ಚೀನಾ ಗಡಿಗೆ ನಿರ್ಭಯಾ ಕ್ಷಿಪಣಿ
ನವದೆಹಲಿ, ಸೆ.29 : ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ, ಅಹಿತಕರ ವಾತಾವರಣ ನಿರ್ಮಾಣವಾಗಿದ್ದು ಚೀನಾವನ್ನು ಎದುರಿಸಲು ಗಡಿಯಲ್ಲಿ 800 ಕಿ.ಮೀ ದೂರಕ್ಕೆ ಸಾಗಬಲ್ಲ ನಿರ್ಭಯಾ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಭಾರತ ನಿಯೋಜಿಸಿದೆ. ಟಿಬೆಟ್ ಹಾಗೂ ಕ್ಸಿನ್ ಝಿಯಾಂಗ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡರ್ ಸುಮಾರು 2 ಸಾವಿರ ಕಿಲೋಮೀಟರ್ ದೂರ ಸಾಗಿ ಶತ್ರು ಪಾಳಯದ ಗುರಿಯನ್ನು ಭೇದಿಸಬಲ್ಲ ಕ್ಷಿಪಣಿಗಳನ್ನು ನಿಯೋಜಿಸಿದ್ದು ಇದಕ್ಕೆ ಪ್ರತಿಯಾಗಿ ಭಾರತ ಸಹ ಕ್ಷಿಪಣಿಗಳನ್ನು ನಿಯೋಜಿಸಿದೆ. ಪೂರ್ವ ಲಡಾಖ್ ನಲ್ಲಿ 500 ಕಿ.ಮೀ ದೂರಕ್ಕೆ ಸಾಗಬಲ್ಲ ಬ್ರಹ್ಮೋಸ್, ನಿರ್ಭಯಾ, 40 ಕಿ.ಮೀ ಅಂತರವನ್ನು ಭೇದಿಸಬಲ್ಲ ನೆಲದಿಂದ ಆಗಸಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಗಳನ್ನು ಭಾರತೀಯ ಸೇನೆ ನಿಯೋಜಿಸಿದೆ. ಪೂರ್ವ ಲಡಾಕ್ ನ ಹಲವು ಘರ್ಷಣೆ ಕೇಂದ್ರಗಳಲ್ಲಿ ಯಥಾಸ್ಥಿತಿ ಮುಂದುವರಿದಿದ್ದು ಭಾರತೀಯ ಸೇನಾಪಡೆ ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ. ವಿಶೇಷವಾಗಿ ವಾಯುಪಡೆ ಚೀನಾದ ಸೇನಾಪಡೆಯ ಯಾವುದೇ ದುಸ್ಸಾಹಸವನ್ನು ಎದುರಿಸಲು ಬದ್ಧವಾಗಿದೆ ಮತ್ತು ಸಿದ್ದವಾಗಿದೆ.
ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ
ವಿಶ್ವಸಂಸ್ಥೆ, ಸೆ.29 : ಕೊರೊನಾ ವೈರಸ್(ಕೊವಿಡ್ -19) ಸೋಂಕಿನಿಂದ ವಿಶ್ವದಾದ್ಯಂತ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು `ಸಂಕಟದ ಮೈಲಿಗಲ್ಲು' ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ನೋವಿನಿಂದ ಹೇಳಿದ್ದಾರೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ನವೀಕೃತ ವರದಿಯಂತೆ ವಿಶ್ವಾದ್ಯಂತ ಕೋವಿಡ್ ಸಾವುಗಳ ಸಂಖ್ಯೆ 10 ಲಕ್ಷ ದಾಟಿದ್ದು, 3 ಕೋಟಿ 30 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇದುವರೆಗೆ ದೃಢಪಟ್ಟಿವೆ. ಸೋಂಕಿನಿಂದ ಈವರೆಗೆ 2 ಕೋಟಿ 30 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ.
ಮೋಟಾರು ವಾಹನ ತೆರಿಗೆ ಇಳಿಕೆ
ಬೆಂಗಳೂರು, ಸೆ.29 : ರಾಜ್ಯದಲ್ಲಿನ 13 ರಿಂದ 20 ಆಸನ ಸಾಮಥ್ರ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗಧಿಪಡಿಸಿರುವ 900 ರೂ.ಗಳ ಮೋಟಾರು ವಾಹನ ತೆರಿಗೆಯನ್ನು 700 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಮೋಟಾರು ವಾಹನಗಳ ತೆರಿಗೆಯನ್ನು ಇಳಿಸಬೇಕೆಂದು ಹಲವಾರು ವಾಹನ ಮಾಲೀಕರು, ವಿವಿಧ ಸಂಘಟನೆಗಳು ಸಲ್ಲಿಸಿದ್ದ ಬೇಡಿಕೆಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ 1957 ರಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.
4 ಸ್ಥಾನಗಳಿಗೆ ಅ.28 ರಂದು ಚುನಾವಣೆ
ನವದೆಹಲಿ, ಸೆ.29 : ಕರ್ನಾಟಕದ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಮುಂದಿನ ಅ.28 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಅ.1ರಂದು ಪರಿಷತ್ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅ.8ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಅ.9, ನಾಮಪತ್ರ ಹಿಂದಕ್ಕೆ ಪಡೆಯಲು ಅ.12 ಕೊನೆಯ ದಿನವಾಗಿದೆ. ನ.2 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆಗ್ನೇಯ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಅ.28ರಂದು ಚುನಾವಣೆ ನಡೆಯಲಿದೆ. ಕಳೆದ ಜೂ.30 ಕ್ಕೆ ಚೌಡರೆಡ್ಡಿ ತೂಪಲ್ಲಿ, ಎಸ್.ವಿ.ಸಂಕನೂರ, ಶರಣಪ್ಪ ಮಟ್ಟೂರು ಮತ್ತು ಪುಟ್ಟಣ್ಣ ಅವರ ಅವಧಿ ಕೊನೆಗೊಂಡಿದ್ದು, ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ
ನವದೆಹಲಿ, ಸೆ.29 : ರಾಷ್ಟ್ರೀಯ ಏಯ್ಡ್ಸ್ ನಿಯಂತ್ರಣ ಸಂಸ್ಥೆ ಮತ್ತು ಕಾನೂನು ಸೇವಾ ಪ್ರಾಧಿಕಾರಿಗಳಿಂದ ಗುರುತಿಸಲ್ಪಟ್ಟ ಲೈಂಗಿಕ ಕಾರ್ಯಕರ್ತೆಯರಿಗೆ ಗುರುತಿನ ಪುರಾವೆಗೆ ಒತ್ತಾಯಿಸದೆ ಒಣ ಪಡಿತರವನ್ನು ಪೂರೈಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಈ ಅವಧಿಯಲ್ಲಿ ಒಣ ಪಡಿತರವನ್ನು ವಿತರಿಸಿದ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆಯ ವಿವರದ ಬಗ್ಗೆ ಅನುಸರಣಾ ವರದಿಯೊಂದನ್ನು ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೆ ಉನ್ನತ ನ್ಯಾಯಾಲಯ ಸೂಚಿಸಿದೆ. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಹಣಕಾಸಿನ ನೆರವು ನೀಡಬಹುದೇ ಎಂಬ ಅಂಶದ ಬಗ್ಗೆ ನಂತರ ಕೋರ್ಟ್ ವ್ಯವಹರಿಸಲಿದೆ ಎಂದು ನ್ಯಾಯಾಧೀಶರಾದ ಎಲ್. ನಾಗೇಶ್ವರ ರಾವ್ ಮತ್ತು ಅಜಯ್ ರಾಸ್ಟೋಗಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.ಈ ವಿಷಯದ ಬಗ್ಗೆ ವಿಚಾರಣೆಯನ್ನು ನಾಲ್ಕು ವಾರಗಳ ನಂತರ ನಡೆಸಲು ನ್ಯಾಯಾಲಯ ಮುಂದೂಡಿತು.
ಮುನಿರತ್ನಗೆ ಬಿಜೆಪಿ ಟಿಕೆಟ್
ಬೆಂಗಳೂರು, ಸೆ.29 : ಪಕ್ಷದ ಭರವಸೆಯಂತೆ ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆಗೆ ಮುನಿರತ್ನ ಅವರಿಗೇ ಟಿಕೆಟ್ ಸಿಗುವ ವಿಶ್ವಾಸವಿದ್ದು, ಯಾವುದೇ ಪ್ರತಿರೋಧವಿಲ್ಲದೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ. ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರು ಶಾಸಕಸ್ಥಾನ ತ್ಯಜಿಸಿ ಸರಕಾರ ರಚನೆಗಾಗಿ ಕೊಡುಗೆ ನೀಡಿದ್ದಾರೆ. ಆ ವೇಳೆ ನೀಡಿದ ಭರವಸೆಯಂತೆ ಹಿರಿಯ ನಾಯಕರು ಖಂಡಿತ ನ್ಯಾಯಯುತವಾದ ತೀರ್ಮಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಉಪ ಚುನಾವಣೆಯಲ್ಲಿ ಗೆದ್ದ ನಮ್ಮೆಲ್ಲರಿಗೂ ಭರವಸೆಯಂತೆ ನಡೆದುಕೊಂಡಿದ್ದಾರೆ. ಹೀಗಾಗಿ ಮುನಿರತ್ನ ಅವರಿಗೂ ಸಹ ಈ ಬಾರಿ ಯಾವುದೇ ಅನ್ಯಾಯವಾಗುವುದಿಲ್ಲ. ಯಾರಿಗೆ ಆದ್ಯತೆ ನೀಡಬೇಕು ಎಂಬುದು ಪಕ್ಷದನಾಯಕರಿಗೆ ತಿಳಿದಿದೆ ಎಂದು ಹೇಳಿದರು.
ಮಂಗಳೂರು ಸಿಸಿಬಿಯಿಂದ ಮತ್ತೊಬ್ಬ ವಶ
ಮಂಗಳೂರು, ಸೆ.29 : ಡ್ರಗ್ ಮಾಫಿಯಾ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮಂಗಳೂರಿನ ಸಿಸಿಬಿ ಪೊಲೀಸರು ಮಂಗಳವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರು ಪೊಲೀಸರು ಮುಂಬೈನಲ್ಲಿ ಈತನನ್ನು ಬಂಧಿಸಿದ್ದು, ಆರೋಪಿಯನ್ನು ಶಾನ್ ಎಂದು ಗುರುತಿಸಲಾಗಿದೆ. ಶಾನ್ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾದ ಡ್ರಗ್ಸ್ ಪೆಡ್ಲರ್ ಮತ್ತು ಡಾನ್ಸರ್ ಕಿಶೋರ್ ಶೆಟ್ಟಿಯ ಸ್ನೇಹಿತ ಎಂದು ಹೇಳಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೂರನೇ ಆರೋಪಿ ಮೊಹಮ್ಮದ್ ಶಕೀರ್ ಅವರೊಂದಿಗೆ ಸಹ ಶಾನ್ ಸಂಪರ್ಕ ಹೊಂದಿದ್ದನೆಂದು ತಿಳಿದು ಬಂದಿದೆ. ಮೂಲತಃ ಮಂಗಳೂರಿನ ಬಂದರು ನಿವಾಸಿಯಾಗಿರುವ ಶಾನ್, ತರುಣ್ ರಾಜ್ನ ಪಾರ್ಟಿಗಳಿಗೆ ಡ್ರಗ್ಸ್ ನೀಡುತ್ತಿದ್ದ. ಇತ್ತೀಚಿಗೆ ಬಂಧನವಾಗಿದ್ದ ಶಾಕೀರ್ ಮೂಲಕ ಡ್ರಗ್ಸ್ ಪಾರ್ಟಿಗಳಿಗೆ ಶಾನ್ ನಿಂದ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂಬ ಮಾಹಿತಿ ಆಧರದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಸೋನು ಸೂದ್ಗೆ ವಿಶ್ವಸಂಸ್ಥೆ ಪ್ರಶಸ್ತಿ
ನವದೆಹಲಿ, ಸೆ.29 : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ನಟ ಸೋನು ಸೂದ್ ಸಾರಿಗೆ ವ್ಯವಸ್ಥೆ ಮಾಡಿ ತಲುಪಿಸಿದ್ದು ಅವರ ಲೋಕೋಪಕಾರಿ ಕೆಲಸಕ್ಕಾಗಿ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್ಡಿಜಿ ಪ್ರಶಸ್ತಿಯನ್ನು ನೀಡಿದೆ. ಸೋನುಸೂದ್ ಅವರಿಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ)ಯ ಪ್ರತಿಷ್ಠಿತ ಎಸ್ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ನೀಡಲಾಗಿದೆ. ‘ದಬಾಂಗ್' ನಟ ನಿಸ್ವಾರ್ಥವಾಗಿ ಸಹಾಯ ಹಸ್ತ ಚಾಚಿ ಲಕ್ಷಾಂತರ ವಲಸಿಗರು, ವಿದೇಶಗಳಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದರು. ಇದಲ್ಲದೆ, ಅವರು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸಹ ಒದಗಿಸುತ್ತಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಗತ್ಯವಿರುವವರಿಗೆ ಉಚಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ.