ಕುಶಾಲನಗರ, ಸೆ. 29 : ಧಾರ್ಮಿಕತೆಗೆ ಒತ್ತು ನೀಡಿ ನೆಲೆಗೊಂಡ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೆಟಿ ಯನ್ ನಿರಾಶ್ರಿತ ಶಿಬಿರ ಇತ್ತೀಚಿನ ದಿನಗಳಲ್ಲಿ ವ್ಯಾಪಾರಿ ಕೇಂದ್ರ ವಾಗುವುದರೊಂದಿಗೆ ಶಿಬಿರ ಅಭದ್ರತೆಯತ್ತ ಸಾಗುತ್ತಿದೆ. ನಿರಾಶ್ರಿತ ಟಿಬೆಟಿಯನ್ನರಿಗೆ ಜೀವನ ಸಾಗಿಸಲು ಸರ್ಕಾರ ಒದಗಿಸಿದ ಭೂಮಿಯನ್ನು ಬಹುತೇಕ ನಿಯಮಬಾಹಿರವಾಗಿ ವ್ಯಾಪಾರ ಕೇಂದ್ರವಾಗಿ ಪರಿವರ್ತನೆ ಗೊಳ್ಳುತ್ತಿದ್ದು, ಈ ವ್ಯಾಪ್ತಿಯಲ್ಲಿ ಸರ್ಕಾರಕ್ಕೆ ಕೋಟ್ಯಾಂತರ ರಾಜಧನ ವಂಚನೆಯೊಂದಿಗೆ ಇದೀಗ ದೇಶದ ಭದ್ರತೆಯ ನಿಟ್ಟಿನಲ್ಲಿ ಆತಂಕದ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪೆ ಟಿಬೆಟಿಯನ್ ನಿರಾಶ್ರಿತ ಕೇಂದ್ರ ಹುಣಸೂರು ಉಪ ವಿಭಾಗಾಧಿಕಾರಿಗಳ ನಿಯಂತ್ರಣ ದಲ್ಲಿದ್ದು, ಈ ಶಿಬಿರದ ಸಂಪೂರ್ಣ ಹತೋಟಿಯನ್ನು ನಿಭಾಯಿಸುವಲ್ಲಿ ಬಹುತೇಕ ಇಲಾಖೆಗಳ ಅಧಿಕಾರಿ ಗಳು ವಿಫಲರಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಶಿಬಿರದ ಒಳಭಾಗದಲ್ಲಿ ಅಕ್ರಮ ಹಾಗೂ ಕಾನೂನುಬಾಹಿರವಾಗಿ ಅನೇಕ ವ್ಯಾಪಾರ ಕೇಂದ್ರಗಳು, ಬೃಹತ್ ಕಟ್ಟಡಗಳು ತಲೆ ಎತ್ತುವುದರೊಂದಿಗೆ ಅಕ್ರಮ ಚಟುವಟಿಕೆಗಳು ಕೂಡ ಎಗ್ಗಿಲ್ಲದೆ ನಡೆಯುತ್ತಿರುವ ಬಗ್ಗೆ ಆರೋಪಗಳು ಆಗಾಗ್ಯೆ ಕೇಳಿ ಬರುತ್ತಿವೆ. ಬುದ್ದನ ನಾಡಿನಲ್ಲಿ ಅಹಿಂಸೆಯ ಬದಲು ತದ್ವಿರುದ್ದ ಚಟುವಟಿಕೆಗಳು ತಲೆ ಎತ್ತುತ್ತಿರು ವುದು ಇತ್ತೀಚಿನ ಬೆಳವಣಿಗೆ ಯಾಗಿದೆ. ಬೃಹತ್ ಬೌದ್ಧ ವಿಹಾರ ಕೇಂದ್ರಗಳು ಬೈಲುಕೊಪ್ಪೆ ಶಿಬಿರದಲ್ಲಿ ತಲೆ ಎತ್ತಿದ್ದು, ಇದರ ಆವರಣದಲ್ಲಿ ನಿರಾಶ್ರಿತ ಟಿಬೆಟಿಯನ್ನರ ಹೊರತಾಗಿ ಅನೇಕ ವಿದೇಶಿಯರು, ಉತ್ತರ ಭಾರತದ ರಾಜ್ಯಗಳ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದು, ಇದಕ್ಕೆ ಕಡಿವಾಣ ಹಾಕುವಲ್ಲಿ ಮೈಸೂರು ಜಿಲ್ಲಾಡಳಿತ ವಿಫಲ ವಾಗಿದೆ. ಬೌದ್ಧ ಧರ್ಮದ ಶಿಕ್ಷಣದ ಹೆಸರಿನಲ್ಲಿ ಕಟ್ಟಡಗಳನ್ನು ನಿರ್ಮಿಸಿ, ಇತರರಿಗೆ ವ್ಯಾಪಾರಕ್ಕೆ ನೀಡಿರುವ ನಿದರ್ಶನಗಳು ಈ ಶಿಬಿರದಲ್ಲಿ ಎದ್ದು ಕಾಣುತ್ತಿವೆ. ಈ ಬೈಲುಕೊಪ್ಪೆ ಟಿಬೆಟಿಯನ್ ಶಿಬಿರ ಇತ್ತೀಚೆಗೆ ಚೀನಾ ದೇಶದ ಕಣ್ಣಿಗೆ ಕೂಡ ಬಿದ್ದಿದ್ದು ಅಲ್ಲಿನ ಪ್ರಜೆಯೊಬ್ಬ ಭಾರೀ ಷಡ್ಯಂತ್ರ ರೂಪಿಸಲು ಬೌದ್ಧ ಭಿಕ್ಷುಗಳಿಗೆ ಹಣಕಾಸಿನ ಸಹಾಯ ಮಾಡಿರುವ ಸ್ಪೋಟಕ ಮಾಹಿತಿ ಯೊಂದು ಇತ್ತೀಚಿಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡಿರುವುದನ್ನು ಸ್ಮರಿಸ ಬಹುದು. ಚೀನಾದ ಪ್ರಜೆಯೊಬ್ಬ ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಇಂತಹ ಷಡ್ಯಂತ್ರಗಳಿಗೆ ಮನಿ ಲಾಂಡ್ರಿಂಗ್ ಮೂಲಕ ಹಂಚುವ ಕೆಲಸದಲ್ಲಿ ಕಾರ್ಯಾಚರಣೆ ಮಾಡುವ ಬಗ್ಗೆ ದೇಶದ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ದೊರೆತಿದೆ. ಬೈಲುಕೊಪ್ಪೆಯಲ್ಲಿರುವ ಸೆರಾಮೆ ಬೌದ್ಧ ವಿಹಾರದ ಕೆಲವು ಲಾಮಗಳಿಗೆ ಚೀನಾದ ಪ್ರಜೆ ಚಾರ್ಲಿ ಪೆಂಗ್ ಎಂಬಾತ ಹಣ ನೀಡಿದ್ದಾರೆ ಎಂಬ ಆರೋಪದಡಿಯಲ್ಲಿ ಬಂಧಿತ ನಾಗಿದ್ದಾನೆ. ಎಸ್‍ಕೆ ಟ್ರೇಡಿಂಗ್ ಕಂಪನಿಯ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ಬೈಲುಕೊಪ್ಪೆ ಸೆರಾಮೆ ಮತ್ತು ಮುಂಡುಗೋಡು ಶಿಬಿರದ ಕೆಲವರಿಗೆ ಹಂಚಲಾಗಿದ್ದು ಈ ಮೂಲಕ 14ನೇ ದಲೈಲಾಮ ಅವರ ಪದಚ್ಯುತಿ ಮಾಡುವ ಹುನ್ನಾರ ದೊಂದಿಗೆ ಚೀನಾದ ವ್ಯಕ್ತಿಯೊಬ್ಬರನ್ನು ಲಾಮ ಉತ್ತರಾಧಿಕಾರಿಯನ್ನಾಗಿಸಲು ಈ ಪ್ರಯತ್ನ ನಡೆದಿದೆ ಎಂದು ಮಾಹಿತಿಗಳು ಹೊರಬಿದ್ದಿವೆ. ಈ ಸಂಬಂಧ ಇಡಿ, ಆದಾಯ ತೆರಿಗೆ, ಆಂತರಿಕ ಭದ್ರತೆ ಮತ್ತಿತರ ಇಲಾಖೆ ಗಳ ಅಧಿಕಾರಿಗಳು ಕಳೆದ ಕೆಲವು ದಿನಗಳ ಹಿಂದೆ ಬೈಲುಕೊಪ್ಪ ಶಿಬಿರಕ್ಕೆ ಭೇಟಿ ನೀಡಿ ಉನ್ನತ ಮಟ್ಟದ ತನಿಖೆ ನಡೆಸಿ ಹೋಗಿರುವುದು ಬೆಳಕಿಗೆ ಬಂದಿದೆ.
ಗಡಿ ಭಾಗದಲ್ಲಿ ನಿರಂತರ ಸಮಸ್ಯೆ ಮಾಡುತ್ತಿರುವ ಚೀನಾ ಇತ್ತೀಚಿನ ದಿನಗಳಲ್ಲಿ ದೇಶದ ಆಂತರಿಕ ಭದ್ರತೆಗೆ ಕೂಡ ಧಕ್ಕೆ ಉಂಟು ಮಾಡುತ್ತಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು ಬೈಲುಕೊಪ್ಪ ಶಿಬಿರದ ಕೆಲವು ಲಾಮಗಳ ಸಂಪರ್ಕವನ್ನು ಚೀನಾ ಪ್ರಜೆ ಹೊಂದಿರುವುದು ಇಡೀ ಬೈಲುಕೊಪ್ಪೆ ವ್ಯಾಪ್ತಿಯಲ್ಲಿ ಆತಂಕಕ್ಕೆ ಎಡೆಮಾಡಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೈಲುಕೊಪ್ಪೆ ಟಿಬೆಟಿಯನ್ ಪ್ರತಿನಿಧಿಗಳ ಮೂಲಗಳು ತಿಳಿಸಿವೆ. ಈ ಹಣ ಅಕ್ರಮವಾಗಿ ಪಡೆದಿರುವ ಬಗ್ಗೆ ತನಿಖೆ ನಡೆದಲ್ಲಿ ಎಲ್ಲಾ ಸತ್ಯಾಂಶ ಹೊರಬೀಳಲಿದೆ ಎನ್ನುವುದು ಅವರ ಪ್ರತಿಕ್ರಿಯೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಜಮೀರ್ ಅಹಮ್ಮದ್ ‘ಶಕ್ತಿ’ಯೊಂದಿಗೆ ಸ್ಪಷ್ಟನೆ ನೀಡಿದ್ದು ಈ ಬಗ್ಗೆ ದೆಹಲಿಯಿಂದಲೇ ಉನ್ನತ ಮಟ್ಟದ ಅಧಿಕಾರಿಗಳು ನೇರ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಬೈಲುಕೊಪ್ಪ ಟಿಬೆಟಿಯನ್ ಶಿಬಿರದ ಯಾವುದೇ ಪ್ರಕರಣಗಳು 2020 ರಲ್ಲಿ ದಾಖಲಾ ಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಬೈಲುಕೊಪ್ಪೆ ಟಿಬೆಟಿಯನ್ ಶಿಬಿರದ ಕೆಲವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಬಗ್ಗೆ ಮೊಕದ್ದಮೆಗಳು ದಾಖಲಾಗಿದ್ದು ಇದರಲ್ಲಿ ಚೀನಾ ದೇಶಕ್ಕೆ ಸಂಬಂಧಿಸಿದ ನಾಗರಿಕರ ಬಗ್ಗೆಯೂ ಕೆಲವು ಪ್ರಕರಣ ದಾಖಲಾಗಿರುವುದನ್ನು ಗಮನಿಸಬಹುದು. ಹುಲಿ ಚರ್ಮ ಸಾಗಾಟ, ಮೂರ್ತಿಗಳ ಕಳವು ಇಂತಹ ಪ್ರಕರಣಗಳು ಕೂಡ ಈ ಹಿಂದೆ ನಡೆದಿತ್ತು. ವಿಶೇಷವೇನೆಂದರೆ ಈ ಶಿಬಿರಕ್ಕೆ ಬಂದು ಹೋಗುವ ಜನರ ನಿಯಂತ್ರಣ ಬಹುತೇಕ ಇಲಾಖೆಗಳಿಗೆ ದೊರಕುತ್ತಿಲ್ಲ ಎನ್ನುವುದೇ ಆತಂಕಕಾರಿ ಬೆಳವಣಿಗೆ. ಯಾವುದೇ ದೇಶದಿಂದ ಬೈಲುಕೊಪ್ಪ ಕೇಂದ್ರಕ್ಕೆ ಸಂಪರ್ಕ ದೊರೆತಲ್ಲಿ ವಿಶ್ವದ ಇತರ ರಾಷ್ಟ್ರಗಳಿಗೆ ಕಳ್ಳಮಾರ್ಗ ಮೂಲಕ ದಾಖಲೆಗಳನ್ನು ಪಡೆಯಲು ಅವಕಾಶ ದೊರೆಯುತ್ತದೆ ಎನ್ನುವ ಆರೋಪಗಳು ಆಗಾಗ್ಯೆ ಕೇಳಿಬರುತ್ತಿವೆ. ಕೆಲವು ಟಿಬೆಟಿಯನ್ ನಾಗರಿಕರು, ಭಿಕ್ಷುಗಳು ಒಂದಕ್ಕಿಂತ ಅಧಿಕ ಪಾಸ್‍ಪೋರ್ಟ್ ಕೂಡ ಹೊಂದಿರುವುದು ತನಿಖೆ ಮಾಡಿದಲ್ಲಿ ಹೊರಬೀಳಬಹುದು ಎನ್ನುತ್ತಾರೆ ಸ್ಥಳೀಯರು. ಬೇನಾಮಿ ಹೆಸರಿನಲ್ಲಿ ಭಾರೀ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗುಮಾನಿ ಕೇಳಿಬಂದಿದೆ.
ಇಲ್ಲಿನ ಚಟುವಟಿಕೆಗಳು ಕೂಡ ಪಾರದರ್ಶಕವಾಗಿರುವ ಬಗ್ಗೆ ಕೂಡ ಮಾಹಿತಿ ಕಲೆ ಹಾಕುವಲ್ಲಿ ಎಲ್ಲಾ ಇಲಾಖೆಗಳು ಬಹುತೇಕ ಹಿಂದೇಟು ಹಾಕುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗುತ್ತಿದೆ.
ಬೈಲುಕೊಪ್ಪ ನಿರಾಶ್ರಿತ ಶಿಬಿರದೊಳಗೆ ವ್ಯಾಪಾರ ವಹಿವಾಟು, ಹೊಟೇಲ್, ವಸತಿ ಸೌಲಭ್ಯ ಕಲ್ಪಿಸುವುದರಿಂದ ಸರ್ಕಾರಕ್ಕೆ ವಂಚನೆಯೊಂದಿಗೆ ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಬಂಡವಾಳ ಹಾಕಿರುವ ಉದ್ಯಮಿಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಕೊಡಗು ಜಿಲ್ಲಾ ಹೊಟೇಲ್ ರೆಸಾರ್ಟ್ ಮತ್ತು ಉಪಹಾರ ಗೃಹಗಳ ಸಂಘದ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರ ಪ್ರಸಾದ್ ಹುಣಸೂರು ಉಪ ವಿಭಾಗಾಧಿಕಾರಿಗಳು ಹಾಗೂ ಬೈಲುಕೊಪ್ಪ ಶಿಬಿರದ ಉಸ್ತುವಾರಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು.
ಕುಶಾಲನಗರದಲ್ಲಿ ಟಿಬೆಟಿಯನ್ ನಾಗರಿಕರು ಮಧ್ಯವರ್ತಿಗಳನ್ನು ಬಳಸಿ ನಿರಾಶ್ರಿತ ಶಿಬಿರಕ್ಕೆ ಪ್ರವಾಸಿಗರು ಹಾಗೂ ಗ್ರಾಹಕರನ್ನು ಸೆಳೆಯುತ್ತಿರುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಇದರಿಂದ ಸಮೀಪದ ಕುಶಾಲನಗರ ಪಟ್ಟಣದ ಲಾಡ್ಜ್‍ಗಳು, ಹೊಟೇಲ್‍ಗಳು ಬಿಕೋ ಎನ್ನಲಾರಂಭಿಸಿದೆ ಎಂಬದು ಕುಶಾಲನಗರ ಹೊಟೇಲ್ ಉದ್ಯಮಿಗಳ ಅಳಲಾಗಿದೆ. ಒಟ್ಟಾರೆ ಬೈಲುಕೊಪ್ಪ್ಪ ಟಿಬೆಟಿಯನ್ನರ ಶಿಬಿರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿಯಂತ್ರಣ ತಪ್ಪುತ್ತಿದ್ದು, ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ. ಜೊತೆಗೆ ಚೀನಾ ಜೊತೆ ಇರುವ ಸಂಬಂಧಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದರೊಂದಿಗೆ ಮುಂದೆ ಉಂಟಾಗಲಿರುವ ಅನಾಹುತಗಳಿಗೆ ಶಾಶ್ವತ ತೆರೆ ಎಳೆಯಬೇಕಾಗಿದೆ.
ವರದಿ: ಚಂದ್ರಮೋಹನ್.