ಸೋಮವಾರಪೇಟೆ, ಸೆ.29: ಸೋಮವಾರಪೇಟೆಯ ಉದ್ಯಮಿ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಪಟ್ಟಣ ಸಮೀಪದ ಕಾನ್ವೆಂಟ್ ಶಾಲೆ ಹತ್ತಿರದ ನಿವಾಸಿ, ಅಲೋಕ ಫ್ಯಾಮಿಲಿ ರೆಸ್ಟೋರೆಂಟ್‍ನ ಮಾಲೀಕ ಬಿ.ಎಸ್. ಸದಾನಂದ್(63) ಅವರು ಅನಾರೋಗ್ಯದಿಂದ ತಾ. 29ರಂದು ನಿಧನರಾದರು.ವಿದ್ಯಾರ್ಥಿ ಜೀವನದಲ್ಲಿಯೇ ರಾಮಕೃಷ್ಣ ಶಾರದಾಶ್ರಮದ ಒಡನಾಟ ಇಟ್ಟುಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸದಾನಂದ್ ಅವರು, ಸೋಮವಾರಪೇಟೆ ಭಾಗದಲ್ಲಿ ‘ಅಲೋಕ ಸದಾನಂದ್’ ಎಂದೇ ಚಿರಪರಿಚಿತರಾಗಿದ್ದರು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಾ. 29ರಂದು ಸಂಜೆ 6.25ಕ್ಕೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.
ರೋಟರಿ ಸಂಸ್ಥೆಯ ಮಾಜೀ ಸಹಾಯಕ ರಾಜ್ಯಪಾಲ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಮಾಜೀ ನಿರ್ದೇಶಕ, ಟ್ರಸ್ಟ್‍ನ ಹಾಲಿ ನಿರ್ದೇಶಕ, ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿಯ (ಮೊದಲ ಪುಟದಿಂದ) ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇದರೊಂದಿಗೆ ರೋಟರಿ ಸಂಸ್ಥೆಯಲ್ಲಿ ಹೆಚ್ಚು ಸಮಾಜ ಸೇವೆ ಮಾಡುತ್ತಿದ್ದ ಸದಾನಂದ್ ಅವರು, ಸೋಮವಾರಪೇಟೆಯ ವಿವಿಧ ಕಾಲೇಜಿನಲ್ಲಿ ರೋಟರ್ಯಾಕ್ಟ್ ಘಟಕ ತೆರೆದು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತಮ್ಮ ವಿದ್ಯಾಭ್ಯಾಸ ಮುಗಿಸಿ ಕೆಲಸವಿಲ್ಲದೇ ಜಿಗುಪ್ಸೆ ಹೊಂದಿದ ಸಂದರ್ಭ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಜಗದಾತ್ಮಾನಂದಜೀ ಅವರ ‘ಬದುಕಲು ಕಲಿಯಿರಿ’ ಪುಸ್ತಕದಿಂದ ಮತ್ತೆ ಪ್ರೇರಣೆ ಪಡೆದು ಸ್ವಉದ್ಯಮದಲ್ಲಿ ತೊಡಗಿದ ಪರಿಣಾಮ ಯಶಸ್ವಿ ಉದ್ಯಮಿಯಾಗಿ ರೂಪುಗೊಂಡ ಬಗ್ಗೆ ಹಲವಾರು ಸಭೆಗಳಲ್ಲಿ ನೆನಪಿಸಿಕೊಳ್ಳುತ್ತಿದ್ದರು.
ಸಂತಾಪ: ರೋಟರಿ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ವಲಯ ಅಧ್ಯಕ್ಷರಾಗಿ, ಸಹಾಯಕ ರಾಜ್ಯಪಾಲರಾಗಿ, ಸೇವೆ ಸಲ್ಲಿಸಿದ್ದ ಸದಾನಂದ್ ಅವರ ಅಗಲಿಕೆಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಮಾಜೀ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಹೆಚ್.ಆರ್.ಸುರೇಶ್, ಬ್ಲಾಕ್ ಕಾಂಗ್ರೆಸ್ ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ಡಿಸಿಸಿ ಬ್ಯಾಂಕ್ ಮಾಜೀ ಅಧ್ಯಕ್ಷ ಬಿ.ಡಿ. ಮಂಜುನಾಥ್, ಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಬಿ.ಎ. ಭಾಸ್ಕರ್, ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಕಾರ್ಯದರ್ಶಿ ಎಸ್. ಮಹೇಶ್, ಖಜಾಂಚಿ ಮೃತ್ಯುಂಜಯ ಜಯಣ,್ಣ ಜಿಲ್ಲ ಚೇಂಬರ್ ಆಫ್ ಕಾಮರ್ಸ್ ಟ್ರಸ್ಟ್ ಅಧ್ಯಕ್ಷ ಸೇರಿದಂತೆ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತ ಸದಾನಂದ್ ಅವರು ಪತ್ನಿ ರಾಜಶ್ರೀ ಸೇರಿದಂತೆ ಈರ್ವರು ಪುತ್ರರು, ಐದು ಮಂದಿ ಸಹೋದರರು, ಆರು ಮಂದಿ ಸಹೋದರಿಯರನ್ನು ಅಗಲಿದ್ದು, ತಾ. 30ರಂದು ಅಂತ್ಯಕ್ರಿಯೆ ನಡೆಯಲಿದೆ.