ಮಡಿಕೇರಿ, ಸೆ. 30: ಭಾಗಮಂಡಲದ ಗೌಡ ಸಮಾಜದಲ್ಲಿ ನಡೆದ ನಾಗರಿಕರ ಸಭೆಯಲ್ಲಿ ಕೆಲವರು ಕೊಡವ ಸಾಂಪ್ರದಾಯಿಕ ಉಡುಗೆ ಕುಪ್ಯಚೇಲೆಯ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದು ಇದು ಅತಿರೇಕದ ಪರಮಾವಧಿಯಾಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಚಾಲಕ ತೆನ್ನೀರ ಮೈನಾ ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಜನಾಂಗದ ಪಾರಂಪರಿಕ ಉಡುಪನ್ನು ನಿರ್ಬಂಧಿಸಿ ಎಂದು ಹೇಳಲು ಇವರಿಗೆ ಅಧಿಕಾರ ನೀಡಿದವರು ಯಾರು? ಒಂದು ಜನಾಂಗದ ಪಾರಂಪರಿಕ ಉಡುಪನ್ನು ಸಮವಸ್ತ್ರ ಎಂದು ಹೇಳಿರುವುದು ಅವರ ಮೂರ್ಖತನವಾಗಿದೆ, ಕೊಡಗು ಮತ್ತು ಇತರ ಕಡೆಗಳಲ್ಲಿ ಕೊಡವರು ಎಲ್ಲರೊಂದಿಗೆ ಸೌಹಾರ್ದದಿಂದ ಬಾಳುತ್ತಿರುವಾಗ ಅದನ್ನು ಕದಡಲು ಪ್ರಯತ್ನಿಸುತ್ತಿರುವುದು ಖೇದಕರ. ಸಾಮರಸ್ಯದಿಂದ ಬಾಳುತ್ತಿರುವ ಕೊಡಗಿನಲ್ಲಿ ವಿಷಬೀಜ ಬಿತ್ತಲು ಬೆರಳೆಣಿಕೆಯ ಕೆಲವರು ಹುನ್ನಾರ ನಡೆಸುತ್ತಿದ್ದು ಇದನ್ನು ಪ್ರತಿಯೊಬ್ಬ ಕೊಡಗಿನ ನಾಗರಿಕರು ಖಂಡಿಸಲೇಬೇಕು, ಮುಂದಕ್ಕೆ ಇಂತಹ ಬಾಲಿಶ ಹೇಳಿಕೆಗಳು ಬಾರದಿರಲಿ ಎಂದು ಹೇಳಿಕೆ ನೀಡಿದ್ದಾರೆ.