ಮಡಿಕೇರಿ, ಸೆ. 30 : ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕು ಪತ್ರ ನೀಡುವ ಸಂಬಂಧ ಮರು ಪರಿಶೀಲನೆಗೆ ಬಾಕಿ ಇರುವ 1872 ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಗ್ರಾ.ಪಂ.ಅರಣ್ಯ ಹಕ್ಕು ಸಮಿತಿ) ಮರು ಪರಿಶೀಲಿಸಿ ಅಕ್ಟೋಬರ್, 07 ರೊಳಗೆ ಉಪ ವಿಭಾಗ ಮಟ್ಟದ ಸಮಿತಿಗೆ ಶಿಫಾರಸ್ಸು ಮಾಡಿ ಜಿಲ್ಲಾಮಟ್ಟದ ಸಮಿತಿಗೆ ವರದಿ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭ ನಾಗರಹೊಳೆ ವನ್ಯಜೀವಿ ವ್ಯಾಪ್ತಿಯ ಕೋರ್ ಪ್ರದೇಶದಲ್ಲಿರುವ ಹಾಡಿಗಳ ವಾಸಿಗಳು ಹಕ್ಕುಪತ್ರ ಹೊಂದಿದ್ದು ಅವರು ತಮ್ಮ ಸ್ವ ಇಚ್ಛೆಯಿಂದ ಅರಣ್ಯ ದಂಚಿಗೆ ಬರಲು ಒಪ್ಪಿದಲ್ಲಿ ವಾಸ್ತವಾಂಶ ಪರಿಶೀಲಿಸಿ ಅವರಿಗೆ ಸೂಕ್ತ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರು ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರಾದ ಡಿ.ಮಹೇಶ್ ಕುಮಾರ್ ಅವರು ಸಮುದಾಯ ಸಂಪನ್ಮೂಲ ಕ್ಲೇಮುಗಳಿಗೆ ಹಕ್ಕು ಪತ್ರ ವಿತರಿಸುವ ಸಂಬಂಧ ಮಾಹಿತಿ ಪಡೆದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಆರ್ ಮಂಜುಳಾ ಮಾತನಾಡಿ ಹಾಡಿಗಳಲ್ಲಿ ಬಾಕಿ ಇರುವ ಸರ್ವೇ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಮೂಲ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸಬೇಕು ಎಂದು ಹೇಳಿದರು.

ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್ ಅವರು ಹಾಡಿಗಳಿಗೆ ನೀಡಬೇಕಿರುವ ಮೂಲಭೂತ ಸೌಕರ್ಯಗಳು ಮತ್ತು ಸಮುದಾಯ ಸಂಪನ್ಮೂಲ ಹಕ್ಕು ಕ್ಲೇಮುಗಳಿಗೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ನೀಡಿದರು. ತಹಶೀಲ್ದಾರ್ ಮಹೇಶ್, ನಂದೀಶ್, ಎಸಿಎಫ್ ಅಂತೋಣಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಆಶಿಕ್ ಇತರರು ಇದ್ದರು.