ಮಡಿಕೇರಿ, ಸೆ. 29: ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದು ಪ್ರಾಥಮಿಕ-ಪ್ರೌಢ ಶಿಕ್ಷಣ ರಾಜ್ಯ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ. ಇದರ ಜೊತೆಗೆ ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ.

ಸದ್ಯಕ್ಕೆ ತಾವು ಪ್ರವಾಸದಲ್ಲಿದ್ದು, ಬೆಂಗಳೂರಿಗೆ ಬಂದ ನಂತರ ಈ ಕುರಿತು ಇನ್ನಷ್ಟು ವಿವರವಾಗಿ ವಾಸ್ತವಾಂಶವನ್ನು ತಿಳಿಸುವುದಾಗಿ ಹೇಳಿದರು.

ರಾಜ್ಯದ ಶಾಲೆ-ಕಾಲೇಜು ಪ್ರಾರಂಭ ಮಾಡುವ ದಿನಾಂಕದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬದಾಗಿ ಸ್ಪಷ್ಟೀಕರಣ ನೀಡಿದರು.