ಗೋಣಿಕೊಪ್ಪ ವರದಿ, ಸೆ. 29: ಚಾಮುಂಡೇಶ್ವರಿ ದೇವಿ ಪೂಜೆ ಮತ್ತು ವಿಸರ್ಜನೆ ಕಾರ್ಯಕ್ರಮದ ಮೂಲಕ ಗೋಣಿಕೊಪ್ಪ ದಸರಾ ಆಚರಿಸುವ ನಿರ್ಧಾರವನ್ನು ಕಾವೇರಿ ದಸರಾ ಸಮಿತಿ ಮಹಾಸಭೆಯಲ್ಲಿ ತೆಗೆದು ಕೊಳ್ಳಲಾಯಿತು. ಮಂಗಳವಾರ ಇಲ್ಲಿನ ಕಾವೇರಿ ಮಹಿಳಾ ಸಮಾಜದಲ್ಲಿ ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ದೇವಿ ಆರಾಧನೆಗೆ ಮಾತ್ರ ಆದ್ಯತೆ ನೀಡುವಂತೆ ಒಮ್ಮತದ ತೀರ್ಮಾನ ತೆಗೆದು ಕೊಳ್ಳಲಾಯಿತು.ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ, ವಿಸರ್ಜನೆ ಕಾರ್ಯಕ್ರಮ ಮಾತ್ರ (ಮೊದಲ ಪುಟದಿಂದ) ನಡೆಸುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು. ವಿಜಯದಶಮಿಯಂದು ರಾತ್ರಿ 10 ಗಂಟೆಯ ಒಳಗೆ ವಿಸರ್ಜನೆ ಮಾಡುವಂತೆ, ಹೆಚ್ಚು ಜನರು ಸೇರದಂತೆ ಕ್ರಮಕೈಗೊಳ್ಳುವಂತೆ ಸರ್ವಾನುಮತದಿಂದ ಒಪ್ಪಿಕೊಳ್ಳಲಾಯಿತು. ಉಳಿದಂತೆ ದಶಮಂಟಪ ಶೋಭಾಯಾತ್ರೆÀ, ಸ್ತಬ್ದಚಿತ್ರ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ, ಕ್ರೀಡಾಕೂಟ ನಡೆಸದಂತೆ ನಿರ್ಧರಿಸಲಾಯಿತು.

ಪಟ್ಟಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪೂಜಾ ಕಾರ್ಯ ನಡೆಸುವಂತೆ, 9 ದಿನಗಳ ಪೂಜಾ ಕಾರ್ಯದಲ್ಲಿ ಸಂಜೆ ದೇವಿಗೆ ಪೂಜೆ ಸಲ್ಲಿಸುವ ಜವಬ್ದಾರಿಯನ್ನು ಮಂಟಪ ಸಮಿತಿಗೆ ನೀಡಲಾಯಿತು. ನಿತ್ಯ ಒಂದೊಂದು ಸಮಿತಿಯಿಂದ ಪೂಜೆ ನಡೆಸುವಂತೆ, ಬೆಳಗ್ಗಿನ ಪೂಜೆಯನ್ನು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವಂತೆ ನಿರ್ಧರಿಸಲಾಯಿತು. ಕಳೆದ ವರ್ಷದ ಪೂಜಾ ಸಮಿತಿಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರುಗಳು, ಮಂಟಪ ಸಮಿತಿಯ ತಲಾ ಒಬ್ಬ ಸದಸ್ಯರು ಸೇರಿ ಸಮಿತಿ ರಚಿಸಿಕೊಂಡು ದೇವಿ ಆರಾಧನೆ ಮಾಡುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.

ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ದೇವಿ ಪ್ರತಿಷ್ಠಾಪನೆ ಹೊರತು ಬೇರೆ ಕಾರ್ಯಕ್ರಮ ಆಯೋಜಿಸದಂತೆ ಸೂಚನೆ ನೀಡಲಾಗಿದೆ. ಎಲ್ಲರೂ ಒಂದಾಗಿ ದೇವಿಯನ್ನು ಪೂಜಿಸಬೇಕಿದೆ. ಸರ್ಕಾರಕ್ಕೆ 5 ಲಕ್ಷ ಅನುದಾನ ನೀಡುವಂತೆ ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಸರ್ಕಾರ ನೀಡುವ ಹಣದಲ್ಲಿ ಸರಳ ಮತ್ತು ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿ. ಕೆ. ಬೋಪಣ್ಣ ಮಾತನಾಡಿ, ಸರ್ಕಾರ 5 ಲಕ್ಷ ನೀಡಲು ಮುಂದೆ ಬಂದಿದೆ. ಹೆಚ್ಚಿನ ಅನುದಾನದ ಅವಶ್ಯಕತೆ ಬರುತ್ತಿಲ್ಲ. ಹೆಚ್ಚಿನ ಅನುದಾನದ ನಿರೀಕ್ಷೆ ಬೇಡ. ಪೂಜಾ ವಿಧಿವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡುವಂತಾಗಲಿ ಎಂದರು.

ಹಿರಿಯ ಸದಸ್ಯ ಕಾಡ್ಯಮಾಡ ಗಿರೀಶ್ ಗಣಪತಿ ಮಾತನಾಡಿ, ದೇವಿ ಆರಾಧನೆಯಿಂದ ಕೊರೊನಾ ನಾಶವಾಗಬೇಕಿದೆ. ಕಡಿಮೆ ಜನರು ಸೇರಿಕೊಂಡು ರೋಗ ಹರಡದಂತೆ ನಾವೇ ಜವಬ್ದಾರಿ ವಹಿಸಿಕೊಳ್ಳಬೇಕಿದೆ ಎಂದರು. ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಮಾತನಾಡಿ, ಪೂಜೆ ನಡೆಸಲು ಮಂಟಪ ಸಮಿತಿಗೆ ತಲಾ 25 ಸಾವಿರ ಅನುದಾನ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ ಕಳೆದ ಸಾಲಿನ ಸರ್ಕಾರದ ಅನುದಾನದ 30 ಲಕ್ಷದಲ್ಲಿ ನಡೆಸಿದ ದಸರಾ ಕಾರ್ಯಕ್ರಮಗಳ ಲೆಕ್ಕಪತ್ರ ಮಂಡಿಸಿದರು. ನಂತರ ಅನುಮೋದನೆ ಪಡೆದುಕೊಳ್ಳಲಾಯಿತು. ಹಿರಿಯ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಎಲ್ಲಾ ಕಲಾವಿದರಿಗೂ ಜಿಲ್ಲಾಡಳಿತದಿಂದ ನೇರವಾಗಿ ಹಣ ಜಮಾ ಆಗಿದೆ. ಲೆಕ್ಕಪತ್ರ ಪರಿಶೋಧನೆ, ಮಂಡನೆ ಕಾರ್ಯಕ್ರಮವನ್ನು ಮಾತ್ರ ಸಮಿತಿ ಜವಬ್ದಾರಿ ವಹಿಸಿಕೊಂಡಿದೆ ಎಂದರು. ಈ ಸಂದರ್ಭ ಗ್ರಾ. ಪಂ. ಅಧ್ಯಕ್ಷೆ ಸೆಲ್ವಿ ಉಪಸ್ಥಿತರಿದ್ದರು. ಮಂಟಪ ಸಮಿತಿಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡು ಸಲಹೆ ನೀಡಿದರು. ನವೀನ್ ವಂದಿಸಿದರು.

ಆಯ್ಕೆ : ಈ ವರ್ಷದ ಕಾವೇರಿ ದಸರಾ ಸಮಿತಿ ಅಧ್ಯಕ್ಷರಾಗಿ ರಾಮಕೃಷ್ಣ ಅವರನ್ನು ಪುನರಾಯ್ಕೆ ಮಾಡಲಾಗಿದೆ. ವಾಡಿಕೆಯಂತೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

-ಸುದ್ದಿಪುತ್ರ