ಮಡಿಕೇರಿ, ಸೆ. 29 : ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯೊಂದಿಗೆ ಬೆಟ್ಟ-ಗುಡ್ಡಗಳಿಂದ ಆವೃತ್ತವಾಗಿದ್ದು, ಭೌಗೋಳಿಕವಾಗಿಯೂ ವಿಭಿನ್ನ ರೀತಿಯಲ್ಲಿರುವ ಬಹುತೇಕವಾಗಿ ಕೃಷಿಯನ್ನೇ ಅವಲಂಬಿತವಾಗಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಬೆಳೆಗಾರರು - ರೈತರು ನಿರಂತರವಾಗಿ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ. ಮಡಿಕೇರಿ, ಸೆ. 29 : ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯೊಂದಿಗೆ ಬೆಟ್ಟ-ಗುಡ್ಡಗಳಿಂದ ಆವೃತ್ತವಾಗಿದ್ದು, ಭೌಗೋಳಿಕವಾಗಿಯೂ ವಿಭಿನ್ನ ರೀತಿಯಲ್ಲಿರುವ ಬಹುತೇಕವಾಗಿ ಕೃಷಿಯನ್ನೇ ಅವಲಂಬಿತವಾಗಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಬೆಳೆಗಾರರು - ರೈತರು ನಿರಂತರವಾಗಿ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ. ಭತ್ತವೂ ಸಾಮಾನ್ಯವಾಗಿ ಎಲ್ಲೆಡೆ ಬೆಳೆಯುವಂತದ್ದು, ಇದರೊಂದಿಗೆ ಸಂಪಾಜೆ, ಪೆರಾಜೆ ವ್ಯಾಪ್ತಿಯಲ್ಲಿ ಅಡಿಕೆ, ಗೇರು, ಕೊಕೋದಂತಹ ಬೆಳೆಗಳು ಕಂಡುಬರುತ್ತವೆ. ಹಲವೆಡೆ ಅಂಥೂರಿಯಂ ಸೇರಿದಂತೆ ಪುಷ್ಪೋದ್ಯಮಕ್ಕೂ ಜನತೆ ಆಸಕ್ತಿ ತೋರುತ್ತಾರೆ. ವಿಪರ್ಯಾಸವೆಂದರೆ ಬಹುತೇಕ ಈ ಎಲ್ಲಾ ಫಸಲುಗಳ ಮೇಲೆ ವಾತಾವರಣದ ಅಸಹಜತೆ ಒಂದಲ್ಲಾ ರೀತಿಯಲ್ಲಿ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತಿದೆ. ಇದು ಕೇವಲ ಈ ವರ್ಷದ ಪರಿಸ್ಥಿತಿಯೂ ಅಲ್ಲ. ಕಳೆದ ಹಲವು ವರ್ಷಗಳಿಂದ ಎದುರಾಗುತ್ತಿರುವ ನಿರಂತರವಾದ ಸಮಸ್ಯೆಯಾಗಿದೆ. ಒಂದೊಂದು ವ್ಯಾಪ್ತಿಯಲ್ಲಿ ಒಂದೊಂದು ರೀತಿಯ ಸಮಸ್ಯೆ ಇದೆ. ಈ ವರ್ಷದ ಪರಿಸ್ಥಿತಿಯಂತೆ ಜಿಲ್ಲೆಯಲ್ಲಿ ವಿವಿಧ ರೀತಿಯ ಫಸಲನ್ನು ಬೆಳೆಯುತ್ತಿರುವ ಬೆಳೆಗಾರರು, ರೈತರ ನೈಜ ಸ್ಥಿತಿ-ಗತಿಗಳ ಕುರಿತಾಗಿ ಕೆಲವು ಬೆಳೆಗಾರರ ಅನುಭವ ಸಹಿತವಾಗಿ ‘ಶಕ್ತಿ’ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನವನ್ನು ನಡೆಸಿದೆ.
(ಮೊದಲ ಪುಟದಿಂದ)
ಕಾಫಿ ಉದುರುವಿಕೆಗೆ ನಿರಂತರ ಮಳೆ ಕಾರಣ
ಪ್ರಸ್ತುತ ವರ್ಷದಲ್ಲಿ ಕಾಫಿ ಉದುರುವಿಕೆ ತೀರಾ ಹೆಚ್ಚಾಗುತ್ತಿದೆ. ನಿರಂತರವಾಗಿ ಮಳೆಯಾಗಿರುವದು ಇದಕ್ಕೆ ಕಾರಣ ಎನ್ನುತ್ತಾರೆ. ಇಬ್ನಿವಳವಾಡಿಯ ಬೆಳೆಗಾರ ಪೊನ್ನಚೆಟ್ಟೀರ ಸುರೇಶ್ ಸುಬ್ಬಯ್ಯ ಅವರು. ಮಳೆಗಾಲದ ಅವಧಿಯ ಮಳೆಗೂ ನಂತರದ ಹಿಂಗಾರು ಮಳೆಗೂ ವ್ಯತ್ಯಾಸವಿದೆ.
ಮಳೆಗಾಲದಲ್ಲಿ ಗಿಡಗಳು ಬಹುತೇಕ ಸ್ತಬ್ದ ರೀತಿಯಲ್ಲಿರುತ್ತವೆ. ಈ ಸಂದರ್ಭ ಹೆಚ್ಚು ಸಮಸ್ಯೆ ಎನಿಸದು ಆದರೆ ನಂತರದ ದಿನಗಳಲ್ಲಿ ಬಿಸಿಲು ಕಾಣಿಸಿಕೊಂಡಾಗ ಗಿಡಗಳ ಬೇರು ಚಿಗುರಲಾರಂಭಿಸುತ್ತವೆ. (ರೂಟ್ ಫಾರ್ಮೇಶನ್) ಇದರಿಂದ ಗಿಡಗಳಲ್ಲಿ ಚಿಗುರೊಡೆಯಲಾರಂಭಿಸುತ್ತದೆ. ಆದರೆ ಈ ಬಾರಿ ಕೆಲ ಸಮಯ ಬಿಸಿಲು ಮೂಡಿ ಮತ್ತೆ ನಿರಂತರ ಮಳೆ ಬಂದ ಕಾರಣದಿಂದಾಗಿ ಬೇರುಗಳು ಕೊಳೆತು ಬೆಳವಣಿಗೆ ಸ್ಥಗಿತವಾಗಿ ಕಾಫಿ ಉದುರುವಿಕೆ ಹೆಚ್ಚಾಗುತ್ತಿದೆ. ಸುಳಿ ಬರುತ್ತಿದ್ದ ಎಲೆಗಳು ಕೊಳೆಯಲಾರಂಭಿಸಿವೆ. ಅಧಿಕ ತೇವಾಂಶ ಹಾಗೂ ನಿರಂತರ ಮಳೆ ಇದಕ್ಕೆ ಕಾರಣವಾಗಿದ್ದು, ಹಿಡಿದ ಫಸಲು ನೆಲಕಚ್ಚುತ್ತಿರುವದಾಗಿ ಅವರು ಹೇಳಿದರು. ಕಾಫಿಯೊಂದಿಗೆ ಕಿತ್ತಳೆಯನ್ನು ಬೆಳೆಯುತ್ತಿರುವ ಸುರೇಶ್ ಅವರು ಸತತ ಮಳೆಯಿಂದ ಕಿತ್ತಳೆಯೂ ಬೇವು ಬರುತ್ತಿದೆ. ಜೂನ್ ಸಂದರ್ಭದಲ್ಲಿ ಮಾಡುವ ಸ್ಪ್ರೇಯ ಪರಿಣಾಮ ಸುಮಾರು 40-45 ದಿವಸದವರೆಗೆ ಇರುತ್ತದೆ. ಆದರೆ ಮತ್ತೆ ಮಳೆ ಅಧಿಕವಾದಾಗ ಕಿತ್ತಳೆ ಬೇವು ಬಂದು ನಾಶವಾಗುತ್ತದೆ. ಬೇವು ಬಂದು ಬಿದ್ದ ಕಿತ್ತಳೆಯನ್ನು ಗುಂಡಿ ತೆಗೆದು ಸುಣ್ಣ ಹಾಕಿ ಮುಚ್ಚಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಮುಂದಿನ ಫಸಲಿಗೂ ಇದು ಧಕ್ಕೆ ತರಲಿದೆ ಎನ್ನುತ್ತಾರೆ ಅವರು.
ಕರಿಮೆಣಸಿಗೂ ಹಾಳು
ಕರಿಮೆಣಸು ಫಸಲಿಗೂ ಈಗಿನ ಮಳೆ ವ್ಯತಿರಿಕ್ತವಾಗಿದೆ. ಗಿಡಗಳ ಬೇರು ಕೊಳೆತು ‘ಬ್ಯ್ಲಾಕ್ ಬಿಲ್ಟ್’ ಕಾಣಿಸಿಕೊಳ್ಳುತ್ತದೆ. ಇದರಿಂದ ಕೊತ್ತು ಉದುರಲಾರಂಭಿಸಿವೆ. ಬಳ್ಳಿಗಳು ಹಾಳಾಗುತ್ತಿದ್ದು, ಇದನ್ನು ತೆಗೆದು ಮತ್ತೆ ಮರುನಾಟಿ ಮಾಡುವಂತಾಗಲಿದೆ ಎಂದರು. ಏಲಕ್ಕಿ ಫಸಲಿಗೂ ಇದು ಧಕ್ಕೆಯಾಗಿದೆ. ಹೂ ಹಾಗೂ ಕಾಯಿ ಕೊಳೆಯುವದಲ್ಲದೆ ಗಿಡಗಳ ಕಂಡೆ ಕೂಡ ಕೊಳೆತು ಹಾನಿಯಾಗುತ್ತದೆ. ಭತ್ತದ ಫಸಲೂ ಸತತ ಮಳೆಯಿಂದ ಟಿಸಿಲೊಡೆಯದೆ ಬೆಳೆ ಸಮೃದ್ಧವಾಗಿ ಬರುವದಿಲ್ಲ ಎಂದು ವಿವರವಿತ್ತರು.
ಬೆಂಬಲ ಬೆಲೆಯೇ ಅನಿವಾರ್ಯ
ಸತತ ಮಳೆ - ಗಾಳಿಯ ಪರಿಣಾಮ ತೇವಾಂಶ ಹೆಚ್ಚಾಗಿ ಕಾಫಿ ಫಸಲು ನೆಲಕಚ್ಚುತ್ತಿದೆ. ಇದರ ತಡೆಗೆ ಬೋಡೋ ಸಿಂಪಡಿಸುವ ಸಲಹೆಯಿದ್ದರೂ ಪ್ರತಿಕೂಲ ಹವಾಮಾನ - ವಿಪರೀತ ಖರ್ಚಿನಿಂದ ಇದು ಸಾಧ್ಯವಾಗದು. ಪ್ರಸಕ್ತ ವರ್ಷ ಮಳೆಯೊಂದಿಗೆ ಗಾಳಿಯೂ ಹೆಚ್ಚಿದ್ದು, ಗಿಡದ ರೆಂಬೆಗಳು ಒಂದಕ್ಕೊಂದು ಉಜ್ಜುವದರಿಂದಲೂ ಹಾನಿಯಾಗಿದೆ. ಇದರೊಂದಿಗೆ ರೆಕ್ಕೆ ಮುರಿದಿರುವದು, ಮರಗಳು ಬಿದ್ದಿರುವದು ಕೂಡ ಹೊಡೆತವಾಗಿವೆ ಎಂದು ಕಕ್ಕಬೆ ವಿಭಾಗದ ಬೆಳೆಗಾರ ಪಾಂಡಂಡ ನರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಡ್ಡಿ ಮನ್ನಾ, ಸಾಲಮನ್ನಾ ಬೇಡಿಕೆಗಳಿಗೂ ಸ್ಪಂದನವಿಲ್ಲ. ಸತತ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಕೂಡ ಹೆಚ್ಚು ಉಪಯೋಗವಾಗದು. ಈ ಹಿನ್ನೆಲೆಯಲ್ಲಿ ಕಾಫಿಗೆ ಸರಕಾರ ಬೆಂಬಲ ಬೆಲೆ ನೀಡುವದೇ ಸೂಕ್ತ ಎಂದ ಅವರು ಕಳೆದ 15-18 ವರ್ಷಗಳಿಂದ ಕಾಫಿಧಾರಣೆ ಇಳಿತ ಕಂಡಿದೆಯೇ ಹೊರತು ಇತರ ಬೆಳೆಗಳಂತೆ ಹೆಚ್ಚಾಗಿಲ್ಲ. ಆದರೆ ಹದಿನೈದು ವರ್ಷಗಳ ಹಿಂದಿನ ಖರ್ಚಿಗೂ ಪ್ರಸ್ತುತದ ನಿರ್ವಹಣಾ ವೆಚ್ಚಕ್ಕೂ ಹೋಲಿಕೆ ಮಾಡಲಾಗದು ಇದು ಭಾರೀ ಹೆಚ್ಚಳವಾಗಿದೆ. ಈ ಬಾರಿ ಶೇ. 50ಕ್ಕಿಂತಲೂ ಫಸಲು ನಾಶದ ಸಾಧ್ಯತೆ ಇದ್ದು, ಬೆಳೆಗಾರರಿಗೆ ಬೆಂಬಲ ಬೆಲೆಯೇ ಸೂಕ್ತ ಪರಿಹಾರವಾಗಲಿದೆ ಎಂದರು.