ಮಡಿಕೇರಿ, ಸೆ. 29: ಪ್ರವಾಸಿ ಜಿಲ್ಲೆಯಾಗಿರುವ ಕೊಡಗಿನ ಕೇಂದ್ರ ಸ್ಥಳ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ, ದೈನಂದಿನ ಸ್ವಚ್ಛತೆ ನೋಡಿಕೊಳ್ಳುತ್ತಿರುವ ಪೌರ ಕಾರ್ಮಿಕರ ಗೋಳು ಕೇಳುವವರು ಇಲ್ಲದೆ, ಆಡಳಿತ ವ್ಯವಸ್ಥೆ ವಿರುದ್ಧ ಈ ಕಾರ್ಮಿಕರು ಅಳುನುಂಗಿಕೊಂಡು ಕಾಯಕ ನಿರತರಾಗಿದ್ದಾರೆ. ತಮ್ಮ ನೋವಿಗೆ ಸ್ಪಂದಿಸದಿರುವ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಒಂದೊಮ್ಮೆ ಪುರಸಭೆ ಆಳ್ವಿಕೆಯಿದ್ದ ಮಡಿಕೇರಿಯ ಕಾರ್ಯ ವ್ಯಾಪ್ತಿಯನ್ನು ಕರ್ನಾಟಕ ಪೌರಾಡಳಿತ ಸಚಿವಾಲಯ ಮೇಲ್ದರ್ಜೆಗೆ ಏರಿಸುವದರೊಂದಿಗೆ, ಕಳೆದ ಒಂದು ದಶಕದಿಂದ ನಗರಸಭೆಯಾಗಿ ಪರಿಗಣಿಸಿದೆ. ಹೀಗಿದ್ದರೂ ಜಾಗತಿಕ ಕೊರೊನಾ ನಡುವೆ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಳ್ವಿಕೆ ಮುಕ್ತಾಯಗೊಂಡು ವರ್ಷ ಕಳೆದರೂ ಇಲ್ಲಿ ಕೇಳುವವರು ಇಲ್ಲದಂತಾಗಿದ್ದಾರೆ.

ನಗರಸಭೆ ಕಚೇರಿಯ ಕೆಲಸ ನಿರತರು ಪರಸ್ಪರ ಯಾರೊಬ್ಬರ ಮಾತು ಕೇಳದೆ, ಅಲ್ಲಿ ಗೊಂದಲದ ಗೂಡಾಗಿದೆ ಎನ್ನುವ ಗಂಭೀರ ಆರೋಪವಿದೆ. ಪರಿಣಾಮ ನಗರದ ಸ್ವಚ್ಛತೆಯೂ ಸೇರಿದಂತೆ, ಯಾವದೇ ಅಭಿವೃದ್ಧಿ ಕೆಲಸಗಳು ನಿರಾಯಾಸವಾಗಿ ನಡೆಯದೆ ಎಲ್ಲವೂ ಗೊಂದಲದ ಗೂಡಾಗಿದೆ ಎಂಬ ಟೀಕೆ ಕೇಳಿಬರುತ್ತಿದೆ.

ಚದುರಿದ ನೌಕರರು: ಸರಾಸರಿ 80 ರಿಂದ 100 ಮಂದಿ ಕರ್ತವ್ಯ ನಿರ್ವಹಿಸಬೇಕಾದ ನಗರಸಭೆಯೊಳಗೆ ಕೇವಲ ಶೇ. 50 ರಷ್ಟು ಮಂದಿ ನೌಕರರು ಮಾತ್ರ ಇದ್ದಾರೆ. ಈ ಪೈಕಿ ಬಹುತೇಕ ಪೌರ ಕಾರ್ಮಿಕರು ಜಿಲ್ಲಾ ಕೇಂದ್ರದ ಆಯಕಟ್ಟಿನಲ್ಲಿರುವ ಅಧಿಕಾರಿಗಳ ಬಂಗಲೆ ಕೆಲಸಕ್ಕೆ ನಿಯೋಜನೆಗೊಂಡಿದ್ದಾಗಿ ಟೀಕೆ ಕೇಳಿಬರುತ್ತಿದೆ. ಅಲ್ಲದೆ ನಗರದ 23 ವಾರ್ಡ್‍ಗಳಿಗೆ ಒಬ್ಬರಂತೆ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಇಲ್ಲಿನ ಚಳಿ, ಮಳೆ, ಕೊರೊನಾ ಸೋಂಕು ಇತ್ಯಾದಿ ನಡುವೆ ಬಳಲುತ್ತಿರುವ ಮಂದಿ ಸದಾ ಕರ್ತವ್ಯ ನಿರ್ವಹಿಸಲಾರದೆ ಗೈರು ಹಾಜರಾಗುವದೇ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಬಡಾವಣೆಯಲ್ಲಿ ಕಸ ತೆರವು, ಕಾಡು ಕಡಿಯುವದು, ಚರಂಡಿ ದುರಸ್ಥಿ ಇತ್ಯಾದಿ ಕಾಯಕ ತಪ್ಪಿ ಹೋಗುತ್ತಿದೆ. ಬಹುತೇಕ ನೌಕರರಿಗೆ ವೃದ್ಧಾಪ್ಯದೊಂದಿಗೆ ನಿವೃತ್ತಿಯ ಅಂಚಿನಲ್ಲಿ ಸುಸ್ತು ಹೊಡೆದವರಾಗಿದ್ದಾರೆ.

ಕೊರೊನಾ ಕಾಯಕ: ಇನ್ನು ದೈನಂದಿನ ಕರ್ತವ್ಯಕ್ಕೆ ಬರುವ ಸಿಬ್ಬಂದಿಗಳನ್ನು ಕೊರೊನಾ ಸೋಂಕಿತರು ತಂಗುವ ನವೋದಯ ಶಾಲೆ, ವಿವಿಧ ಹೊಟೇಲ್‍ಗಳು, ಜಿಲ್ಲಾ ಕೋವಿಡ್ -19 ಆಸ್ಪತ್ರೆ ಮುಂತಾದೆಡೆಗಳಲ್ಲಿ ಸಂಬಂಧಿಸಿದ ರೋಗಿಗಳು ಬಳಸಿ ವಿಸರ್ಜಿಸುವ ವಸ್ತುಗಳನ್ನು ಅತೀ ಗಂಭೀರ ಸನ್ನಿವೇಶದ ನಡುವೆ ನಾಶಗೊಳಿಸಲು ನಿಯೋಜಿಸಲಾಗುತ್ತಿದೆ.

ಪ್ರತ್ಯೇಕ ಟ್ರ್ಯಾಕ್ಟರ್‍ನೊಂದಿಗೆ ಈ ಪ್ರದೇಶಗಳ ಕಸ ಇತ್ಯಾದಿ ಸಂಗ್ರಹಿಸಿ ಹೊತ್ತೊಯ್ದು ನಾಶಪಡಿಸಲು ನಿತ್ಯವೂ ಹೆಣಗಾಡುವಂತಾಗಿದೆ. ಹೀಗೆ ಇರುವಂತಹ 12 ವಾಹನಗಳು ನಗರದ 23 ವಾರ್ಡ್‍ಗಳಲ್ಲಿ ಇರುವಷ್ಟು ಚಾಲಕರು ಮತ್ತು ನೌಕರರನ್ನು ಬಳಸಿಕೊಂಡು ಕಸ ವಿಲೇವಾರಿಯೊಂದಿಗೆ ಬೀದಿಗಳನ್ನು ಗುಡಿಸುತ್ತಿದ್ದಾರೆ.

ಹೀಗಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ನೈರ್ಮಲೀಕರಣಕ್ಕೆ ಇರುವಷ್ಟು ಕನಿಷ್ಟ ಪೌರ ಕಾರ್ಮಿಕರು ನಿತ್ಯ ಕಾಯಕನಿರತರಾಗಿ ಹೈರಾಣಾಗುತ್ತಿದ್ದಾರೆ. ಆದರೆ ಇವರ ನೋವು, ನಿತ್ಯದಗೋಳು ಕೇಳುವವರಿಲ್ಲದೆ ಒತ್ತಡದ ನಡುವೆ ಒಂದಿಲ್ಲೊಂದು ಕಾಯಿಲೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ ಎಂಬ ನೋವಿನಲ್ಲಿದ್ದಾರೆ. ಈ ಕೂಗು ಮೂಕವೇದನೆಯಾಗಿದೆ ಎಂದು ನೊಂದ ಕಾರ್ಮಿಕರು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.