ಮಡಿಕೇರಿ, ಸೆ. 30: ತಲಕಾವೇರಿ ಕ್ಷೇತ್ರದ ಆಚಾರ - ವಿಚಾರದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿ ರುವ ಹಲವು ವಿದ್ಯಮಾನಗಳ ಹಿನ್ನೆಲೆ ಅಖಿಲ ಕೊಡವ ಸಮಾಜ ಹಾಗೂ ಕೊಡವ ಸಮಾಜಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತಾ. 2 ರಂದು (ನಾಳೆ) ಬೆಳಿಗ್ಗೆ 11 ಗಂಟೆಗೆ ವೀರಾಜಪೇಟೆ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿದೆ.

ಈ ಸಭೆಯಲ್ಲಿ ಅ.ಕೊ.ಸ. ಹಾಗೂ ಒಕ್ಕೂಟದ ಪ್ರಮುಖರು ಹಾಗೂ ಇನ್ನಿತರ ಕೊಡವ ಸಮಾಜಗಳ ಅಧ್ಯಕ್ಷರುಗಳು ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಗೊಂದಲ ಸೃಷ್ಟಿಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಏಕಾಭಿಪ್ರಾಯಕ್ಕಾಗಿ ಈ ಸಭೆ ಆಯೋಜಿಸಲಾಗಿದೆ ಎಂದು ಅ.ಕೊ.ಸ. ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ತಿಳಿಸಿದ್ದಾರೆ.

ಕೊಡವ ಸ್ಟುಡೆಂಟ್ಸ್ ಅಸೋಸಿಯೇಷನ್

ಗೋಣಿಕೊಪ್ಪ ವರದಿ : ಕೊಡವರು ಕುಪ್ಯಚೇಲೆ ಧರಿಸಿ ತಲಕಾವೇರಿ ಕ್ಷೇತ್ರಕ್ಕೆ ಬರಬಾರದು ಎಂದು ಭಾಗಮಂಡಲದಲ್ಲಿ ನಡೆದ ಸಭೆಯೊಂದರಲ್ಲಿ ಅಭಿಪ್ರಾಯಪಟ್ಟಿರುವ ಕೆಲವರ ಮನೋಭಾವವನ್ನು ಖಂಡಿಸುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಕೊಡವ ಸ್ಟುಡೆಂಟ್ಸ್ ಅಸೋಸಿಯೇಷನ್ ಯೋಜನಾ ನಿರ್ದೇಶಕ ಪುಳ್ಳಂಗಡ ಅಪ್ಪಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರು ಕ್ಷೇತ್ರದ ಬಗ್ಗೆ ಚರ್ಚಿಸುವುದಕ್ಕೆ ಅವರು ಸ್ವತಂತ್ರರು. ಆದರೆ, ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುವ ವಿಚಾರ ದುರುದ್ಧೇಶದಿಂದ ಕೂಡಿದೆ. ನಮ್ಮ ಸಾಂಪ್ರದಾಯಿಕ ಉಡುಗೆ ತೊಡಲು ಬೇರೆಯವರ ಅಪ್ಪಣೆ ಕೇಳುವ ಅವಶ್ಯಕತೆ ಬಂದಿಲ್ಲ. ಕುಪ್ಯ ಚೇಲೆಗೆ ಶತಮಾನಗಳಷ್ಟು ಇತಿಹಾಸವಿದ್ದು, ಪುರಾಣಗಳಲ್ಲಿ ಕೊಡವರ ಉಲ್ಲೇಖಗಳು ಇರುವಂತೆ ಕೊಡವರ ಉಡುಪುಗಳೂ ವರ್ಣನೆಯಾಗಿವೆ. ಕೊಡವ ಜನಪದ ಸಾಹಿತ್ಯದಲ್ಲೂ ಕೂಡಾ ಕುಪ್ಯಚೇಲೆ ಧರಿಸಿ ಕಾವೇರಿ ತೀರ್ಥೋದ್ಭವಕ್ಕೆ ಹೋಗಿರುವ ಹಿನ್ನೆಲೆ ಇದೆ. ಇಂತಹ ಹೇಳಿಕೆ ಕೊಡವರನ್ನು ಕ್ಷೇತ್ರಕ್ಕೆ ಬರಲೇಬೇಡಿ ಎಂಬ ಅರ್ಥದಿಂದ ಕೂಡಿದೆ. ಇದನ್ನು ನಾವು ಖಂಡಿಸುತ್ತೇವೆ. ವೈಷಮ್ಯ ಬೆಳೆಸದಂತೆ ಮುಂದುವರಿಯಬೇಕಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾಗಮಂಡಲ ನಾಗರಿಕರ ಸಮಿತಿ ಹೇಳಿಕೆಗೆ ಅಖಿಲ ಅಮ್ಮಕೊಡವ ಸಮಾಜ ಖಂಡನೆ

ಶ್ರೀಮಂಗಲ: ಕಾವೇರಿ ಮಾತೆಯ ಸನ್ನಿಧಿಯಲ್ಲಿ ತಕ್ಕರು ಹೊರತುಪಡಿಸಿ ಇತರರು ಯಾರು ಕುಪ್ಪಸ ಹಾಕಬಾರ ದೆಂಬ ಭಾಗಮಂಡಲ ನಾಗರಿಕ ಸಭೆಯ ಹೇಳಿಕೆಯನ್ನು ಅಖಿಲ ಅಮ್ಮ ಕೊಡವ ಸಮಾಜ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಅಮ್ಮ ಕೊಡವ ಸಮಾಜದ ಗೌರವಾಧ್ಯಕ್ಷ ಬಾನಂಡ ಪ್ರಥ್ವಿ, ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಅಚ್ಚಿಯಂಡ ವೇಣು ಗೋಪಾಲ್, ಕಾರ್ಯದರ್ಶಿ ಪುತ್ತಮನೆ ಅನಿಲ್ ಅವರು ಭಾಗಮಂಡಲ ನಾಗರಿಕ ಸಭೆಯಲ್ಲಿ ಕೆಲವು ಮುಖಂಡರ ಹೇಳಿಕೆಯನ್ನು ಖಂಡಿಸಿ ದರು. ಇಂತಹ ಹೇಳಿಕೆಯಿಂದ ನಾಗರಿಕ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಮೊದಲು ಇಂತಹ ಅಸಂಬದ್ಧ ಹೇಳಿಕೆಗಳನ್ನು ನಿಲ್ಲಿಸಿ ಪರಸ್ಪರ ಸಾಮರಸ್ಯದಿಂದ ತಾಯಿಯ ಆರಾಧನೆಯನ್ನು ಮಾಡಬೇಕಿದೆ. ಅದು ಬಿಟ್ಟು ಅಲ್ಲಿ ಕೊಡವ ಜನಾಂಗ ಅದರಲ್ಲೂ ಈ ಹಿಂದಿನ ಮೂಲ ತಕ್ಕರ ಕುಟುಂಬ ಸಾಂಪ್ರದಾಯಿಕ ಉಡುಗೆ ತೊಟ್ಟಿದಕ್ಕೆ ಕೊಂಕು ಮಾತನಾಡುವ ಅಗತ್ಯವಿಲ್ಲ ಎಂದಿದ್ದಾರೆ.