ಕೊಡಗು ಜಿಲ್ಲೆ ಎಂದರೆ ತಕ್ಷಣ ನೆನಪು ಬರುವುದು ಕ್ರೀಡೆಯ ತವರೂರು ಎಂದು. ಹೌದು ಪುಟ್ಟ ಜಿಲ್ಲೆಯಿಂದ ಹಲವಾರು ಕ್ರೀಡಾಪಟುಗಳು, ವಿವಿಧ ಕ್ರೀಡೆಯಲ್ಲಿ ಇಂದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಕೆಲವು ಕ್ರೀಡಾಪಟುಗಳನ್ನು ನಮ್ಮ ಜಿಲ್ಲೆಗೆ ಗುರುತಿಸಿದರೆ, ಇನ್ನೂ ಕೆಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಸೂಕ್ತ ವೇದಿಕೆ ಹಾಗೂ ಆರ್ಥಿಕ ಸಮಸ್ಯೆಯಿಂದ ಕ್ರೀಡಾ ಜೀವನವನ್ನೇ ಅರ್ಧದಲ್ಲೇ ನಿಲ್ಲಿಸಿ, ಬೇರೆ ವೃತ್ತಿಯತ್ತ ಮುಖ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ, ಕೊಡಗಿನ ಏಕೈಕ ಆಟಗಾರ ಸುಂಟ್ಟಿಕೊಪ್ಪದ ಇಸ್ಮಾಯಿಲ್ ಹಾಗೂ ಜಮೀಲ ದಂಪತಿಯ ಪುತ್ರ, ಎಂ.ಇ ಜಂಶಾದ್ ಈತ ಎಲ್ಲರಂತೆ ಓಡಾಡುತ್ತಿದ್ದ ಹುಡುಗ. ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಮಾದಾಪುರದಲ್ಲಿ ಪೂರೈಸಿ, ತನ್ನ 18ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ತನ್ನ ಪದವಿ ಶಿಕ್ಷಣ ಪಡೆಯುವಾಗ ಅಪಘಾತವೊಂದರಲ್ಲಿ ತನ್ನ ಬಲ ಕೈ ಸ್ವಾಧೀನವನ್ನು ಕಳೆದುಕೊಳ್ಳುತ್ತಾನೆ.
ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕೆಂದು ಬಹಳ ಕನಸು ಕಂಡಿದ್ದ ಹುಡುಗ, ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಅರ್ಧದಲ್ಲೇ ತನ್ನ ಶಿಕ್ಷಣವನ್ನು ನಿಲ್ಲಿಸಿ, ಮಡಿಕೇರಿಯ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಶಾಲಾ ಹಾಗೂ ಕಾಲೇಜು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಜಂಶಾದ್, ಪತ್ರಿಕೆಯೊಂದರಲ್ಲಿ ವಿಶೇಷ ಚೇತನರ ಪ್ಯಾರ ಬ್ಯಾಡ್ಮಿಂಟನ್ ರಾಷ್ಟ್ರೀಯ ಮಟ್ಟದ ಆಯ್ಕೆ ಪ್ರಕ್ರಿಯೆ ಸುದ್ದಿ ನೋಡಿ, ಪ್ಯಾರಾ ಬ್ಯಾಡ್ಮಿಂಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಯ್ಕೆಗೊಂಡ. ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ, ಈತ ಈಗ ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರನಾಗಿದ್ದಾನೆ. ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಸಾಧನೆ ಮಾಡಿದ ಕೊಡಗಿನ ಏಕೈಕ ಹಾಗೂ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಜಂಶಾದ್ ಪಾತ್ರನಾಗಿ ದ್ದಾನೆ. ರಾಜ್ಯಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ವನ್ನು ಪಡೆದಿದ್ದಾನೆ. ಎಸ್.ಯು. 5 ವಿಭಾಗದಲ್ಲಿ ಜಂಶಾದ್ 11 ರ್ಯಾಂಕ್ ಪಡೆದಿದ್ದಾನೆ. ಪ್ಯಾರಾ ಬ್ಯಾಡ್ಮಿಂಟನ್ ಕೊಡಗಿನ ಏಕೈಕ ಆಟಗಾರ ಪ್ಯಾರಾ ಬ್ಯಾಡ್ಮಿಂಟನ್ ಎಸ್ಯು 5 ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ, ಪ್ರಸ್ತುತ ಕರ್ನಾಟಕ ರಾಜ್ಯವನ್ನು ಇಬ್ಬರು ಆಟಗಾರರು ಮಾತ್ರ ಪ್ರತಿನಿಧಿಸುತ್ತಿದ್ದಾರೆ. ಅದರಲ್ಲಿ ಕೊಡಗಿನ ಜಂಶಾದ್ ಕೂಡ ಒಬ್ಬನಾಗಿದ್ದಾನೆ.
ಹೈದರಾಬಾದ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾನೆ. 2019 ರಲ್ಲಿ ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಬಿ. ಡಬ್ಲ್ಯೂ ಇಂಟನ್ರ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ. ಅದೇ ವರ್ಷ ಥೈಲ್ಯಾಂಡ್ನಲ್ಲಿ ನಡೆದ ಬಿ.ಡಬ್ಲ್ಯೂ.ಎಫ್ ಥೈಲ್ಯಾಂಡ್ ಪ್ಯಾರಾ ಬ್ಯಾಡ್ಮಿಂಟನ್ ಇಂಟನ್ರ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಫ್ರೀ ಕ್ವಾಟರ್ ಫೈನಲ್ ತನಕ ಪ್ರವೇಶಿಸಿ, ಸಾಧನೆ ಮಾಡಿದ್ದಾನೆ.
ಜಂಶಾದ್ ಪ್ಯಾರಾ ಬ್ಯಾಡ್ಮಿಂಟನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ ಕೊಡಗಿನ ಮೊದಲ ಹಾಗೂ ಏಕೈಕ ಆಟಗಾರ. ಆರ್ಥಿಕ ಸಮಸ್ಯೆಯ ನಡುವೆಯೂ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದಾನೆ.
ಜಂಶಾದ್ ಇದೀಗ ತನ್ನ ಕುಟುಂಬ ನಿರ್ವಹಣೆಯ ಸಲುವಾಗಿ ಮಡಿಕೇರಿಯ ರಾಜಾಸೀಟ್ನಲ್ಲಿ ಚಿಪ್ಸ್, ಇನ್ನಿತರ ತಿಂಡಿ, ತಿನಿಸುಗಳ ಅಂಗಡಿಯೊಂದನ್ನು ತೆರೆದು ಜೀವನ ನಡೆಸುತ್ತಿದ್ದಾನೆ. ತನ್ನ ಬಲಗೈಯ, ಬಲವನ್ನೇ ಕಳೆದುಕೊಂಡಿರುವ ಜಂಶಾದ್, ಬಡತನ ಹಾಗೂ ಆರ್ಥಿಕ ಸಮಸ್ಯೆಯ ನಡುವೆಯೂ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಇನ್ನೂ ಅನೇಕ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಕಂಡಿದ್ದಾನೆ. ವಿಶೇಷ ಚೇತನರ ಬ್ಯಾಡ್ಮಿಂಟನ್ ಕ್ರೀಡಾಕೂಟ ಅಲ್ಲದೇ, ಇನ್ನಿತರ ರಾಜ್ಯ ಹಾಗೂ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ನಲ್ಲಿ ಭಾಗವಹಿಸಿ ಜಂಶಾದ್ ಹಲವಾರು ಪ್ರಶಸ್ತಿ ಗೆದ್ದಿದ್ದಾನೆ.
ಏನಿದು ಪ್ಯಾರಾ ಬ್ಯಾಡ್ಮಿಂಟನ್ ?: ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಒಟ್ಟು ಐದು ವಿಭಾಗಗಳಿವೆ. ವಿಶೇಷ ಚೇತನ ಪ್ರತಿಭೆಗಳಿಗೆ ಪ್ಯಾರಾ ಬ್ಯಾಡ್ಮಿಂಟನ್ ಉತ್ತಮ ವೇದಿಕೆಯಾಗಿದೆ. ಕೈ, ಕಾಲು, ಸೊಂಟ ಹೀಗೆ ದೇಹದ ವಿವಿಧ ಭಾಗಗಳ ಸ್ವಾಧೀನವನ್ನು ಕಳೆದುಕೊಂಡವರಿಗೆ ಪ್ಯಾರಾ ಬ್ಯಾಡ್ಮಿಂಟನ್ ನಲ್ಲಿ ಪ್ರತ್ಯೇಕ ವಿಭಾಗಗಳಿವೆ. ಆರ್ಥಿಕ ಸಮಸ್ಯೆಯಿಂದ ಹಲವಾರು ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಮಟ್ಟದ ಕ್ರೀಡಾಕೂಟಗಳು ನನ್ನ ಕೈ ತಪ್ಪಿದೆ. ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸು ಕಂಡಿದ್ದೇನೆ. ನನ್ನ ಕುಟುಂಬದವರು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಆದರೆ ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ.
ಮುಂದಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಹಲವಾರು ಕ್ರೀಡಾಕೂಟಗಳು ನಡೆಯಲಿದೆ. ಭಾಗವಹಿಸಬೇಕೆಂಬ ಕನಸು ಇದೆ. ಜಿಲ್ಲೆಯ ಕ್ರೀಡಾಪ್ರೇಮಿಗಳು, ನನಗೆ ಆರ್ಥಿಕ ಸಹಾಯ ಮಾಡಿದಲ್ಲಿ ಸಾಧನೆ ಮಾಡಬಲ್ಲೆ ಎಂಬ ವಿಶ್ವಾಸ ತನ್ನಲ್ಲಿದೆ ಎಂದು ಜಂಶಾದ್ ಹೇಳುತ್ತಾನೆ.
-ಕೆ. ಎಂ. ಇಸ್ಮಾಯಿಲ್ ಕಂಡಕರೆ