ಮಡಿಕೇರಿ, ಸೆ. 29: ಯುವ ಜನಾಂಗ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳು ವಂತಾಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಸಲಹೆಯಿತ್ತರು.ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಹೆಸರಾಂತ ಸಾಹಿತಿ, ನಾಟಕಗಾರ, ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ 152ನೇ ಜನ್ಮ ದಿನಾಚರಣೆ ಮತ್ತು ಪೊಂಗುರು ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡವ ಭಾಷೆಗೆ ಲಿಪಿ ಇಲ್ಲದಿದ್ದರೂ ಕೂಡ ಒಂದು ಕಾಲದಲ್ಲಿ ಅಪ್ಪಚ್ಚ ಕವಿಯವರು ಸಾಹಿತ್ಯ ಕ್ರಾಂತಿ ಮಾಡಿದ್ದರು. ಹಿರಿಯ ಸಾಹಿತಿಗಳಾದ ಅಪ್ಪಚ್ಚ ಕವಿ, ಐ.ಮಾ. ಮುತ್ತಣ್ಣ, ಬಿ.ಡಿ. ಗಣಪತಿ ಇವರುಗಳು ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಸದಾ ಸ್ಮರಣೀಯವಾದದ್ದು ಎಂದು ಪಾರ್ವತಿ ಅಪ್ಪಯ್ಯ ಹೇಳಿದರು.ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಮಕ್ಕಳಿಗೆ ಪೋಷಕರು ಕೊಡವ ಭಾಷೆಯನ್ನು ಮೊದಲು ಕಲಿಸಬೇಕು. ಮನೆಗಳಲ್ಲಿ ಕೊಡವ ಭಾಷೆಯನ್ನು ಮಕ್ಕಳು ಮಾತನಾಡುವಂತಾಗಬೇಕು. ಕೊಡವ ಭಾಷಿಕ ಜನಾಂಗದವರೆಲ್ಲರೂ ಕೊಡವ ಭಾಷೆ ಹಾಗೂ ಸಂಸ್ಕøತಿಯ ಬೆಳವಣಿಗೆಗೆ ಸಹಕಾರ ನೀಡ ಬೇಕೆಂದರು.

(ಮೊದಲ ಪುಟದಿಂದ) ಮತ್ತೋರ್ವ ಅತಿಥಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕೊಡವ ಸಂಸ್ಕøತಿ ಹಾಗೂ ಬದುಕು ವಿಶಿಷ್ಟವಾದದ್ದು. ಸಾಹಿತ್ಯ ಕ್ಷೇತ್ರದಲ್ಲಿ ಹರದಾಸ ಅಪ್ಪಚ್ಚ ಕವಿಯವರ ಸಾಧನೆ ಶ್ಲಾಘನೀಯವಾದದ್ದು. ಕೊಡವ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದರಲ್ಲದೆ, ಅಪ್ಪಚ್ಚ ಕವಿಯವರ ಬದುಕಿನ ಕುರಿತು ವಿವರಿಸಿದರು.

ಡಾ. ಕಳ್ಳಿಚಂಡ ರಶ್ಮಿ ನಂಜಪ್ಪ ಬರೆದ ‘ಪೊಮ್ಮೊದಿರ ಪೊನ್ನಪ್ಪ’ ಪುಸ್ತಕ ಹಾಗೂ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಬರೆದ ‘ಡೌರಿ ಡೈವೋರ್ಸ್’ ಪುಸ್ತಕಗಳನ್ನು ಕೆ.ಎಸ್. ದೇವಯ್ಯ ಬಿಡುಗಡೆ ಮಾಡಿದರು. ಕೊಡವ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ‘ಪೊಂಗುರಿ’ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಬರಹಗಾರ್ತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಕವಿತೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವತ್ತ ಕವಿಗಳು ಗಮನ ಹರಿಸಬೇಕು. ಸಾಹಿತಿಗಳ ಬರಹದಲ್ಲಿ ತೂಕ ವಿರಬೇಕು ಎಂದು ಅಭಿಪ್ರಾಯಿಸಿದರು.

ಲೇಖಕರಾದ ರಶ್ಮಿ ನಂಜಪ್ಪ ಹಾಗೂ ಜಾಲಿ ಸೋಮಣ್ಣ ತಮ್ಮ ಪುಸ್ತಕಗಳ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಅಪ್ಪನೆರವಂಡ ಕುಟುಂಬದ ಪೆಟ್ಟೆದಾರರಾದ ಅಪ್ಪಣ್ಣ ಇದ್ದರು. ಸಮಾರಂಭದಲ್ಲಿ ಗಣ್ಯರು ಅಪ್ಪಚ್ಚಕವಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಅಕಾಡೆಮಿ ಸದಸ್ಯೆ ಜಾನಕಿ ಮಾಚಯ್ಯ ಪ್ರಾರ್ಥಿಸಿ, ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರೀಶ್ ಸ್ವಾಗತಿಸಿದರು. ಸದಸ್ಯ ಕವನ್ ಕಾರ್ಯಪ್ಪ ನಿರೂಪಿಸಿ, ಪ್ರಭುಕುಮಾರ್ ವಂದಿಸಿದರು.