ಗೋಣಿಕೊಪ್ಪಲು, ಸೆ. 29: ಕೊಡವ ಯುವತಿ ಅನ್ಯಜಾತಿಯ ಪುರುಷನನ್ನು ವಿವಾಹವಾದಲ್ಲಿ ಅಂತಹ ಯುವಕ ಕೊಡವರ ಸಾಂಪ್ರದಾಯಿಕ ಉಡುಗೆ ತೊಡುಗೆ ಯನ್ನು ತೊಟ್ಟು ವಿವಾಹದಲ್ಲಿ ಸಂಭ್ರಮಿಸುವಂತಿಲ್ಲ, ‘ಗೆಜ್ಜೆತಂಡ್’ನ್ನು ಹಿಡಿಯುವಂತಿಲ್ಲ. ಅಂತಹ ಮದುವೆಗಳಿಗೆ ಬಾಳೆಲೆ ಕೊಡವ ಸಮಾಜದಲ್ಲಿ ಸ್ಥಳಾವಕಾಶ ನೀಡಲಾಗುವದಿಲ್ಲ ಎಂಬ ಬಗ್ಗೆ ತಾ. 23ರಂದು ಬಾಳೆಲೆ ಕೊಡವ ಸಮಾಜದಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತ ದಿಂದ ತೀರ್ಮಾನ ಕೈಗೊಳ್ಳಲಾಗಿದೆ.ಬಾಳೆಲೆಯಲ್ಲಿ ಲಿಖಿತ ಹೇಳಿಕೆ ನೀಡಿದ ಕೊಡವ ಸಮಾಜ ಅಧ್ಯಕ್ಷ ಮಲಚೀರ ಬೋಸ್ ಚಿಟ್ಟಿಯಪ್ಪ ಅವರು, ಇನ್ನು ಮುಂದೆ ಕೊಡವ ಯುವತಿಯರು ಅಂತರ್ಜಾತಿಯ ಮದುವೆಯಾದಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆಯಾದ ಕುಪ್ಯ ಚೇಲೆ, ಪೀಚೆಕತ್ತಿ, ಮಂಡೆತುಣಿ ಮತ್ತು ಕೊಡವ ಮದುಮಗ ಮದುವೆಯಲ್ಲಿ ಹಿಡಿಯುವ ಗೆಜ್ಜೆತಂಡ್ ಅನ್ನು ಅನ್ಯ ಜಾತಿಯ ಹುಡುಗರಿಗೆ ಧರಿಸಿ ವೈಭವೀಕರಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಚರ್ಚೆ ನಡೆದು ವ್ಯಾಪಕ ಖಂಡನೆ ಹಾಗೂ ವಿರೋಧ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಅಂತಹ ಮದುವೆಗಳಿಗೆ ಬಾಳೆಲೆ ಕೊಡವ ಸಮಾಜದಲ್ಲಿ ಅವಕಾಶ ನೀಡುವದಿಲ್ಲ ಎಂದು ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತ ದಿಂದ ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.