ಕುಶಾಲನಗರ, ಅ. 13: ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಕೆಳಭಾಗದಲ್ಲಿ ಪುರುಷನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗಾಳಿಸುದ್ದಿ ಹರಡಿ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಧಾವಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆಯಿತು.

ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬನ ತಲೆಭಾಗ ಕಾಣುತ್ತಿದೆ ಎಂದು ಕೆಲವರು ಸುದ್ದಿ ಹಬ್ಬಿಸಿದ ಬೆನ್ನಲ್ಲೇ ನೂರಾರು ಜನ ಸೇತುವೆ ಮೇಲೆ ನಿಂತು ನೋಡಲು ಪ್ರಾರಂಭಿಸಿ ಸ್ವಲ್ಪ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು.

ಖಚಿತ ಮಾಹಿತಿ ಯಾರಿಗೂ ದೊರಕದಿದ್ದರೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ನದಿ ವ್ಯಾಪ್ತಿಯಲ್ಲಿ ಸ್ವಲ್ಪಕಾಲ ಪರಿಶೀಲನೆ ನಡೆಸಿದರೂ ಯಾವುದೇ ಸುಳಿವು ಸಿಗದೆ ಹಿಂದಿರುಗಬೇಕಾಯಿತು. ಸಂಜೆ ತನಕ ಇದೇ ಗಾಳಿ ಸುದ್ದಿ ಅಲ್ಲಲ್ಲಿ ಹಬ್ಬಿ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಮಾಹಿತಿ ಕಂಡುಬಂತು.