*ಗೋಣಿಕೊಪ್ಪಲು, ಸೆ. 29 : ತಿತಿಮತಿ, ನೋಕ್ಯ, ಭದ್ರಗೋಳ, ಸುಳುಗೋಡು ಮೊದಲಾದ ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರ್ಪಡೆಗೊಳಿಸಬೇಕು ಎಂದು ಸ್ವಯಂ ಸೇವಾಸಂಸ್ಥೆಗಳ ಪರಿಸರವಾದಿಗಳೆನಿಸಿಕೊಂಡವರು ಪ್ರಯತ್ನ ನಡೆಸುತ್ತಿದ್ದಾರೆ. ಇದನ್ನು ಯಾವ ಕಾರಣಕ್ಕೂ ಜಾರಿಗೆ ತರಲು ಬಿಡಬಾರದು ಎಂದು ತಿತಿಮತಿ ನಾಗರಿಕ ವೇದಿಕೆ ಮುಖಂಡರು ಶಾಸಕ ಕೆ.ಜಿ.ಬೋಪಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶಾಸಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕಾಫಿ ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ; ಈಗಾಗಲೇ ನಾಗರಹೊಳೆ ಅರಣ್ಯದಂಚಿನ ಕೃಷಿಕರು ಹುಲಿ ದಾಳಿಗೆ ತಮ್ಮ ಜಾನುವಾರುಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮತ್ತೆ ಈಗಿನ ಕೃಷಿ ಮತ್ತು ಕಾಫಿ ತೋಟದ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿಸಿದರೆ ಈ ಭಾಗದ ಸಾವಿರಾರು ಮಂದಿಗೆ ತೀವ್ರ ಸಮಸ್ಯೆಯಾಗಲಿದೆ ಎಂದು ತಮ್ಮ ನೋವು ತೋಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಇಡೀ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಬೇಕು ಎಂದು ಹೇಳಿದ್ದರು. ಆದರೆ ಕಂದಾಯ ಅಧಿಕಾರಿಗಳು ವೀರಾಜಪೇಟೆ ತಾಲೂಕಿನ ತಿತಿಮತಿ, ನೋಕ್ಯ, ಭದ್ರಗೋಳ ಪ್ರದೇಶಗಳನ್ನು ಅತಿವೃಷ್ಟಿ ಪೀಡಿತ ಪ್ರದೇಶ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ಇದನ್ನು ಮರು ಪರಿಶೀಲಿಸಿ ಅತಿವೃಷ್ಟಿ ಪ್ರದೇಶ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗೋಣಿಕೊಪ್ಪಲು ಆರ್.ಎಂ.ಸಿಯಿಂದ ತಿತಿಮತಿ ವಿದ್ಯುತ್ ಎಕ್ಸ್ ಪ್ರೆಸ್ ಲೈನ್ ಮಾರ್ಗಕ್ಕೆ ಕೆಲವು ತೋಟ ಮಾಲೀಕರು ಅಡ್ಡಿ ಪಡಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಕೋರಿದರು.

ತಿತಿಮತಿಯಲ್ಲಿದ್ದ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‍ನೊಂದಿಗೆ ವಿಲೀನವಾದ ಬಳಿಕ ಸ್ಥಳೀಯ ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ, ಬುಡಕಟ್ಟು ಜನರಿಗೆ ತೀವ್ರ ತೊಂದರೆಯಾಗಿದೆ. ಕನ್ನಡ ಭಾಷೆ ಗೊತ್ತಿಲ್ಲದ ಬಹಳಷ್ಟು ನೌಕರರು ಬ್ಯಾಂಕ್‍ನಲ್ಲಿದ್ದಾರೆ. ಹಿಂದಿ ಹಾಗೂ ಇಂಗ್ಲಿಷ್ ಅರಿಯದ ಬುಡಕಟ್ಟು ಜನರು ಬ್ಯಾಂಕ್‍ಗಳಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ತಿತಿಮತಿ ಜಿಲ್ಲಾ ಸಹಕಾರಿ ಬ್ಯಾಂಕ್‍ನ ಶಾಖೆಯನ್ನು ತೆರೆಯಬೇಕು ಎಂದು ಕೋರಿದರು.

ನಾಗರಿಕ ಸಮಿತಿಯ ಚೆಕ್ಕೇರ ಕಿಶು, ಮನೆಯಪಂಡ ಬೋಪಣ್ಣ, ಕಾಣತಂಡ ನವೀನ್, ಮನೆಯಪಂಡ ಭೀಮಯ್ಯ ಇದ್ದರು.