*ಗೋಣಿಕೊಪ್ಪಲು, ಸೆ. 29: ಕೊಡಗಿನ ಹೊಸಮುಖ ಪ್ರತಿಭೆಗಳೆ ಅಧಿಕವಿರುವ ಸುಮಾರು ರೂ.2 ಕೋಟಿ ವೆಚ್ಚದ ಕನ್ನಡ ಚಲನಚಿತ್ರದ ಹೊರಾಂಗಣ ಚಿತ್ರೀಕರಣ ಅಬ್ಬರದ ಪ್ರಚಾರವಿಲ್ಲದೆ ಜಿಲ್ಲೆಯ ಸುಂದರ ಪರಿಸರದಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿದೆ. ಶೇ.50 ಕ್ಕೂ ಅಧಿಕ ಕೊಡಗಿನ ನಟ ನಟಿಯರೇ ಇದ್ದು, ವಿಭಿನ್ನ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಸೈಕೋಪಾತ್ ಚಿತ್ರ ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿರುವದು ವಿಶೇಷ. ಕೆಜಿಎಫ್-2 ಒಳಗೊಂಡಂತೆ ಕನ್ನಡದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವವಿರುವ ಚಿಕ್ಕಮಗಳೂರಿನ ಎಸ್.ಆರ್. ಗುರುದತ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.
ಬಿರುನಾಣಿಯ ಕರ್ತಮಾಡ ಅಜಿತ್ ನಿರ್ಮಾಪಕರಾಗಿದ್ದು, ಅದೇ ಗ್ರಾಮದ ಕರ್ತಮಾಡ ರತನ್ (ಹೆಸರು ಬದಲಿಸಲಾಗಿದೆ) ನಾಯಕನಾಗಿ, ಬೆಂಗಳೂರಿನ ನಾಪಂಡ ದಿಶಾ ಪೂವಯ್ಯ(ಕುಶಾಲನಗರ) ನಾಯಕಿಯಾಗಿ ನಟಿಸುತ್ತಿದ್ದಾರೆ.
ಸುಮಾರು 70 ಸಿನಿಮಾಗಳಿಗೆ ಸಂಗೀತ ನೀಡಿರುವ ಕಾರ್ತಿಕ್ ವೆಂಕಟೇಶ್ ಸಂಗೀತ. ಸುಂದರವಾದ 4 ಹಾಡುಗಳೂ ಇವೆ.
ಅತ್ಯಾಚಾರಿಯ ಮನೋವೈಕಲ್ಯದ ಸುತ್ತ ‘ಸೈಕೋಪಾತ್’ ಗಿರಕಿ
ಹೆಸರೇ ಹೇಳುವಂತೆ ಸೈಕೋಪಾತ್ನ ಖಳನಾಯಕನ ಪಾತ್ರವನ್ನು ಎವಿಎಸ್ ಫಿಲ್ಮ್ ಬ್ಯಾನರ್ನಲ್ಲಿ ನಿರ್ಮಾಪಕ ಕರ್ತಮಾಡ ಅಜಿತ್ ನಿರ್ವಹಿಸುತ್ತಿದ್ದಾರೆ. ಅತ್ಯಾಚಾರ ಮಾಡಲು ಪ್ರೇರೇಪಿಸುವ ಮನೋವೈಕಲ್ಯತೆ ಕುರಿತು ಚಿತ್ರದಲ್ಲಿ ನವಿರಾದ ನಿರೂಪಣೆ ಇದೆ. ಹೆಣ್ಣು ಮಕ್ಕಳನ್ನು ಅತ್ಯಾಚಾರವೆಸಗಿ ಹತ್ಯೆ ಮಾಡುವ ಹಿಂದಿನ ಮನೋವ್ಯಾಧಿಯನ್ನು ಚಿತ್ರದಲ್ಲಿ ವಿಭಿನ್ನವಾಗಿ ತೋರಲಾಗಿದ್ದರೂ, ಯಾವದೇ ಮುಜುಗರವಿಲ್ಲದೆ ಕುಟುಂಬ ಸಮೇತರಾಗಿ ನೋಡಬಹುದಂತೆ. ಎಲ್ಲಿಯೂ ಅಶ್ಲೀಲವಾದ ಚಿತ್ರೀಕರಣ ಮಾಡಿಲ್ಲ. ನಿಗೂಢ, ಸಾಹಸ ಪ್ರಧಾನ ಚಿತ್ರದಲ್ಲಿ ಬಹುತೇಕ ಎಲ್ಲ ಹೊಸಮುಖಗಳೇ ಇದ್ದಾರೆ. ನಾಲ್ಕು ಹಾಡುಗಳಲ್ಲಿ ಸೈಕೋ ಹಾಡೂ ಇದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಬಿರುನಾಣಿ, ಮಾಂದಲ್ ಪಟ್ಟಿ, ಕೆಕೆಆರ್, ಕೇರಳ ಗಡಿಭಾಗ, ಪೆÇನ್ನಂಪೇಟೆ, ಹುದಿಕೇರಿ, ಕುಂದ, ಕುಟ್ಟ, ವೀರಾಜಪೇಟೆ, ಪಾಲಿಬೆಟ್ಟ ಒಳಗೊಂಡಂತೆ ಸುಮಾರು 1 ತಿಂಗಳು ಚಿತ್ರೀಕರಣ ನಡೆಯಲಿದೆ. ಉಡುಪಿಯ ಮಲ್ಪೆ ಕಡಲ ಕಿನಾರೆಯಲ್ಲಿಯೂ ಎರಡು ದಿನಗಳ ಹಾಡಿನ ಚಿತ್ರೀಕರಣವಿದೆ ಎಂದು ನಿರ್ದೇಶಕ ಗುರುದತ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಚಿತ್ರದ ಕ್ಲೈಮಾಕ್ಸ್ ದೃಶ್ಯಗಳು ಬಾಕಿ ಇವೆ. ವೀರಾಜಪೇಟೆ ವಕೀಲ ರತ್ನಾಕರ್ ಶೆಟ್ಟಿ ಮುಖ್ಯಮಂತ್ರಿ ಪಾತ್ರ ನಿರ್ವಹಿಸುತ್ತಿರುವದು ವಿಶೇಷ.
ಅಜಿತ್, ಕಾರ್ತಿಕ್, ನಂದೀಶ್, ಪ್ರಕಾಶ್ ಸಹ ನಿರ್ದೇಶನ. ಕಾಸ್ಟ್ಯೂಮ್, ಗೀತ ರಚನೆ, ನೃತ್ಯ ಸೂರಿ ಅವರದು. ಮಂಜು ಹೊಸಕೋಟೆ ಕತೆ, ಕೊರೊನಾ ಹಾಗೂ ಕೊಡಗಿನ ಆಗಸ್ಟ್, ಸೆಪ್ಟೆಂಬರ್ ಮಳೆಯ ನಡುವೆಯೇ ಚಿತ್ರತಂಡ ಸಾಕಷ್ಟು ಪರಿಶ್ರಮದೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದೆ. ಸುಮಾರು 2.10 ಗಂಟೆ ಸಿನೆಮಾ ಡಿಸೆಂಬರ್ ವೇಳೆಗೆ ತೆರೆಗೆ ಬರಲಿದೆ ಎನ್ನಲಾಗಿದೆ. ಇನ್ನಿತರ ತಾರಾಗಣದಲ್ಲಿ ಅಪೂರ್ವ, ಕೈಲಾಸ್, ವಿಘ್ನೇಶ್, ಶಿವು ನಟಿಸಿದ್ದಾರೆ.
-ಎನ್.ಎನ್. ದಿನೇಶ್