ಅಲಮೇಲಮ್ಮ ಎಂದಾಕ್ಷಣ ನೆನಪಿಗೆ ಬರುವುದೇ ಯದುವಂಶದ ಇತಿಹಾಸ... ‘‘ಮಾಲಂಗಿ ಮಡುವಾಗಿ, ತಲಕಾಡು ಮರುಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ’’ ಎಂದು ಕ್ರಿ, ಶ 1610ರಲ್ಲಿ ರಾಜ ಒಡೆಯರಿಗೆ ಅಲಮೇಲಮ್ಮ ನೊಂದು ಶಪಿಸಿದ ಶಾಪದ ಪರಿ ಇದು.
ಸುಮಾರು ನೂರಾರು ವರ್ಷಗಳ ಚರಿತ್ರೆಯ ಪುನರ್ ಮನನ. ಆಗ ಮೈಸೂರು ಸೀಮೆಯ ರಾಜಧಾನಿ ಶ್ರೀರಂಗಪಟ್ಟಣವಾಗಿತ್ತು ಮತ್ತು ವಿಜಯನಗರದ ಸಾಮ್ರಾಜ್ಯದ ಅರಸರಿಗೆ ಸೇರಿತ್ತು. ಶ್ರೀರಂಗಪಟ್ಟಣದ ಪ್ರತಿನಿಧಿ ಯಾಗಿದ್ದಾತನೇ ಶ್ರೀರಂಗರಾಯ ಈತನ ಧರ್ಮಪತ್ನಿ ಮೈಸೂರು ಇತಿಹಾಸ ಪ್ರಸಿದ್ಧ ಮಾತೆ ಅಲಮೇಲಮ್ಮ.
ಒಮ್ಮೆ ಶ್ರೀರಂಗನಿಗೆ ಬೆನ್ನುಫಣಿ ರೋಗ ಉಂಟಾಯಿತು. ಹೀಗೆ ನಾನಾ ಕಡೆಗೆ ಚಿಕಿತ್ಸೆಗೆಂದು ತಿರುಗಿ ಶ್ರೀರಂಗ ನಿಗೆ ಎಲ್ಲೂ ತನ್ನ ಕಾಯಿಲೆ ಗುಣಮುಖವಾಗುವುದಿಲ್ಲ್ಲ. ಕೊನೆಗೆ ಒಬ್ಬ ಸಲಹೆಗಾರನ ಮೇರೆಗೆ ತಲಕಾಡಿಗೆ ತೆರಳಿ ವೈದೇಶ್ವರ ಸ್ವಾಮಿಯನ್ನು ಸ್ವಲ್ಪ ದಿನಗಳ ಕಾಲ ಭಕ್ತಿಯಿಂದ ಪೂಜೆ ನೆರವೇರಿಸಿದರೆ ತಮ್ಮ ರೋಗ ಗುಣಮುಖವಾಗುತ್ತದೆ ಎಂದು ಸಲಹೆ ಇತ್ತ ನಂತರ ಈ ವಿಚಾರವನ್ನು ತನ್ನ ಮಡದಿಗೆ ತಿಳಿಸಿದ ಶ್ರೀರಂಗ ತಲಕಾಡಿಗೆ ತೆರಳಲು ಸಿದ್ದನಾದ. ಆದರೆ ಅಸೌಖ್ಯದಲ್ಲಿದ್ದ ತನ್ನ ಗಂಡನನ್ನು ತಲಕಾಡಿಗೆ ಒಬ್ಬರೇ ಕಳುಹಿಸಬಾರದೆಂದು ತಾನೂ ಕೂಡ ತಮ್ಮ ಜೊತೆ ಬರುವುದಾಗಿ ಹೇಳಿದಳು ಅಲಮೇಲಮ್ಮ. ನಂತರದಲ್ಲಿ ಮೈಸೂರು ಇತಿಹಾಸದಲ್ಲಿ ಆದ ಬೆಳವಣಿಗೆಯೇ ರೋಚಕ ತಿರುವನ್ನು ಪಡೆದುಕೊಂಡಿದೆ.
ಹೀಗೆ ತನ್ನ ಗಂಡನೊಂದಿಗೆ ತಲಕಾಡಿಗೆ ತೆರಳಿದಳು ಅಲಮೇಲಮ್ಮ. ಸ್ವಲ್ಪ ದಿನಗಳ ಕಾಲ ಇಬ್ಬರು ಕೂಡ ತಲಕಾಡಿನಲ್ಲಿ ವೈದೇಶ್ವರ ಸ್ವಾಮಿಯ ಪೂಜೆಯಲ್ಲಿ ತಲ್ಲೀನರಾದರು. ಆದರೂ ಕೂಡ ಶ್ರೀರಂಗರಾಯರಿಗೆ ರೋಗ ನಿವಾರಣೆ ಆಗದೇ ಕೊನೆಗೆ ತಲಕಾಡಿನಲ್ಲೇ ಮರಣಹೊಂದಿದನು. ತದನಂತರ ಮಡದಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿ ಇರುವ ನದಿಯ ಆಚೇಗೆ ಮಾಲಂಗಿ ಎನ್ನುವ ಗ್ರಾಮಕ್ಕೆ ಹೋಗಿ ನೆಲೆಸಿದಳು. ಇತ್ತ ಸಂಪೂರ್ಣ ಶ್ರೀರಂಗಪಟ್ಟಣ ಮೈಸೂರು ಮನೆತನಕ್ಕೆ ಸೇರಿದ ರಾಜ ಒಡೆಯರ ಕೈವಶವಾಯಿತು. ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಎಲ್ಲ ಮಂಗಳವಾರ ಮತ್ತು ಶುಕ್ರವಾರ ದಂದು ಶ್ರೀರಂಗನಾಯಕಮ್ಮ ನವರಿಗೆ ಬಹಳ ವಿಶೇಷ ಪೂಜೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅಲಮೇಲಮ್ಮ ತಮ್ಮಲ್ಲಿದ್ದ ಮುತ್ತಿನ ಮೂಗೂತಿ ಮತ್ತು ಇತರ ಅಮೂಲ್ಯವಾದ ವಜ್ರಾಭರಣಗಳನ್ನು ದೇವರಿಗೆ ಅಲಂಕರಿಸಿ ಮತ್ತೆ ಹಿಂದಕ್ಕೆ ತೆಗೆದುಕೊಳ್ಳುತ್ತಿರುವುದು ವಾಡಿಕೆಯಾಗಿತ್ತು. ಆದರೆ ಆಕೆ ಮಾಲಂಗಿಗೆ ಹೋಗಿ ನೆಲೆಸಿದ ಮೇಲೆ ದೇವಾಲಯದ ಅಧಿಕಾರಿ ಆಭರಣ ಗಳ ವಿಚಾರವನ್ನು ರಾಜ ಒಡೆಯರಿಗೆ ತಿಳಿಸಿದರು. ಎಂದಿನಂತೆ ಪೂಜೆಗೆ ಆಭರಣಗಳನ್ನು ಕಳುಹಿಸಬೇಕೆಂದು ರಾಜ ಒಡೆಯರು ತನ್ನ ಸಾಮಂತರನ್ನು ಕಳುಹಿಸಿದರು. ಆದರೆ ಅಲಮೇಲಮ್ಮ ಅದಕ್ಕೆ ಮಾತ್ರ ಒಪ್ಪಲಿಲ್ಲ. ಇದನ್ನು ಅರಿತ ರಾಜ ಒಡೆಯರ್ ಆಭರಣಗಳನ್ನು ಕೊಡದೇ ಹೋದಲ್ಲಿ ಬಲತ್ಕಾರವಾಗಿ ಅದನ್ನು ಕಸಿದುಕೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಒಡ್ಡಿದರು.
ರಾಜ ಒಡೆಯರ ಎಚ್ಚರಿಕೆ ಸುದ್ದಿ ತಿಳಿದ ಅಲಮೇಲಮ್ಮನಿಗೆ ತುಂಬಾ ಸಂಕಟವಾಯಿತು. ಅತೀ ಆಲೋಚನೆ ಮಾಡಿದ ಅಲಮೇಲಮ್ಮ ಶ್ರೀರಂಗಪಟ್ಟಣಕ್ಕೆ ಬರಿ ಮೂಗುತಿಯೊಂದನ್ನು ಕಳುಹಿಸಿ ಮಿಕ್ಕ ಒಡವೆಗಳನ್ನು ತನ್ನ ಮಡಿಲಲ್ಲಿ ಕಟ್ಟಿಕೊಂಡು ಕಣ್ಣೀರುಹಾಕಿ ನೊಂದ ಮನಸ್ಸಿನಿಂದ ಮಾಲಂಗಿ ಮಡುವಾಗಿ, ತಲಕಾಡು ಮರುಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿ ಮಾಲಂಗಿ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಳು ಎನ್ನುತ್ತದೆ ಚರಿತ್ರೆ. ಅಲಮೇಲಮ್ಮನ ಶಾಪದ ಬಗ್ಗೆ ಇತಿಹಾಸಕಾರ ರೈಸ್ ರವರು ತಮ್ಮ ಗಜಿಟೇರ್‍ನ ಮೊದಲ ಆವೃತ್ತಿಯಲ್ಲಿ ಅಲಮೇಲಮ್ಮನ ಶಾಪದ ಬಗ್ಗೆ ಉಲ್ಲೇಖಿಸಿ ದ್ದಾರೆ ರಾಜ ಒಡೆಯರಿಗೆ ಅಲಮೇಲಮ್ಮ ಪ್ರಾಣಬಿಟ್ಟ ವಿಚಾರವನ್ನು ಕೇಳಿ ತುಂಬಾ ವ್ಯಥೆಯಾಯಿತು. ದೇವರ ಕಾರ್ಯಕ್ಕಾಗಿ ಒಡವೆಗಳಿಗೆ ಹೇಳಿ ಕಳುಹಿಸಿ ದರೆ ಹೀಗೆ ದುಡುಕುವುದೇ. ಅಲಮೇಲಮ್ಮನವರು ಮಾಡಿದ ಆ ಕೃತ್ಯಕ್ಕೆ ಬಹಳ ನೊಂದು ಚಿಂತಾಕ್ರಾಂತರಾದರು ರಾಜ ಒಡೆಯರ್. ಆದಿನ ರಾತ್ರಿ ಅಲಮೇಲಮ್ಮನವರು ರಾಜ ಒಡೆಯರ ಸ್ವಪ್ನದಲ್ಲಿ ಪ್ರತಿಬಂಧ ರೂಪದಲ್ಲಿ ಕಾಣಿಸಿಕೊಂಡರು. ಕೂಡಲೇ ದೊರೆಗಳು ಪತ್ನಿ ಮುಂತಾದವರೊಡನೆ ಪ್ರತಿಬಂಧನ ಭಾದೆಯ ಪರಿಹಾರಕ್ಕಾಗಿ ಅಲಮೇಲಮ್ಮನವರ ರೂಪದ ಚಿನ್ನದ ಪ್ರತಿಮೆಯನ್ನು ಮಾಡಿಸಿ. ನಿತ್ಯ ಪೂಜಾಕಟ್ಟಳೆಯನ್ನು ಮಾಡಿಸಿದ್ದನಲ್ಲದೆ, ಪ್ರತಿ ವರ್ಷ, ನವರಾತ್ರಿಯ ಮಹಾನವಮಿ ಅಲಮೇಲಮ್ಮನವರ ಪ್ರತಿಮೆಗೆ ಆಭರಣಗಳಿಂದ ಅಲಂಕರಿಸಿ ಭಕ್ತಿಯಿಂದ ಪೂಜಿಸಿ, ಭಕ್ಷ್ಯ ಭೋಜನ, ನೈವೇದ್ಯ ವನ್ನು ಮಾಡಿಸಿ, ಕಾಣಿಕೆಗಳನ್ನು ಕಟ್ಟಿ ಭಯ-ಭಕ್ತಿಯಿಂದ ನಡೆದುಕೊಳ್ಳುತ್ತೇನೆಂದು ಪ್ರಾರ್ಥಿಸಿ ಈ ರೀತಿ ವಂಶಪಾರಂಪರ್ಯವಾಗಿ ಮುಂದೆಯು ನಡೆಯುವಂತೆ ನಿಭಂದನೆ ಮಾಡಿದರು. ಅಲ್ಲದೆ ಮೈಸೂರು ಸಂಸ್ಥಾನ ಕಳೆಗುಂದುದಕ್ಕೆ ಅಲಮೇಲಮ್ಮನವರ ಶಾಪವೇ ಕಾರಣ ಎಂದು ಶ್ರೀ ಕಂಠದತ್ತಾ ನರಸಿಂಹರಾಜ ಒಡೆಯರ್ ಸ್ವತಹ ಒಪ್ಪಿಕೊಂಡಿದ್ದರು. ಅಲ್ಲದೇ ಹಲವು ಬಾರಿ ತನ್ನ ಕನಸ್ಸಿನಲ್ಲಿ ಬಂದು ಹಲವು ಸೂಚನೆಯನ್ನು ನೀಡುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ಕ್ರಮೇಣ 2016 ಜೂನ್ ನಲ್ಲಿ ಯದುವಂಶದ ಯದುವೀರ್ ಒಡೆಯರ್, 27ನೇಯ ದೊರೆಗೆ ಶಾಪ ತಟ್ಟದಿರಲಿ ಎಂದೂ ತೊಟ್ಟಿಲು ಶಾಸ್ತ್ರ ವನ್ನೂ ನೆರವೇರಿಸಿರುವುದು ಕೂಡ ವಿಶೇಷವಾಗಿತ್ತು. ಅದೇ ಪ್ರಕಾರ ಆತ ತನ್ನ ಹೆಂಡತಿ ತ್ರಿಷೀಕಾ ಕುಮಾರಿಗೆ ಸಂಪ್ರದಾಯದಂತೆ 2 ನೇ ತಾಳಿಯನ್ನು ಕೂಡ ಕಟ್ಟಿದನು. ಇದೆಲ್ಲವೂ ಮಾಡಿರುವುದು ಅಲಮೇಲಮ್ಮನವರು ಹಾಕಿದ ಶಾಪದ ವಿಮೋಚನೆಗಾಗಿ ಅನ್ನುವುದು ನಮಗೆ ತಿಳಿಯಲು ಸಾಧ್ಯ.
ಅಲಮೇಲಮ್ಮನ ಚರಿತ್ರೆ ಹೇಗೆ ಬಂತೊ ಹಾಗೆ ತಲಕಾಡು ಮರುಳಾಗಿ ದೊಡ್ಡ ರಾಶಿಯ ಮಡಿಲಲ್ಲೇ ಅರ್ಧ ಊರೇ ಮುಚ್ಚಿ ಹೋಗಿದೆ. ಊರನ್ನು ಮೂರು ದಿಕ್ಕಿನಲ್ಲಿ ಸುತ್ತಿ ಹರಿಯುವ ಕಾವೇರಿ ನದಿ ಮರಳು ಅನಂತವಾಗಿ ಬೆಟ್ಟದ ಸಾಲಿನಂತೆ ಊರಿನ ಮೇಲೆ ಚಾಚಿಕೊಂಡಿರುವ ದೃಶ್ಯ ನಿಜಕ್ಕೂ ಆಶ್ಚರ್ಯವನ್ನುಂಟುಮಾಡುತ್ತದೆ. ರಾಜ ಒಡೆಯರ ಕಾಲದಿಂದಲೇ ಅಲ್ಲಿ ಮರಳು ಹೆಚ್ಚಾಯಿತು. ಸರಿ ಸುಮಾರು 30 ಕ್ಕೂ ಅಧಿಕ ದೇವಾಲಯಗಳು ಮರಳು ರಾಶಿಯಲ್ಲಿ ಮುಚ್ಚಿಹೋಗಿವೆ. ಇಂದು ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಇದು ಒಂದಾಗಿ ಹೆಸರಾಗಬೇಕಾದರೆ ಇದರ ಪ್ರಾಮುಖ್ಯವನ್ನು ಹಲವು ದೃಷ್ಟಿಗಳಲ್ಲಿ ಕಾಣಬೇಕು. ಇಲ್ಲಿ 7 ಮತ್ತು 13 ವರ್ಷಗಳಿಗೊಮ್ಮೆ ನಡೆಯುವ ಪ್ರಸಿದ್ಧ ಪಂಚಲಿಂಗ ದರ್ಶನ ಒಂದಾದರೆ ಅದರ ಐತಿಹಾಸಿಕ ಮಹತ್ವವೇ ಇನ್ನೊಂದು. ಇಷ್ಟೇ ಅಲ್ಲದೆ ಹಲವು ಪೌರಾಣಿಕ ಕಥೆಗಳು ಈ ಸ್ಥಳದ ಮಹಿಮೆಯನ್ನು ಹೆಚ್ಚಿಸಿ ವಿಶ್ವದ ಕಣ್ಣು ತೆರೆಸಿರುವುದಂತು ಅಕ್ಷರಶಃ ಸತ್ಯ.
-ಸತೀಶ್ ಕುಮಾರ್ ಎ. ಎಸ್.
ಇತಿಹಾಸ ಉಪನ್ಯಾಸಕರು, ವೀರಾಜಪೇಟೆ.