ಮಡಿಕೇರಿ, ಸೆ. 29: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರು ಹಾಗೂ ವಾಟರ್‍ಮೆನ್‍ಗಳಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರವೇತನ ಜಾರಿಗೊಳಿಸುವಂತೆ ತಾ.28ರಂದು ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪ.ಪಂ. ಹೊರಗುತ್ತಿಗೆ ವಾಹನ ಚಾಲಕರ ಸಂಘದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾ ಘಟಕ ನಗರಸಭೆ ಪೌರಾಯುಕ್ತ ರಾಮ್‍ದಾಸ್ ಅವರಿಗೆ ಹಲವು ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿತು.
ರಾಜ್ಯದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ವಾಟರ್‍ಮೆನ್‍ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರವೇತನ ಜಾರಿ ಮಾಡುವಂತೆ ಮನವಿ ಮಾಡಲಾಯಿತು. ನಗರಗಳ ಸ್ವಚ್ಛತೆ ನಿರ್ವಹಣೆಯಲ್ಲಿ ತ್ಯಾಜ್ಯ ಸಾಗಾಣಿಕೆಯ ಚಾಲಕರ ಪಾತ್ರ ದೊಡ್ಡದಾಗಿದ್ದು, ಪೌರಕಾರ್ಮಿಕರಿಗೆ ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಾಗೆಯೇ ವಾಟರ್‍ಮೆನ್‍ಗಳು ಸಹ ಯಾವುದೇ ಸೇವಾ ಭದ್ರತೆಯಿಲ್ಲದೆ ಕನಿಷ್ಟ ವೇತನಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಆಧಾರಿತ ನೌಕರರನ್ನು ನೇರವೇತನಕ್ಕೆ ಒಳಪಡಿಸುವಂತೆ ಮನವಿ ಮೂಲಕ ಒತ್ತಾಯಿಸ ಲಾಯಿತು. ಈ ಸಂದರ್ಭ ಸಂಘದ ಜಿಲ್ಲಾ ಅಧ್ಯಕ್ಷ ವೀರಪ್ಪ, ಕಾರ್ಯದರ್ಶಿ, ಖಜಾಂಚಿ ಹಾಗೂ ಸದಸ್ಯರು ಹಾಜರಿದ್ದರು.