ಶ್ರೀಮಂಗಲ, ಸೆ. 30: ಕೊಡವರ ಕುಲದೇವಿ ಕಾವೇರಿ ಮಾತೆಯ ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ, ಕೊಡವರು ತಮ್ಮ ಸಾಂಸ್ಕøತಿಕ ಉಡುಪಿನಲ್ಲಿ ಆಗಮಿಸಬಾರದು ಎಂಬ ಹೇಳಿಕೆಯನ್ನು ಪೊನ್ನಂಪೇಟೆ ಕೊಡವ ಸಮಾಜ ತೀವ್ರವಾಗಿ ಖಂಡಿಸಿದ್ದು, ಕೊಡವರ ಸಾಂಸ್ಕøತಿಕ ಉಡುಪನ್ನು ಕೊಡವರು ಧರಿಸಲು ಯಾವುದೇ ದೊಣ್ಣೆನಾಯಕರ ಅನುಮತಿ, ನಿರ್ದೇಶನ ಅಗತ್ಯ ಇಲ್ಲ. ಭಾಗಮಂಡಲ ನಾಗರಿಕ ಸಭೆ ಎಂದು ಹೇಳಿಕೊಂಡು ಒಂದು ಸಮುದಾಯದ ಕೆಲವರು ಸಭೆ ನಡೆಸಿ ತಾಲಿಬಾನ್ ಉಗ್ರರಂತೆ ಆದೇಶ ಹೇರುವುದು ಇಲ್ಲಿ ನಡೆಯುವುದಿಲ್ಲ ಎಂಬ ಎಚ್ಚರಿಕೆಯನ್ನು ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ನೀಡಿದೆ.
ಭಾಗಮಂಡಲದ ನಾಗರಿಕರ ಸಭೆಯಲ್ಲಿ ತಲಕಾವೇರಿಗೆ ಕೊಡವರು ಕುಪ್ಯಚೇಲೆ ಧರಿಸಿ ಬರಬಾರದು ಎಂಬ ಹೇಳಿಕೆಗೆ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್‍ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ತಲಕಾವೇರಿ-ಭಾಗಮಂಡಲ ಪವಿತ್ರ ಧಾರ್ಮಿಕ ಕ್ಷೇತ್ರದಲ್ಲಿ ಅನಾಚಾರ, ಪಾವಿತ್ರ್ಯತೆಗೆ ಧಕ್ಕೆ ಮತ್ತು ರಾಜಕೀಯ ಮಾಡುವ ಪ್ರಯತ್ನ ನಡೆಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಉತ್ಸವಕ್ಕೆ ಸಂಬಂಧಿಸಿದಂತೆ ಪತ್ತಾಯಕ್ಕೆ ಅಕ್ಕಿ ಹಾಕುವ ಸಂದರ್ಭ ಮತ್ತು ಉತ್ಸವದ ಸಂಪ್ರದಾಯ ಮಾಡುವಾಗ ಎರಡು ಮೂರು ಜನರು ಮಾತ್ರ ಸಮವಸ್ತ್ರ ಧರಿಸಬೇಕು ಎಂದು ಪ್ರಸ್ತಾವಿಸಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಸಭೆ ಕಳೆದ ಎರಡು ವರ್ಷಗಳಿಂದ ಭಂಡಾರ ಪೆಟ್ಟಿಗೆ ತೆಗೆದುಕೊಂಡು ಹೋಗುವ ಮೆರವಣಿಗೆಯಲ್ಲಿ ತೋರ್ಪಡಿಕೆಗಾಗಿ ಎಷ್ಟು ಜನ ಪಾಲ್ಗೊಂಡಿದ್ದರು ಹಾಗೂ ಅವರು ಯಾವ ಉಡುಪು ಧರಿಸಿದ್ದರು ಎಂದು ಪ್ರಶ್ನಿಸಿದರು.
ಸಂಪ್ರದಾಯಕ್ಕೆ ಒತ್ತು ನೀಡಬೇಕೆಂದು ಹೇಳುತ್ತಿರುವ ಇವರು ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವಾಸಿಗರು ಮೋಜು ಮಸ್ತಿಗೆ ತೆರಳಿ ಅಲ್ಲಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ನಿರ್ಬಂಧಿಸಲು ಕಾವೇರಿ ಭಕ್ತರು ಒತ್ತಾಯಿಸಿದಾಗ ಅದಕ್ಕೆ ವಿರೋಧ ವ್ಯಕ್ತ ಪಡಿಸಿ ಬೆಟ್ಟಕ್ಕೆ ಪ್ರವೇಶ ನೀಡಲು ಆಗ್ರಹಿಸಿದವರು ಯಾರು ಎಂದು ಮನವರಿಕೆ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕೊಡವ ಸಮುದಾಯದ ಹಕ್ಕು-ಬೇಡಿಕೆಗಳಿಗೆ ವಿರೋಧಿಸುತ್ತಾ ಇತಿಹಾಸವನ್ನು ತಿರುಚುವ ಕಾರ್ಯ ವನ್ನು ಒಂದು ಜನಾಂಗದ ಕೆಲವರು ಮಾಡುತ್ತಾ ಬರುತ್ತಿದ್ದಾರೆ.ಇದಲ್ಲದೆ ಕೊಡವರ ಕೋವಿ ಹಕ್ಕು, ಎಸ್.ಟಿ ಸ್ಥಾನಮಾನವನ್ನು ಇವರು ಪ್ರಶ್ನಿಸಿದ್ದಾರೆ. ಇದೀಗ ಕೊಡವರ ಧಾರ್ಮಿಕ ಹಕ್ಕು ಮತ್ತು ಸಾಂಸ್ಕøತಿಕ ಉಡುಪಿನ ಬಗ್ಗೆ ಕೆಣಕುತ್ತಿದ್ದು, ಇಂತಹ ಬಾಲಿಶತನ ಕೊಡಗಿನಲ್ಲಿ ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಆತಂಕ ಇರುವುದ ರಿಂದ ಇಂತಹವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಗೌ. ಕಾರ್ಯ ದರ್ಶಿ ಪೊನ್ನಿಮಾಡ ಸುರೇಶ್, ಖಜಾಂಚಿ ಮೂಕಳೆರ ಲಕ್ಷ್ಮಣ, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಚೆಪ್ಪುಡಿರ ರಾಕೇಶ್‍ದೇವಯ್ಯ, ಅಡ್ಡಂಡ ಸುನೀಲ್, ಮೂಕಳಮಾಡ ಅರಸು ನಂಜಪ್ಪ, ಮಂಡಚಂಡ ದಿನೇಶ್, ಚೆಪ್ಪುಡಿರ ರೂಪಾಉತ್ತಪ್ಪ, ಚೊಟ್ಟೇಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.