ಕೂಡಿಗೆ, ಸೆ. 29: ಹುದುಗೂರಿನ ತೋಟದಲ್ಲಿ ಬೀಡುಬಿಟ್ಟಿದ್ದ 10 ಕಾಡಾನೆಗಳನ್ನು ಗ್ರಾಮಸ್ಥರು ನದಿ ದಾಟಿಸಿ ಬೆಂಡೆಬೆಟ್ಟದ ಕಾಡಿಗೆ ಓಡಿಸಿದ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ ಹುದುಗೂರು ಗ್ರಾಮದ ಸುಶೀಲಮ್ಮ ಎಂಬವರ ತೋಟದಲ್ಲಿ ಕಳೆದ 2 ದಿನಗಳ ಹಿಂದೆ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ ಬೆಂಡೆಬೆಟ್ಟದ ಕಾಡಿಗೆ ಅಟ್ಟಿದ್ದಾರೆ. ಮರಿಆನೆ ಸೇರಿದಂತೆ 10 ಕಾಡಾನೆಗಳು ನದಿಯನ್ನು ದಾಟಿ ಕಾಡಿನತ್ತ ಧಾವಿಸಿವೆ. ಕಳೆದ ಮೂರು ವರ್ಷಗಳಿಂದ ಹುದುಗೂರು, ಮಾವಿನಳ್ಳ, ಬ್ಯಾಡಗೊಟ್ಟ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ರೈತರ ಗದ್ದೆ, ಬೆಳೆಗಾರರ ತೋಟಗಳಿಗೆ ನುಗ್ಗಿ ದಾಳಿ ಮಾಡಿ ತೀವ್ರ ಪ್ರಮಾಣದ ಹಾನಿ ಉಂಟುಮಾಡುತ್ತಿವೆ.

ಈ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಅರಣ್ಯ ಇಲಾಖೆ ಜಿಲ್ಲಾ ಮಟ್ಟದ ಸಭೆ ಸೇರಿ ಶಾಸಕರು, ಉಸ್ತುವಾರಿ ಸಚಿವರು, ಇತರ ಪ್ರಮುಖ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸುವ ಕುರಿತು ಗ್ರಾಮಸ್ಥರು ಮನವಿ ಮಾಡಿದ್ದರು. ಇದಕ್ಕೆ ಯಾವುದೇ ಸ್ಪಂದನ ದೊರಕದೆ ಯಾವ ಸಭೆಯು ಇದುವರೆಗೆ ನಡೆಯಲಿಲ್ಲ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ. ಯಾರಿಂದಲೂ ಸ್ಪಂದನ ದೊರಕದ ಕಾರಣ ಗ್ರಾಮಸ್ಥರು ಇಂದು ತಾವೇ ಹರಸಾಹಸ ಪಟ್ಟು 10 ಆನೆಗಳನ್ನು ಕಾಡಿಗೆ ಅಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. -ಕೆ.ಕೆ.ಎನ್.