ಕುಶಾಲನಗರ, ಸೆ. 30: ಕುಶಾಲನಗರ ವಾರದ ಸಂತೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ವರ್ತಕರು ಮತ್ತು ಗ್ರಾಹಕರ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಒಂದು ತಿಂಗಳಿನಿಂದ ವಾರದ ಸಂತೆ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿದ್ದು ಸಂತೆಗೆ ಸಾವಿರಕ್ಕೂ ಅಧಿಕ ವಾಹನಗಳು ಬಂದು ಹೋಗುವ ಸಂದರ್ಭ ಉಂಟಾಗುವ ಅನಾನುಕೂಲ ತಪ್ಪಿಸಲು ಸಂಚಾರಿ ಪೊಲೀಸರು ಹಲವು ಕ್ರಮಗಳನ್ನು ಕೈಗೊಳ್ಳಲು ಚಿಂತನೆ ಹರಿಸಿದ್ದಾರೆ.
ಸಂಚಾರಿ ಪೊಲೀಸ್ ಠಾಣಾಧಿಕಾರಿ ಅಚ್ಚಮ್ಮ ಅವರ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳು ಸಂತೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹೇಶ್ ಮತ್ತು ಗೌರವಾಧ್ಯಕ್ಷ ಎಚ್.ಡಿ.ಚಂದ್ರು ಮತ್ತು ಆರ್ಎಂಸಿ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದರು. ವಿಶಾಲವಾಗಿರುವ ಆರ್ಎಂಸಿ ಮೈದಾನದಲ್ಲಿ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆರ್ಎಂಸಿ ಆಡಳಿತ ಕ್ರಮಕೈಗೊಂಡಿದ್ದು ಸಮಿತಿಯ ವತಿಯಿಂದ ಸಂತೆ ದಿನ ಭದ್ರತಾ ಸಿಬ್ಬಂದಿಯೊಬ್ಬರನ್ನು ನೇಮಿಸಿದ್ದಾರೆ. ಮಾರುಕಟ್ಟೆಗೆ ಒಳಬರುವ, ಹೊರ ಹೋಗುವ ವಾಹನಗಳಿಗೆ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸುವುದು, ಆವರಣದ ಒಳಗೆ ನಿರ್ಮಾಣ ಗೊಂಡಿರುವ ಮಾರುಕಟ್ಟೆಗಳಲ್ಲಿ ಮಾತ್ರ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸುವುದು, ಮುಖ್ಯ ರಸ್ತೆಯಲ್ಲಿ ಯಾವುದೇ ವಾಹನಗಳು ನಿಲುಗಡೆ ಯಾಗದಂತೆ ಎಚ್ಚರವಹಿಸುವುದು, ಮಾರುಕಟ್ಟೆಯಲ್ಲಿ ವರ್ತಕರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಈ ಬಗ್ಗೆ ಮುಂದಿನ ವಾರದ ಸಂತೆಯಲ್ಲಿ ಪೂರ್ಣ ಮಾಹಿತಿ ಒದಗಿಸಲಾಗುವುದು ಎಂದು ಅಚ್ಚಮ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಮುಂದಿನ ದಿನಗಳಲ್ಲಿ ಕ್ರಮಕ್ಕೆ ಮುಂದಾಗುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಸಂತೆ ಮಾರು ಕಟ್ಟೆಯಲ್ಲಿ ಸಮರ್ಪಕವಾಗಿ ವ್ಯಾಪಾರ ವಹಿವಾಟು ಮಾಡುವ ನಿಟ್ಟಿನಲ್ಲಿ ಮಾರುಕಟ್ಟೆ ಸಂಘದ ಮೂಲಕ ವರ್ತಕರಿಗೆ ಅರಿವು, ಜಾಗೃತಿ ಮೂಡಿಸ ಲಾಗುವುದು ಎಂದು ಅಧ್ಯಕ್ಷ ಮಹೇಶ್ ಮತ್ತು ಎಚ್.ಡಿ.ಚಂದ್ರು ತಿಳಿಸಿದ್ದಾರೆ.