ವೀರಾಜಪೇಟೆ, ಸೆ. 30: ವೀರಾಜಪೇಟೆ ತಾಲೂಕು ಗೋಮಾಳ ಸಂರಕ್ಷಣಾ ಹೋರಾಟ ಸಮಿತಿಯಿಂದ ತಾಲೂಕಿನಾದ್ಯಂತ ಇರುವ ಗೋಮಾಳಕ್ಕಾಗಿ ಮೀಸಲಿರಿಸಿರುವ ಜಾಗವನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಇಂದು ಇಲ್ಲಿನ ತಾಲೂಕು ಕಚೇರಿ ಮುಂದೆ ಹೋರಾಟ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವೀರಾಜಪೇಟೆ ಬಳಿಯ ಬಾಳುಗೋಡು ಗ್ರಾಮದಲ್ಲಿ 1974 ರಲ್ಲಿ ಆಗಿನ ಜಿಲ್ಲಾಧಿಕಾರಿಯವರು ಗ್ರಾಮಸ್ಥರ ಬೇಡಿಕೆ ಮೇರೆ ಗೋಮಾಳಕ್ಕಾಗಿ ಸುಮಾರು 79.06 ಎಕರೆ ಜಾಗವನ್ನು ಮಂಜೂರು ಮಾಡಿದ್ದರು. ಈಗ ಕೆಲವರು ಇದನ್ನು ಮನೆ ದಳವಾಗಿ ಪರಿವರ್ತಿಸಿಕೊಂಡು ಮನೆಯನ್ನು ಕಟ್ಟಿಕೊಂಡು ಅತಿಕ್ರಮಣ ಮಾಡಿದ್ದಾರೆ. ಗೋಮಾಳ ಜಾಗದಲ್ಲಿ ಇತರ ಕಟ್ಟಡಗಳು ನಿರ್ಮಾಣಗೊಂಡಿದ್ದು ಗೋಮಾಳದ ಜಾಗ ಕಬಳಿಕೆಯಾಗಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.
ಉಚ್ಚ ನ್ಯಾಲಯಾಲಯದಲ್ಲಿ ಬಾಳುಗೋಡು ಗ್ರಾಮದ ಗೋಮಾಳ ವಿವಾದದ ರಿಟ್‍ಗೆ ಸಂಬಂಧಿಸಿದಂತೆ ಮೊದಲು 49 ಎಕರೆ ಗೋಮಾಳ ಜಾಗವಿರುವುದಾಗಿ ಸರಕಾರದ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ನಂತರ 2019ರಲ್ಲಿ ನ್ಯಾಯಾಲಯ ವಿವಾದದ ತೀರ್ಪಿನಲ್ಲಿ 15 ಎಕರೆ ಜಾಗವಿರುವುದಾಗಿ ತಿಳಿಸಿದ್ದು ಈಗ ಬಾಳುಗೋಡು ಗ್ರಾಮದಲ್ಲಿ ಗೋಮಾಳಕ್ಕಾಗಿ ಮೀಸಲಿರಿಸಿದ ಯಾವುದೇ ಜಾಗವಿಲ್ಲ. ಗೋಮಾಳದ ಜಾಗ ಎಲ್ಲವೂ ಅತಿಕ್ರಮಣವಾಗಿದೆ. ಗೋಮಾಳಕ್ಕಾಗಿ ಮೀಸಲಿರಿಸಿದ ಜಾಗವನ್ನು ತಕ್ಷಣ ಗುರುತಿಸಿಕೊಡಬೇಕು. ಗೋಮಾಳದ ಜಾಗದ ಅತಿಕ್ರಮಣಕಾರರನ್ನು ಒಕ್ಕಲೆಬ್ಬಿಸುವಂತೆ ಹೋರಾಟ ಸಮಿತಿ ತಹಶೀಲ್ದಾರರನ್ನು ಒತ್ತಾಯಿಸಿತು.
ಗೋಮಾಳ ಸಂರಕ್ಷಣೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಂ.ರವೀಂದ್ರ,, ಬಾಳುಗೋಡು ಗೋಮಾಳ ಸಂರಕ್ಷಣಾ ಸಮಿತಿಯ ರಾಮಯ್ಯ. ಪುರುಷೋತ್ತಮ್, ತಾಲೂಕು ವಿಶ್ವ ಹಿಂದೂ ಪರಿಷತ್‍ನ ಪ್ರಿನ್ಸ್ ಗಣಪತಿ, ಜಿಲ್ಲಾ ಸಮಿತಿಯ ಎಂ.ಅಯ್ಯಣ್ಣ. ಹಿಂದೂ ಜಾಗರಣಾ ವೇದಿಕೆಯ ರತ್ನಾಕರ್, ಭಜರಂಗದಳದ ವಿವೇಕ್‍ರೈ, ಕೆ.ತಿಮ್ಮಯ್ಯ, ಬಿ.ಜೆ.ಪಿ. ನಗರ ಸಮಿತಿಯ ಅಧ್ಯಕ್ಷ ಟಿ.ಪಿ.ಕೃಷ್ಣ, ಬಿ.ವಿ.ಹೇಮಂತ್ ಹಾಗೂ ವೀರಾಜಪೇಟೆ ಬಳಿಯ ಆರ್ಜಿ, ಬಾಳುಗೋಡು ಬಿಟ್ಟಂಗಾಲ ಗ್ರಾಮಗಳ ಗ್ರಾಮಸ್ತರು ಅಧಿಕ ಸಂಖ್ಯೆಯಲ್ಲಿದ್ದರು.
ತಹಶೀಲ್ದಾರ್ ಭರವಸೆ
ಗೋಮಾಳ ಸಂರಕ್ಷಣಾ ಹೋರಾಟ ಸಮಿತಿಯ ಪ್ರತಿಭಟನೆಗೆ ಸ್ಪಂದಿಸಿದ ತಹಶೀಲ್ದಾರ್ ಎಲ್.ಎಂ. ನಂದೀಶ್ ಅವರು ತುರ್ತಾಗಿ ಸಭೆ ಕರೆದು ಗೋಮಾಳ ಜಾಗದ ರಕ್ಷಣೆಗೆ ಸಂಬಂಧಿಸಿದಂತೆ ಕುಂದು ಕೊರತೆ, ಲೋಪ ದೋಷಗಳ ಕುರಿತು ಚರ್ಚಿಸುವುದರೊಂದಿಗೆ ಗೋಮಾಳ ಕ್ಕಾಗಿ ಮೀಸಲಿರಿಸಿದ ಜಾಗವನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುವುದೆಂದು ಸಮಿತಿಗೆ ಭರವಸೆ ನೀಡಿದರು.