ಮಡಿಕೇರಿ, ಸೆ. 30: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಕಳೆದ 25 ವರ್ಷಗಳಿಂದ ದುಡಿಯುತ್ತಿದ್ದ ಪಿಗ್ಮಿ ಸಂಗ್ರಾಹಕ ಎಂ.ಡಿ. ನಾಣಯ್ಯ ಅವರನ್ನು ವಜಾಗೊಳಿಸಿದ ಕುರಿತು ಪಿಗ್ಮಿ ಸಂಗ್ರಾಹಕರಲ್ಲಿ ಅಸಮಾಧಾನ ವ್ಯಕ್ತಗೊಂಡಿದೆ.
ನಾಣಯ್ಯ ಅವರು “ಶಕ್ತಿ” ಯೊಂದಿಗೆ ಮಾತನಾಡಿ ಕೊರೊನಾ ವನ್ನು ನೆಪವಾಗಿರಿಸಿಕೊಂಡು ಪಿಗ್ಮಿ ಸಂಗ್ರಾಹಕಾರರಿಗೆ ಅರ್ಧದಷ್ಟು ಮಾತ್ರ ಕಮಿಷನ್ ಕೊಡಲಾಗುತ್ತಿತ್ತು. ಇದನ್ನು ಪ್ರಶ್ನಿಸಲು ತನ್ನ ಅಧ್ಯಕ್ಷತೆಯಲ್ಲಿ ಸಂಘವೊಂದನ್ನು ರಚಿಸಿ ಆಡಳಿತ ಮಂಡಳಿ ಅಧ್ಯಕ್ಷರಿಗೆ ನೋಟೀಸ್ ಕಳುಹಿಸಲಾಗಿತ್ತು ಎಂದು ನಾಣಯ್ಯ ವಿವರಿಸಿದ್ದಾರೆ. ಕಾನೂನಾತ್ಮಕವಾಗಿ ತಾವುಗಳು ದುಡಿದುದಕ್ಕೆ ನ್ಯಾಯ ರೀತಿಯಲ್ಲಿ ತಮಗೆ ಬರಬೇಕಾದ ಹಣವನ್ನು ಕೇಳಿದುದೇ ಅಪರಾಧವಾಯಿತೇ? ಅಧ್ಯಕ್ಷರು ಏಕ ಪÀಕ್ಷೀಯ ನಿರ್ಧಾರ ಕೈಗೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಡಿ.ಸಿ.ಸಿ. ಬ್ಯಾಂಕ್ ಆಡಳಿತ ಮಂಡಳಿ ಪರವಾಗಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅವರು ಪಿಗ್ಮಿ ಸಂಗ್ರಾಹಕ ನಾಣಯ್ಯ ಅವರ ವಜಾಕ್ಕೆ ನೀಡಿರುವ ಕಾರಣ ಹೀಗಿದೆ: ಇತರ ಪಿಗ್ಮಿ ಸಂಗ್ರಾಹಕಾರರಿಗೆ ಒತ್ತಡ ಹೇರಿ ಬ್ಯಾಂಕ್ ಆಡಳಿತದÀ ವಿರುದ್ಧ ನೋಟೀಸ್ ಜಾರಿ ಮಾಡಿ ಆಡಳಿತ ವರ್ಗಕ್ಕೆ ಮಾನಸಿಕ ಹಿಂಸೆ ನೀಡಲಾಗಿದೆ. ಈ ನಡವಳಿಕೆಯಿಂದ ಬ್ಯಾಂಕಿನ ಅಭಿವೃದ್ಧಿಗೆ ಧಕ್ಕೆಯಾಗಿದೆ ಹಾಗೂ ಸಾಲ ವಸೂಲಾತಿಗೆ ಮಾರಕವಾಗಿದೆ ಎಂದು ಉಲ್ಲೇಖಿಸಲಾಗಿದೆ.