ಮಡಿಕೇರಿ, ಅ. 12: ಮಿಲಿಟರಿ ಸಂಬಂಧ ಹಳೆಯ ವಾಹನಗಳು, ಕಡಿಮೆ ಬೆಲೆಗೆ ನಿವೇಶನ, ಲಕ್ಷ ರೂಪಾಯಿ ಹೂಡಿಕೆಯಿಂದ ಕೋಟಿ ಹಣ ಗಳಿಕೆ ಇತ್ಯಾದಿ ಆಮಿಷಗಳಿಗೆ ಅನೇಕರು ಪದೇ ಪದೇ ಒಳಗಾಗುತ್ತಾ, ಮೋಸದ ಜಾಲಕ್ಕೆ ಸಿಲುಕಿ ಕೈಸುಟ್ಟುಕೊಂಡಿರುವ ಪ್ರಸಂಗದಂತೆ, ಬಲ್ಲಮಾವಟಿಯ ರೈತನೊಬ್ಬ ಅಲ್ಲಿನ ಎಡೆಬಿಡಂಗಿ ಮಾತು ನಂಬಿ ಮೋಸ ಹೋಗಿರುವ ಪ್ರಕರಣ ಕುತೂಹಲ ಕಾರಿ ತಿರುವು ಪಡೆದುಕೊಂಡಿದೆ.ಊರಿನಲ್ಲಿ ಕಟ್ಟಿಕೊಂಡ ಹೆಂಡತಿಯ ತ್ಯಜಿಸಿ ಮಾಯಾಂಗನೆ ಯೊಬ್ಬಳ ಮಾತಿಗೆ ಮರುಳಾಗಿರುವ ಈ ಎಡೆಬಿಡಂಗಿ, ತನ್ನ ಪರಿಚಿತ ರೈತಮಿತ್ರರೊಬ್ಬರಿಗೆ ಬರೋಬ್ಬರಿ ರೂಪಾಯಿ 37 ಲಕ್ಷ ಕಳೆದುಕೊಳ್ಳು ವಂತೆ ಚಿತಾವಣೆ ನಡೆಸಿ, ಪೊಲೀಸರ ಸಹಿತ ಸಿಕ್ಕ ಸಿಕ್ಕ ಮಂದಿಯಿಂದ ಛೀಮಾರಿ ಹಾಕಿಸಿಕೊಂಡು ಇದೀಗ ತಾನೇ ಪೊಲೀಸ್ ವರಿಷ್ಠಾಧಿಕಾರಿ ಬಳಿ ಪುಕಾರು ಒಯ್ದಿದ್ದಾನೆ.ಈತನೇ ಬಿಚ್ಚಿಟ್ಟಿರುವ ಕತೆ ಪ್ರಕಾರ ಆತ ನಾಲ್ಕು ವರ್ಷದ ಹಿಂದೆ ಊರು ಬಿಟ್ಟು ಬೆಂಗಳೂರಿಗೆ ಉದ್ಯೋಗಕ್ಕೆ ತೆರಳಿದ್ದಾನೆ. ಅನಂತರದಲ್ಲಿ ಯಾವದೂ ಕೈಗೂಡದೆ ಹುಟ್ಟೂರಿಗೆ ವಾಪಸ್ಸಾಗಿದ್ದಾನೆ. ಅಷ್ಟರಲ್ಲಿ ‘ಫೇಸ್‍ಬುಕ್’ ಮುಖಾಂತರ ಶ್ವೇತಾ ಕಾರ್ಯಪ್ಪ ಹೆಸರಿನಲ್ಲಿ ಅನಾಮಿಕ ಹೆಣ್ಣು ಪರಿಚಯವಾಗಿದ್ದಾಳೆ! ಕಟ್ಟಿಕೊಂಡಾಕೆಯ ತ್ಯಜಿಸಿದ್ದ ಈತನನ್ನು ಮದುವೆಯಾಗುವದಾಗಿ ನಂಬಿಸಿದ್ದಾಳೆ.
ಆಕೆಯ ಮಾತಿಗೆ ಗಂಟುಬಿದ್ದ ಈತ ತನ್ನ ಊರಿನ ರೈತಮಿತ್ರನಿಗೆ ಚಿತಾವಣೆ ನಡೆಸಿ, ಬೆಂಗಳೂರಿನಲ್ಲಿ ರೂ. 3 ಕೋಟಿ ಮೌಲ್ಯದ ನಿವೇಶನಕ್ಕೆ ಕೇವಲ ರೂ. 37 ಲಕ್ಷ ಹೂಡಿದರೆ, ಸುಖಜೀವನ ಕಂಡುಕೊಳ್ಳಬಹುದು ಎಂದು ಪುಸಲಾಯಿಸಿದ್ದಾನೆ. ಅಲ್ಲದೆ ತನಗೆ ‘ಫೇಸ್‍ಬುಕ್’ ನೆಂಟಳಾದ ಮಾಯಾಂಗನೆಯ ಸಂಪರ್ಕ ಸಂಖ್ಯೆ ನೀಡಿದ್ದಾನೆ.
ಆ ಹೆಣ್ಣಿನ ಕರೆಗೆ ಓಗೊಟ್ಟಿರುವ ರೈತ ಆಕೆ ಹೇಳಿದ ಹಾಗೆಲ್ಲ ಕೇಳುತ್ತಾ, ಈ ಎಡೆಬಿಡಂಗಿ ಮೂಲಕ ಸಿಕ್ಕ ಸಿಕ್ಕ ಸ್ನೇಹಿತರಿಂದ ಸಾಲ ಮಾಡಿ ರೂ. 37 ಲಕ್ಷ ಹೊಂದಿಸಿಕೊಟ್ಟಿದ್ದಾರೆ. ಹಣ ಸಂದಾಯವಾದ ಮರುಗಳಿಗೆಯಿಂದ ಆಕೆಯ ಮೊಬೈಲ್ ಸಂಪರ್ಕ ಸ್ಥಗಿತಗೊಂಡಿದೆ.
ಈ ವೇಳೆ ಬೆಚ್ಚಿಬಿದ್ದ ರೈತ ತನ್ನ ಎಡೆಬಿಡಂಗಿ ಸ್ನೇಹಿತನ ವಿರುದ್ಧ ನಾಪೋಕ್ಲು ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರಿಗೂ ಒಂದಿಷ್ಟು ಲಂಚ ನೀಡಿ, ಲಕ್ಷಾಂತರ ರೂ. ಹಣವನ್ನು ಅಪರಿಚಿತ ಮಾಯಾಂಗನೆ ಹಾಗೂ ಎಡೆಬಿಡಂಗಿ ಸ್ನೇಹಿತನಿಂದ ಕೊಡಿಸುವಂತೆ ಗೋಗರೆದಿದ್ದಾರೆ. ಪೊಲೀಸರು ಆ ಹೆಣ್ಣಿನ ಪತ್ತೆಗಾಗಿ ಎಡೆಬಿಡಂಗಿಯನ್ನು ಪೊಲೀಸ್ ಠಾಣೆಯ ಕಂಬಿಯೊಳಗೆ ಸೇರಿಸಿಕೊಂಡು ತದಕಿದಾಗ ಬಹಿರಂಗಗೊಂಡಿದ್ದು, ಈತನಿಗೂ ಆಕೆಯ ಪರಿಚಯ ಇಲ್ಲವೆಂದು(!) ಹೀಗಾಗಿ ಪೊಲೀಸರು ಕೈಚೆಲ್ಲಿ ಕುಳಿತಿದ್ದಾರೆ.
ಈ ನಡುವೆ ಸಂಬಂಧಿಸಿದ ಭೂಪ, ವೀರಾಜಪೇಟೆ ವಕೀಲ ರೊಬ್ಬರ ಮೂಲಕ (ಮೊದಲ ಪುಟದಿಂದ) ಪೊಲೀಸ್ ದೌರ್ಜನ್ಯ ಪ್ರಕರಣ ದಾಖಲಿಸುವ ಹುನ್ನಾರ ನಡೆಸಿದ್ದಾನೆ. ಅಲ್ಲದೆ ರೈತಮಿತ್ರನಿಂದ ಲಕ್ಷಾಂತರ ರೂ. ಆ ಮಾಯಾಂಗನೆಯ ಖಾತೆಗೆ ತಲಪಿಸಲು ಮಧ್ಯಸ್ಥಿಕೆ ವಹಿಸಿದ ತಪ್ಪಿಗಾಗಿ ಆಕೆ ನೀಡಿದ ಮೊಬೈಲ್ ಸಂಖ್ಯೆ ‘7899166456’ ಪುರುಸೊತ್ತು ಸಿಕ್ಕಾಗಲೆಲ್ಲಾ ಕರೆ ಮಾಡುತ್ತಾ, ಊರ ಮಂದಿಯ ಪ್ರಾಣಭಯದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾನೆ. ಪೊಲೀಸರು ಈ ಎಡೆಬಿಡಂಗಿಯ ಕತೆ ಕೇಳಿ ಅಸಹಾಯಕತೆಯೊಂದಿಗೆ, ಇಂತಹ ಮೋಸದ ಜಾಲಕ್ಕೆ ಕೊಡಗಿನ ಜನತೆ ಮಾರುಹೋಗದಂತೆ ಸಾರ್ವತ್ರಿಕ ಕಳಕಳಿ ವ್ಯಕ್ತಪಡಿಸಿದ್ದಾರೆ. ಹಣ ಕಳೆದುಕೊಂಡಿರುವ ರೈತ ಮಾತ್ರ ಕಂಗೆಟ್ಟು ಪರಿತಪಿಸುತ್ತಿದ್ದಾರೆ. ಒಂದೊಮ್ಮೆ ಎಡೆಬಿಡಂಗಿ ಯುವಕ ಹಾಗೂ ಲಕ್ಷಗಟ್ಟಲೆ ಹಣವನ್ನು ಕಳೆದುಕೊಂಡಿರುವ ವ್ಯಕ್ತಿ ಇಬ್ಬರೂ ಪರಸ್ಪರ ಸ್ನೇಹದೊಂದಿಗೆ, ದಿಢೀರ್ ಸಂಪಾದನೆಗಾಗಿ ಹಲವು ಮಾರ್ಗಗಳನ್ನು ಅನುಸರಿಸಿ ಕೈಸುಟ್ಟುಕೊಂಡಿದ್ದಾರೆ ಎಂದು ಇಬರಿಬ್ಬರನ್ನು ಬಲ್ಲವರ ಮಾತಾಗಿದೆ.