ಮಡಿಕೇರಿ, ಸೆ. 29: ನಗರದ ಹೃದಯ ಭಾಗದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಸ್ಮರಣಾರ್ಥ ಪ್ರತಿಮೆ ಅನಾವರಣದೊಂದಿಗೆ; ಈ ವೃತ್ತದಲ್ಲಿದ್ದ ಹೈಮಾಸ್ಟ್ ಬೆಳಕು ಕಂಬ ಬೇರೆ ಸ್ಥಳದಲ್ಲಿ ಸ್ಥಾಪಿಸಲು ನಗರಸಭೆ ನಿರ್ಧರಿಸಿತ್ತು. ಆದರೆ ಬದಲಿ ವ್ಯವಸ್ಥೆ ಕಲ್ಪಿಸದೆ ಈ ಕಂಬ ಅನಾಥವಾಗಿದೆ ಎಂದು ಇಲ್ಲಿನ ನಾಗರಿಕರು ಟೀಕಿಸಿದ್ದಾರೆ.
ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಆರಂಭಗೊಂಡಿದ್ದು, ಬೆಳಕು ವ್ಯವಸ್ಥೆ ಕಲ್ಪಿಸಲು ನಗರಸಭೆ ಮರೆತಂತಿದೆ ಎಂದು ಆರೋಪಿಸಿರುವ ನಾಗರಿಕರು; ದಸರಾ ಮುನ್ನ ಮರು ಬೆಳಕಿನ ವ್ಯವಸ್ಥೆಗೆ ಒತ್ತಾಯಿಸಿದ್ದಾರೆ.
ಅಲ್ಲದೆ, ಹಳೆಯ ಕಟ್ಟಡ ತೆರವುಗೊಳಿಸಿದ ಸ್ಥಳದಲ್ಲಿ ಪ್ರವಾಸಿಗರ ವೀಕ್ಷಣೆಗಾಗಿ ರೂಪಿಸಲು ಉದ್ದೇಶಿಸಿದ್ದ ರೂ. 3 ಕೋಟಿ ವೆಚ್ಚದ ಗ್ಯಾಲರಿ ಇತ್ಯಾದಿಯನ್ನು ನಿರ್ಮಿಸಲು ಕಾಳಜಿ ತೋರಬೇಕೆಂದು ಆಗ್ರಹಿಸಿದ್ದಾರೆ. ಈ ಜಾಗದಲ್ಲಿ ರೂ. 1 ಕೋಟಿಗೂ ಅಧಿಕ ಹಣ ವ್ಯಯಿಸಿರುವ ನಗರಸಭೆ, ಯಾವುದೇ ಪ್ರಯೋಜನವಾಗದಂತೆ ಪ್ರಸ್ತುತ ಈ ಜಾಗದಲ್ಲಿ ಕೆರೆಯಂತೆ ನೀರು ನಿಲ್ಲುವಂತಾಗಿದೆ ಎಂದು ಟೀಕಿಸಿದ್ದಾರೆ.