ಬಡ್ಡಿ ರಹಿತ ರೂ. 12 ಸಾವಿರ ಕೋಟಿ ಸಾಲ

ನವದೆಹಲಿ, ಅ. 12: ಆರ್ಥಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಂಡವಾಳ ಯೋಜನೆಗಳಿಗೆ ವೆಚ್ಚ ಮಾಡಲು ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತವಾದ ರೂ. 12 ಸಾವಿರ ಕೋಟಿ ಸಾಲವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿರ್ಮಲಾ ಸೀತಾರಾಮನ್, ಈ 12 ಸಾವಿರ ಕೋಟಿಯಲ್ಲಿ 1600 ಕೋಟಿಯನ್ನು ಈಶಾನ್ಯ ರಾಜ್ಯಗಳಿಗೆ ಮತ್ತು 900 ಕೋಟಿಯನ್ನು ಉತ್ತರ್ ಖಂಡ್ ಮತ್ತು ಹಿಮಾಚಲ ಪ್ರದೇಶಕ್ಕೆ ನೀಡಲಾಗುವುದು ಎಂದರು. ಉಳಿದ 7 ಸಾವಿರದ 500 ಕೋಟಿಯನ್ನು ಉಳಿದಂತಹ ರಾಜ್ಯಗಳಿಗೆ ನೀಡಲಾಗುವುದು, ಪೂರ್ವ ಘೋಷಿತ ಸುಧಾರಣೆ ಗಳನ್ನು ಈಡೇರಿಸಿದ ರಾಜ್ಯಗಳಿಗೆ 2 ಕೋಟಿಯನ್ನು ನೀಡಲಾಗುವುದು ಎಂದು ತಿಳಿಸಿದರು. ಹೊಸ ಅಥವಾ ನಡೆಯುತ್ತಿರುವ ಬಂಡವಾಳ ಯೋಜನೆಗಳಿಗೆ ಈ ಸಾಲವನ್ನು ಸಂಪೂರ್ಣವಾಗಿ ವೆಚ್ಚ ಮಾಡಬಹುದಾಗಿದೆ. ರಾಜ್ಯಗಳು ಗುತ್ತಿಗೆದಾರರು ಮತ್ತು ಪೂರೈಕೆದಾರರ ಬಿಲ್‍ಗಳನ್ನು ಪರಿಹರಿಸಬಹುದಾಗಿದೆ ಆದರೆ, ಎಲ್ಲಾ ಮೊತ್ತವನ್ನು ಮುಂದಿನ ವರ್ಷದ ಮಾರ್ಚ್ 31ಕ್ಕೂ ಮುಂಚಿತವಾಗಿ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ಚೀನಾದಿಂದ ಪಾಕ್ ಮಾದರಿ ಕುತಂತ್ರ

ನವದೆಹಲಿ, ಅ. 12: ಪಾಕಿಸ್ತಾನದ ನಂತರ ಚೀನಾ ಕೂಡ ಭಾರತದ ಗಡಿಯಲ್ಲಿ ವಿವಾದವನ್ನು ಸೃಷ್ಟಿಸುತ್ತಿದೆ, ಅದು ಕುತಂತ್ರದ ಒಂದು ಭಾಗ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ. ಕಳೆದ ಐದು ತಿಂಗಳಿಂದ ಪೂರ್ವ ಲಡಾಖ್‍ನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಈ ಘರ್ಷಣೆ ಹಿಂದೆ ಭಾರೀ ಕುತಂತ್ರವಿರುವ ಬಗ್ಗೆ ರಕ್ಷಣಾ ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದು ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‍ಒ) ನಿರ್ಮಿಸಿದ 44 ಸೇತುವೆಗಳನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ರಕ್ಷಣಾ ಸಚಿವರು, ಭಾರತವನ್ನು ಕೆಣಕುವ ಉದ್ದೇಶದಿಂದಲೇ ಈ ಘರ್ಷಣೆಗೆ ಇಂಬು ನೀಡಲಾಗುತ್ತಿದೆ ಎಂದರು. ಭಾರತದ ಗಡಿಗಳಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿ ಭಾರತವನ್ನು ಕಟ್ಟಿಹಾಕಲು ಪಾಕ್-ಚೀನಾ ಜಂಟಿ ಪ್ರಯತ್ನ ನಡೆಸುತ್ತಿದ್ದು, ಇದರ ಭಾಗವಾಗಿಯೇ ಲಡಾಖ್ ಗಡಿಯಲ್ಲಿ ಸಮಸ್ಯೆ ಸೃಷ್ಟಿಸಲಾಗಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದರು.

ಬಡ್ಡಿ ರಹಿತ ಹಬ್ಬದ ಮುಂಗಡ

ನವದೆಹಲಿ, ಅ. 12: ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಿಸಲು, ಗ್ರಾಹಕರ ಖರ್ಚು ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ತಾ. 12 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ಯೋಜನೆಯನ್ನು 6ನೇ ವೇತನ ಆಯೋಗ ದಿಂದ ನಿಲ್ಲಿಸಲಾಗಿದೆ. ಆದರೆ ಈ ಬಾರಿ ವಿಶೇಷವಾಗಿ ಕೇಂದ್ರ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಬಡ್ಡಿ ರಹಿತ ಮುಂಗಡವನ್ನು ನೀಡ ಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ರುಪೇ ಕಾರ್ಡ್ ರೂಪದಲ್ಲಿ 10 ಸಾವಿರ ರೂಪಾಯಿ ಮುಂಗಡ ದೊರೆಯಲಿದ್ದು, ಮಾ. 31, 2021 ವರೆಗೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಣವನ್ನು 10 ಕಂತುಗಳಲ್ಲಿ ಮರು ಪಾವತಿ ಮಾಡಬಹುದಾಗಿದ್ದು, ಕೇಂದ್ರ ಸರ್ಕಾರ ಇದಕ್ಕಾಗಿ 4,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

ಏಕಕಾಲಕ್ಕೆ 44 ಸೇತುವೆಗಳ ಉದ್ಘಾಟನೆ

ನವದೆಹಲಿ, ಅ. 12: ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‍ಒ) ನಿರ್ಮಿಸಿದ 44 ಸೇತುವೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆಗೊಳಿಸಿದ್ದಾರೆ. ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ವತಿಯಿಂದ 7 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇತುವೆಗಳನ್ನು ನಿರ್ಮಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 10, ಲಡಾಖ್‍ನಲ್ಲಿ 8, ಹಿಮಾಚಲ ಪ್ರದೇಶದಲ್ಲಿ 3, ಪಂಜಾಬ್‍ನಲ್ಲಿ 4, ಉತ್ತರಾಖಂಡ್‍ನಲ್ಲಿ 8, ಅರುಣಾಚಲದಲ್ಲಿ 8 ಹಾಗೂ ಸಿಕ್ಕಿಂನಲ್ಲಿ 4 ಸೇತುವೆಗಳು ನಿರ್ಮಾಣಗೊಂಡಿದ್ದು, ಅವುಗಳನ್ನು ಸಚಿವರು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 44 ಸೇತುವೆಗಳು ವಿಶೇಷವಾಗಿ ದೇಶದ ದೂರದ ಪ್ರದೇಶಗಳಲ್ಲಿ ಸಂಪರ್ಕ ಮತ್ತು ಅಭಿವೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡುತ್ತವೆ ಎಂದು ಹೇಳಿದ್ದಾರೆ.

ರೂ. 100 ನಾಣ್ಯ ಬಿಡುಗಡೆ

ನವದೆಹಲಿ, ಅ. 12: ಗ್ವಾಲಿಯಾರ್ ರಾಜಮಾತೆ ಎಂದೇ ಖ್ಯಾತರಾಗಿರುವ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರೂ.100 ನಾಣ್ಯ ಬಿಡುಗಡೆ ಮಾಡಿದ್ದಾರೆ. ವಿಜಯರಾಜೇ ಸಿಂಧ್ಯಾ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜಮಾತೆ ಸಿಂಧ್ಯಾ ಅವರು ತಮ್ಮ ಜೀವನವನ್ನು ಜನರಿಗಾಗಿ ಅರ್ಪಿಸಿದರು. ತ್ರಿವಳಿ ತಲಾಖ್ ವಿರುದ್ಧ ಕಾನೂನು ಮಾಡಿರುವುದರಿಂದ ದೇಶವು ರಾಜಮಾತೆ ಸಿಂಧ್ಯಾ ಅವರ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ ಎಂದರು. ಸಮಾರಂಭದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು 100 ರೂಪಾಯಿ ನಾಣ್ಯ ಬಿಡುಗಡೆ ಮಾಡಿದ್ದು, ಈ ವಿಶೇಷ ನಾಣ್ಯವನ್ನು ಹಣಕಾಸು ಸಚಿವಾಲಯ ಮುದ್ರಿಸಿದೆ. ಧೀಮಂತ ನಾಯಕಿಗೆ ಗೌರವ ಸಲ್ಲಿಸಿದ ಮೋದಿ, ರಾಜಮಾತಾ ಸಿಂಧಿಯಾ ಅವರ ಜೀವನ ಮತ್ತು ಕಾರ್ಯ ಸದಾ ಬಡವರ ಆಕಾಂಕ್ಷೆಗಳೊಂದಿಗೆ ಬೆಸೆದುಕೊಂಡಿತ್ತು ಮತ್ತು ಅವರ ಜೀವನವು ಜನಸೇವಗೆ ಮೀಸಲಾಗಿತ್ತು. ಕಳೆದ ಶತಮಾನದಲ್ಲಿ ಭಾರತಕ್ಕೆ ನಿರ್ದೇಶನ ನೀಡಿದ ಮತ್ತು ಭಾರತೀಯ ರಾಜಕಾರಣದ ಪ್ರತಿಯೊಂದು ಪ್ರಮುಖ ಹಂತಕ್ಕೂ ಸಾಕ್ಷಿಯಾದ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೇಳಿದ್ದಾರೆ.

9 ತಿಂಗಳಲ್ಲಿ 18 ಉಗ್ರರು ಬಲಿ

ಶ್ರೀನಗರ, ಅ. 12: ಜಮ್ಮು-ಕಾಶ್ಮೀರ ರಾಜ್ಯದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಕಳೆದ 9 ತಿಂಗಳಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎಂಟು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ 18 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು, ಲಷ್ಕರ್-ಎ-ತೋಯಿಬಾ (ಎಲ್‍ಇಟಿ) ಶ್ರೀನಗರದಲ್ಲಿ ನೆಲೆಯೂರಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ, ಶ್ರೀನಗರದಲ್ಲಿ ನೆಲೆ ಸ್ಥಾಪಿಸುವ ಮೊದಲೇ ಉಗ್ರರನ್ನು ಪತ್ತೆ ಹಚ್ಚಿ ಅವರನ್ನು ನಿರ್ಮೂಲನೆಗೊಳಿಸಲು ಭದ್ರತಾ ಪಡೆಗಳಿಗೆ ಸಾಧ್ಯವಾಗಿದೆ. ಮೊದಲ ಬಾರಿಗೆ ಶ್ರೀನಗರದಲ್ಲಿ 9 ತಿಂಗಳಲ್ಲಿ ಎಂಟು ಗುಂಡಿನ ಚಕಮಕಿಗಳು ನಡೆದಿವೆ. ಈ ವರ್ಷ ಇಲ್ಲಿಯವರೆಗೆ ಗುಂಡಿನ ಚಕಮಕಿಗಳಲ್ಲಿ 18 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದರು. ನಗರದಲ್ಲಿ ಉಗ್ರರು ಮುಕ್ತವಾಗಿ ಸಂಚರಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್‍ಇಟಿ ನಗರದಲ್ಲಿ ಹೆಜ್ಜೆ ಇಡಲು ಪ್ರಯತ್ನಿಸುತ್ತಿದೆ. ಆದರೆ ಪೊಲೀಸ್ ಜಾಲ ಸಮರ್ಥ ವಾಗಿದೆ. ಉಗ್ರರು ನಗರದಲ್ಲಿ ನೆಲೆಯೂರಲು ಪ್ರಯತ್ನಿಸಿದಾಗಲೆಲ್ಲಾ, ಸೇನೆ ಅವರನ್ನು ನಿರ್ಮೂಲನೆ ಮಾಡುತ್ತಿದೆ. ಉಗ್ರರು ನಗರದೊಳಗೆ ಬರುವುದನ್ನು ತಡೆಯಲಾಗುತ್ತಿದೆ. ಏಕೆಂದರೆ ಶ್ರೀನಗರಕ್ಕೆ ಬರುವ ಪ್ರತಿಯೊಬ್ಬರನ್ನೂ ಯಂತ್ರದ ಮೂಲಕ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಕೌನ್ಸಿಲರ್‍ಗೆ ಗುಂಡಿಕ್ಕಿ ಹತ್ಯೆ

ರಾಂಚಿ, ಅ. 12: ಸಹಿ ಮಾಡಿಸಿಕೊಳ್ಳುವ ನೆಪದಲ್ಲಿ ಬಿಜೆಪಿ ಕೌನ್ಸಿಲರ್ ಒಬ್ಬರನ್ನು ಮನೆಯಿಂದ ಹೊರಗೆ ಕರೆಸಿಕೊಂಡ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಉತ್ತರಾಖಂಡ್‍ನ ರುದ್ರಾಪುರದಲ್ಲಿ ಈ ಘಟನೆ ನಡೆದಿದೆ. ರುದ್ರಾಪುರದ 13ನೇ ಪಾಲಿಕೆ ಸದಸ್ಯ ಪ್ರಕಾಶ್ ದಾಮಿಗೆ ದುಷ್ಕರ್ಮಿಗಳು ಗುಂಡಿಕ್ಕಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ದಾಮಿಯನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ದುಷ್ಕರ್ಮಿಗಳು ದಾಖಲೆಯೊಂದಕ್ಕೆ ಸಹಿ ಮಾಡಿಸಿಕೊಳ್ಳುವ ನೆಪದಲ್ಲಿ ಮನೆಯಿಂದ ಹೊರಗೆ ಕರೆಸಿಕೊಂಡು ನಂತರ ಗುಂಡಿಕ್ಕಿ ಪರಾರಿಯಾಗಿದ್ದಾರೆ.