ಮಡಿಕೇರಿ, ಅ. 12: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ಆಚರಣೆಗೆ ಸೀಮಿತ ವಾಗಿರುವುದು ಈಗಾಗಲೇ ನಿರ್ಧರಿತ ವಿದ್ಯಾಮಾನ. ಸರ್ಕಾರದ ಸೂಚನೆ ಯನ್ವಯ ದಸರಾ ಸರಳವಾಗಿ ಆಚರಿಸಲ್ಪಡುವ ಹಿನ್ನೆಲೆಯಲ್ಲಿ ಈ ಬಾರಿ ವೈಭವ ಮಂಟಪಗಳಿರುವದಿಲ್ಲ ಮಾತ್ರವಲ್ಲದೆ ಸಾಂಪ್ರದಾಯಿಕ ಕರಗ ಪ್ರದಕ್ಷಿಣೆ ಕೂಡ ಎರಡು ದಿನಕ್ಕೆ ಮಾತ್ರ ಸೀಮಿತವಾಗಿದೆ. ವಿಜಯದಶಮಿ ಯಂದು ದಶ ದೇವಾಲಯಗಳ ಪೈಕಿ ಕೆಲವರು ಮಾತ್ರ ವಿಗ್ರಹ ಮೆರವಣಿಗೆ ಮಾಡಲಿದ್ದು, ಕಲಶ ಪ್ರದಕ್ಷಿಣೆಗೆ ಒತ್ತು ನೀಡಲಾಗಿದೆ.
ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಕಲಶÀದೊಂದಿಗೆ ದೇವಿ ವಿಗ್ರಹ ಅಳವಡಿಸಿ ಮೆರವಣಿಗೆ ನಡೆಸಲು ಚಿಂತಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಮನುಮಂಜುನಾಥ್ ತಿಳಿಸಿದ್ದಾರೆ. ದೇವಿ ವಿಗ್ರಹ ಹಾಗೂ ಕಲಶವನ್ನು ಒಳಗೊಂಡ ಮೆರವಣಿಗೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಂಡಿನ ಮಾರಿಯಮ್ಮ ದೇವಾಲಯ ಮಂಟಪ ಸಮಿತಿ ಅಧ್ಯಕ್ಷ ದಿನೇಶ್ ನಾಯರ್ ಹೇಳಿದ್ದಾರೆ.ದಶಮಂಟಪ ಸಮಿತಿ ಸಭೆಯ ನಿರ್ಧಾರದಂತೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೋಟೆ ಮಾರಿಯಮ್ಮ ಸಮಿತಿ ಅಧ್ಯಕ್ಷ ಸಂತೋಷ್ ನಾಗರಾಜ್, ಚೌಡೇಶ್ವರಿ ಸಮಿತಿ ಅಧ್ಯಕ್ಷ ಡಿ.ಪಿ. ನಾಗೇಶ್, ದೇಚೂರು ರಾಮಮಂದಿರ ಸಮಿತಿ ಅಧ್ಯಕ್ಷ ವಿಜಯಕುಮಾರ್ ಇವರುಗಳು ತಿಳಿಸಿದ್ದಾರೆ. ಕಲಶವನ್ನು ಮಾತ್ರ ಪಿಕ್‍ಅಪ್ ಮೂಲಕ ಕೊಂಡೊಯ್ದು ಬನ್ನಿ ಕಡಿಯುವದಾಗಿ ಕರವಲೆ ಭಗವತಿ ಮಂಟಪ ಸಮಿತಿ ಅಧ್ಯಕ್ಷ ತೆಕ್ಕಡ ಕಾಶಿ
ಕಾವೇರಪ್ಪ ಹೇಳಿದ್ದು, ಕಲಶÀ ಹಾಗೂ ದೇವಿ ವಿಗ್ರಹವನ್ನು ಮೆರವಣಿಗೆ ಮಾಡಲಾಗುತ್ತದೆ ಎಂದು ಕೋದಂಡರಾಮ ದೇವಾಲಯ ಮಂಟಪದ ಅಧ್ಯಕ್ಷ ಮಹೇಶ್ ತಿಳಿಸಿದ್ದಾರೆ. ದೇವಾಲಯದಲ್ಲಿ ಕರಗಗಳನ್ನು ಬರಮಾಡಿ ಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಂಚಿಕಾಮಾಕ್ಷಿ ದೇವಾಲಯದಿಂದಲೂ ಕಲಶ ಹಾಗೂ ದೇವಿ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ಅಧ್ಯಕ್ಷರಾದ ಭೌತಮ್ ಹಾಗೂ ಜಿ.ಆರ್. ರಾಘವೇಂದ್ರ ಮಾಹಿತಿ ನೀಡಿದ್ದಾರೆ. ಕೋಟೆ ಗಣಪತಿ ಮಂಟಪ ಸಮಿತಿಯ ಸಭೆ ಇನ್ನೂ ನಡೆದಿಲ್ಲ; ಸಭೆ ನಡೆಸಿ ನಿರ್ಧರಿಸ ಲಾಗುತ್ತದೆ ಎಂದು ಅಧ್ಯಕ್ಷ ಸುಧೀಶ್ ಹೇಳಿದ್ದಾರೆ. ಒಂದೆರಡು ದಿನಗಳಲ್ಲಿ ಉತ್ಸವದ ಕುರಿತು ಸಭೆ ನಡೆಸಿ ತೀರ್ಮಾನಿಸಲಿರುವದಾಗಿ ಪೇಟೆ ರಾಮಮಂದಿರ ಸಮಿತಿ ಪ್ರಮುಖರು ತಿಳಿಸಿದ್ದಾರೆ.
ಸಂಪ್ರದಾಯಕ್ಕೆ ಒತ್ತು
ಸರಳವಾಗಿ ದಸರಾ ಆಚರಿಸಬೇಕಾದ ಅನಿವಾರ್ಯತೆಯ ನಡುವೆಯೂ ದಶಮಂಟಪಗಳು ಈ ಬಾರಿ ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಲಿವೆ. ಇದುವರೆಗೂ ಯಾವದೇ ನಿರ್ದಿಷ್ಟ ತೀರ್ಮಾನವಾಗಿಲ್ಲ. ಉತ್ಸವದ ಅಂತಿಮ ರೂಪುರೇಷೆಯ ಬಗ್ಗೆ ತಾ. 15 ರಂದು ಚೌಡೇಶ್ವರಿ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಸಭೆ ಕರೆದಿದ್ದು, ಹತ್ತು ಮಂಟಪಗಳ ಪ್ರಮುಖರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಗುರುರಾಜ್ ತಿಳಿಸಿದ್ದಾರೆ.
ಎರಡು ದಿನ ಮಾತ್ರ ಕರಗ ಪ್ರದಕ್ಷಿಣೆ
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಎರಡು ದಿನ ಮಾತ್ರ ಕರಗ ಪ್ರದಕ್ಷಿಣೆ ನಡೆಯಲಿದೆ. ತಾ. 17ರ ಆರಂಭದ ದಿನ ಹಾಗೂ ತಾ. 26ರ ವಿಜಯದಶಮಿಯಂದು ಪ್ರತ್ಯೇಕ ವಾದ್ಯಗೋಷ್ಠಿಯೊಂದಿಗೆ ನಗರದ ನಾಲ್ಕು ಶಕ್ತಿದೇವತೆಗಳ ಕರಗ ಪ್ರದಕ್ಷಿಣೆ ನಡೆಯಲಿದೆ. ಉಳಿದ ದಿನಗಳಲ್ಲಿ ದೇವಾಲಯಗಳಲ್ಲೇ ಪೂಜೆ ನೆರವೇರಲಿದೆ ಎಂದು ಕರಗ ಸಮಿತಿಯ
(ಮೊದಲ ಪುಟದಿಂದ) ಪ್ರಮುಖರಾದ ಮಧುರಯ್ಯ ತಿಳಿಸಿದ್ದಾರೆ. ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ಚಾಮಿ, ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್, ಕೋಟೆ ಮಾರಿಯಮ್ಮ ಕರಗವನ್ನು ಅನೀಶ್ ಕುಮಾರ್, ಕಂಚಿಕಾಮಾಕ್ಷಿ ಕರಗವನ್ನು ನವೀನ್ ಹೊರಲಿದ್ದಾರೆ.
ಅನುದಾನ ಹಂಚಿಕೆ
ಈ ಬಾರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಅದನ್ನು ಮಂಟಪ ಸಮಿತಿಗಳಿಗೆ ವಿಂಗಡಿಸಿ ಹಂಚುವ ಜವಾಬ್ದಾರಿಯನ್ನು ದಸರಾ ಸಮಿತಿಗೆ ವಹಿಸಲಾಗುತ್ತದೆ. ದಸರಾ ಸಮಿತಿಯಲ್ಲಿ ನಗರಸಭಾ ಆಯುಕ್ತರು ಇದ್ದು, ಅವರು ಹಾಗೂ ಕನ್ನಡ ಸಂಸ್ಕøತಿ ಇಲಾಖೆಯ ಅಧಿಕಾರಿ ಬಿಲ್ ಇತ್ಯಾದಿಗಳನ್ನು ಪರಿಶೀಲಿಸಿ ಹಣ ಮಂಜೂರು ಮಾಡಲು ಕ್ರಮಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.