ಮಡಿಕೇರಿ, ಅ. 12: ಆರು ತಿಂಗಳ ಹಿಂದೆ ಕೊಡಗಿನಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನಿಂದ ಈ ಜಿಲ್ಲೆ ಸಹಜ ಸ್ಥಿತಿಯತ್ತ ಮರಳಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಎಲ್ಲರ ಸಹಕಾರದೊಂದಿಗೆ ಸಾಮೂಹಿಕ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆಶಯ ನುಡಿಯಾಡಿದ್ದಾರೆ. ‘ಶಕ್ತಿ’ಯೊಂದಿಗೆ ಪ್ರಸಕ್ತ ಪರಿಸ್ಥಿತಿಯ ಕುರಿತು ಅವರು ನೆನಪಿಸಿಕೊಂಡರು.ಕಳೆದ ಮಾರ್ಚ್‍ನಲ್ಲಿ ಜಾಗತಿಕ ಕೊರೊನಾ ದೇಶದೆಲ್ಲೆಡೆ ಕಾಣಿಸಿಕೊಂಡಾಗ, ಕೊಡಗು ಜಿಲ್ಲೆಯಲ್ಲಿ ಸಂಪೂರ್ಣ ಹತೋಟಿಯಲ್ಲಿತ್ತು. ಪ್ರಥಮವಾಗಿ ವಿದೇಶದಿಂದ ತವರು ಜಿಲ್ಲೆಗೆ ಮರಳಿದ್ದ ಓರ್ವ ವ್ಯಕ್ತಿಗಷ್ಟೇ ಸೋಂಕು ಪತ್ತೆಯಾಗಿ ಆ ವ್ಯಕ್ತಿ ಕೂಡ ಗುಣಮುಖರಾಗಿದ್ದರು ಎಂದು ಜಿಲ್ಲಾಧಿಕಾರಿ ಬೊಟ್ಟು ಮಾಡಿದರು. ಅನಂತರದಲ್ಲಿ ಒಂದೆರಡು ಪ್ರಕರಣಗಳು ಮತ್ತೆ ಕಾಣಿಸಿಕೊಂಡು ಬಹುತೇಕ ಬೇರೆ ಬೇರೆ ಕಡೆಗಳಿಂದ ಕೊಡಗಿಗೆ ಹಿಂತಿರುಗಿದವರ ಮೂಲಕ ಇತರರಿಗೂ ಪಸರಿಸಿದ್ದು, ಇಂದು ದೇಶ ಹಾಗೂ ರಾಜ್ಯದೊಂದಿಗೆ ಜಿಲ್ಲೆಯಲ್ಲಿ ಕೂಡ ಸಾಕಷ್ಟು ಮಂದಿಗೆ ಸೋಂಕು ಕಾಣಿಸಿಕೊಳ್ಳುವಂತಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ವಿವರಣೆ ನೀಡಿದರು.

3170 ಮಂದಿ ಗುಣ : ಕೊಡಗಿನಲ್ಲಿ ಇದುವರೆಗೆ ಸುಮಾರು 3754 ಮಂದಿಗೆ ಕೊರೊನಾ ಸೋಂಕು ಗೋಚರಿಸಿದ್ದರೂ, 3170 ಮಂದಿ ಗುಣಮುಖರಾಗಿರುವದು ಸಮಾಧಾನಕರ ಎಂದ ಅವರು, 528 ಪ್ರಕರಣಗಳು ಈಗ ಸಕ್ರೀಯವಿದ್ದು, ಈ ಹಂತದಲ್ಲಿ ಒಟ್ಟು 56 ಮಂದಿ ಕೊಡಗಿನಲ್ಲಿ ಮರಣ ಹೊಂದಿರುವದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲರ ಸಹಕಾರ ಅಗತ್ಯ : ಕೊಡಗಿನಲ್ಲಿ ಕೊರೊನಾ ಮುಕ್ತ ವಾತಾವರಣದೊಂದಿಗೆ ಸಹಜ ಸ್ಥಿತಿಗಾಗಿ ಜಿಲ್ಲಾಡಳಿತದೊಂದಿಗೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ನೌಕರರ ಸಹಿತ ಎಲ್ಲಾ ಇತರ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಜೋಡಿಸಿದ್ದಾರೆ. ಹಾಗೆಯೇ ಈ ಜಿಲ್ಲೆಯ ಜನತೆ ಹಾಗೂ ಜನಪ್ರತಿನಿಧಿಗಳು ಕೂಡ ಇನ್ನಷ್ಟು ಜಾಗೃತರಾಗಿ ಸಹಕರಿಸುವ ಅವಶ್ಯಕತೆ ಇರುವದಾಗಿ ಅವರು ಕಳಕಳಿ ವ್ಯಕ್ತಪಡಿಸಿದರು.

ಕಾಲಮಿತಿ ತಿಳಿದಿಲ್ಲ : ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಇನ್ನು ಕೂಡ ನಿರ್ದಿಷ್ಟ ಔಷಧಿ ಕಂಡು ಹಿಡಿಯದಿರುವ ಕಾರಣ ಈ ಸೋಂಕು ತಡೆಗೆ ಕಾಲಮಿತಿ ಹೇಳಲಾಗದು ಎಂದು ಉಲ್ಲೇಖಿಸಿದ ಅನೀಸ್ ಕಣ್ಮಣಿ ಜಾಯ್, ಸಾರ್ವಜನಿಕರು ಸ್ವಯಂ ಜಾಗೃತರಾಗಿ ಮುಂಜಾಗ್ರತೆ ವಹಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಇದೇ ವೇಳೆ ಕರೆ ನೀಡಿದರು.