ಸೋಮವಾರಪೇಟೆ, ಸೆ.29: ಲಯನ್ಸ್ ಸಂಸ್ಥೆಯ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈರ್ವರು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೂಡಿಗೆ ಕ್ರೀಡಾಶಾಲೆಯ ಮುಖ್ಯಶಿಕ್ಷಕಿ ಕುಂತಿ ಬೋಪಯ್ಯ, ಹುಟ್ಟು ಸಾವಿನ ನಡುವಿನ ಅವಧಿಯಲ್ಲಿ ಒಂದಿಷ್ಟು ಸಮಾಜಸೇವೆ ಮಾಡಿದರೆ ಮಾತ್ರ ಜೀವನ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.

ಎಲ್ಲರೂ ವೃತ್ತಿಯನ್ನು ಪ್ರೀತಿಸಬೇಕು. ಆಗ ಮಾತ್ರ ಸೇವೆಯಲ್ಲಿ ಯಶಸ್ಸು ಪಡೆಯಲು ಸಾಧ್ಯ. ದೇಶಕ್ಕೆ ಅತ್ಯುತ್ತಮ ಪ್ರಜೆಗಳನ್ನು ನೀಡುವ ಕೆಲಸ ಮಾಡುತ್ತಿರುವ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರೊಂದಿಗೆ, ಅವರಲ್ಲಿ ಗುಣಾತ್ಮಕ ಚಿಂತನೆಗಳನ್ನು ಮೂಡಿಸುವ ಅಗತ್ಯತೆ ಇದೆ. ಕಳೆದ ಹಲವು ವರ್ಷಗಳಿಂದ ಲಯನ್ಸ್ ಸಂಸ್ಥೆ ಶಿಕ್ಷಕರನ್ನು ಗೌರವಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಎನ್. ತೇಜಸ್ವಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಗೆ ಗೌರವ ಸಲ್ಲಿಸಬೇಕೆಂದರು.

ಇದೇ ಸಂದರ್ಭ ಕಾಜೂರಿನ ದೈಹಿಕ ಶಿಕ್ಷಣ ಶಿಕ್ಷಕ ಬಿ.ಈ. ಅಜಿತ್‍ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಸಿ.ಕೆ. ರೋಹಿತ್, ಖಜಾಂಚಿ ಎಸ್.ಎನ್. ಯೋಗೇಶ್, ನಿಕಟಪೂರ್ವ ಅಧ್ಯಕ್ಷ ಎಂ.ಎ. ಹರೀಶ್ ಉಪಸ್ಥಿತರಿದ್ದರು.