಭಕ್ತರು ಸಂಘ ಸಂಸ್ಥೆಯವರು ಮತ್ತು ಎಲ್ಲ ಸಮಾಜದವರು ಈ ಕ್ಷೇತ್ರದ ಪಾವಿತ್ರ್ಯತೆ ಮತ್ತು ಅಭಿವೃದ್ಧಿಯ ಬಗ್ಗೆ ಶ್ರಮಿಸುವಂತಾಗಲಿ ಎಂದು ಆ ಕಾವೇರಿ ಮಾತೆಯಲ್ಲಿ ಬೇಡಿಕೊಳ್ಳುತ್ತೇನೆಂದರು.