60ಕ್ಕಿಂತ ಕಡಿಮೆ ವಯಸ್ಸಿನವರ ಸಾವು
ನವದೆಹಲಿ, ಅ. 13: ದೇಶದಲ್ಲಿ ಸಂಭವಿಸುತ್ತಿರುವ ಕೋವಿಡ್ ಸಾವಿನ ಪೈಕಿ ಸುಮಾರು ಶೇ. 47 ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಸುಮಾರು 70 ಪ್ರತಿಶತದಷ್ಟು ಕೋವಿಡ್ ಸಾವುಗಳು ಪುರುಷರದ್ದಾಗಿದೆ. ಸೋಂಕಿನಿಂದ 30 ಪ್ರತಿಶತದಷ್ಟು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದರು. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು ಶೇ. 53 ಕೋವಿಡ್ ಸಾಸುಗಳು 45-60 ವರ್ಷದವರಲ್ಲಿ ಸಂಭವಿಸಿದರೆ 26-44 ವರ್ಷದವರು ಶೇ. 35 ಮಂದಿ 18-25 ವರ್ಷ ವಯೋಮಾನದವರು ಶೇ. 10 ಹಾಗೂ 17 ವರ್ಷದವರು ಶೇ. 1 ರಷ್ಟು ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಭೂಷಣ್ ಹೇಳಿದರು. ಕೊರೊನಾ ಲಕ್ಷಣವಿರುವ ಹಾಗೂ ಅದರ ಲಕ್ಷಣವಿಲ್ಲದೆ ವಿವಿಧ ವಯೋಮಾನದವರಲ್ಲಿ ಸಾವಿನ ಪ್ರಮಾಣ- 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ, 24.6 ಶೇಕಡದಷ್ಟು ಸಾವುಗಳು ಕೊರೊನಾ ಲಕ್ಷಣ ಹೊಂದಿದವರದ್ದಾದರೆ ಕೊರೊನಾ ಲಕ್ಷಣ ಇಲ್ಲದವರಿಗೆ ಶೇ. 4.8 ಸಾವು ಸಂಭವಿಸಿದೆ ಎಂದರು.
ಗಡಿಯಲ್ಲಿ ಶಾಂತಿ ಸೂತ್ರಕ್ಕೆ ಸಮ್ಮತಿ
ನವದೆಹಲಿ, ಅ. 13: ಪೂರ್ವ ಲಡಾಕ್ನ ಗಡಿ ಪ್ರದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ವಿವಾದವನ್ನಾಗಿಸದೆ ಇರಲು ಮತ್ತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಭಾರತ ಮತ್ತು ಚೀನಾದ ಉನ್ನತ ಸೇನಾ ಕಮಾಂಡರ್ಗಳು ಒಪ್ಪಿಕೊಂಡಿದ್ದಾರೆ. ಗಡಿ ಘರ್ಷಣೆಯಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಉಭಯ ದೇಶಗಳ ಕಮಾಂಡರ್ಗಳು ಇಂದು ಪೂರ್ವ ಲಡಾಕ್ನ ಭಾರತದ ಬದಿಯಲ್ಲಿರುವ ಚುಶುಲ್ನಲ್ಲಿ ಏಳನೇ ಸುತ್ತಿನ ಮಾತುಕತೆ ನಡೆಸಿದರು. ಸುಮಾರು 12 ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಎಲ್ಲಾ ಘರ್ಷಣಾ ಬಿಂದುಗಳಿಂದ ಸಂಪೂರ್ಣ ಸೇನಾ ನಿಷ್ಕ್ರಿಯಗೊಳಿಸುವಿಕೆ ಬಗ್ಗೆ ಮತ್ತು ಉಲ್ಬಣಗೊಳ್ಳುವ ಮಾರ್ಗಗಳ ಕುರಿತು ಚರ್ಚಿಸಿದರು. ಮಾತುಕತೆಯ ನಂತರ ಅವರು ಜಂಟಿ ಹೇಳಿಕೆ ಹೊರಡಿಸಿದ್ದು, ಸೇನಾ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದ ಮತ್ತು ಸಂವಹನವನ್ನು ಕಾಪಾಡಿಕೊಳ್ಳಲು ಎರಡೂ ಸೇನೆಗಳು ಒಪ್ಪಿಕೊಂಡಿವೆ ಮತ್ತು ಸಾಧ್ಯವಾದಷ್ಟು ಬೇಗ ಪರಸ್ಪರ ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ.
ಕಾಯ್ದೆಯಿಂದ ರೈತರು ಉದ್ಯಮಿಗಳಾಗಲಿದ್ದಾರೆ
ಮುಂಬೈ, ಅ. 13: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಐತಿಹಾಸಿಕ ಹೊಸ ಕೃಷಿ ಸುಧಾರಣೆಗಳು ರೈತರನ್ನು ಉದ್ಯಮಿಗಳನ್ನಗಿಸಲು ಸಹಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಬಾಳಾಸಾಹೇಬ್ ವಿಖೆ ಪಾಟಿಲ್ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಪ್ರವರ ಗ್ರಾಮೀಣ ಶೈಕ್ಷಣಿಕ ಸಮಾಜದ ಮರುನಾಮಕರಣ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಿದೆ ಎಂದಿದ್ದಾರೆ. ಐತಿಹಾಸಿಕ ಎಂದು ಹೇಳಿರುವ ಪ್ರಧಾನಿ ಮೋದಿ, ಕೃಷಿ ಹಾಗೂ ಕೃಷಿಕರನ್ನು ಅನ್ನದಾತರ ಪಾತ್ರದಿಂದ ಉದ್ಯೋಗದಾತ (ಉದ್ಯಮಿ) ರನ್ನಾಗಿಸುವುದಕ್ಕೆ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಜನತೆಗೆ ತಿಳಿಸಿದ್ದಾರೆ. ಗುಜರಾತ್, ಮಹಾರಾಷ್ಟ್ರ, ಹರ್ಯಾಣ, ಪಂಜಾಬ್ಗಳಲ್ಲಿ ಹೆಚ್ಚಿನ ಪ್ರಮಾಣದ ಹಾಲು, ಸಕ್ಕರೆ, ಗೋಧಿ ಉತ್ಪಾದನೆಯನ್ನು ಉಲ್ಲೇಖಿಸಿರುವ ಮೋದಿ, ಈ ರೀತಿಯ ಸ್ಥಳೀಯ ಮಾದರಿಗಳು ದೇಶವನ್ನು ಮುಂದೆ ಕೊಂಡೊಯ್ಯುತ್ತವೆ ಎಂದು ತಿಳಿಸಿದ್ದಾರೆ.
ಜನನ-ಮರಣ ನೋಂದಣಿಗೆ ಆಧಾರ್ ಬೇಡ
ನವದೆಹಲಿ, ಅ. 13: ಜನನ-ಮರಣ ನೋಂದಣಿಗೆ ಆಧಾರ್ ಕಾರ್ಡ್ ಹಾಜರುಪಡಿಸುವ ಆಗತ್ಯವಿಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಇಂಡಿಯಾ (ಆರ್ಜಿಐ) ಸ್ಪಷ್ಟಪಡಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ರಿಜಿಸ್ಟ್ರಾರ್ ಜನರಲ್ ಇಂಡಿಯಾ ಈ ವಿವರಣೆಯನ್ನು ನೀಡಿದೆ. ಒಂದೊಮ್ಮೆ ಯಾರಾದರೂ ಸ್ವಯಂ ಪ್ರೇರಣೆಯಿಂದ ಆಧಾರ್ ಸಲ್ಲಿಸಿದರೆ, ಆ ದಾಖಲೆಯನ್ನು ದತ್ತಾಂಶಗಳಲ್ಲಿ ಸಂಗ್ರಹಿಸಬಾರದು ಎಂದು ರಿಜಿಸ್ಟ್ರಾರ್ ಜನರಲ್ ಇಂಡಿಯಾ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಮರಣ ದೃಢೀಕರಣ ಪತ್ರ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕೇ? ಎಂದು ವಿಶಾಖಪಟ್ಟಣದ ವಕೀಲ ಎಂಬಿಎಸ್ ಅನಿಲ್ಕುಮಾರ್ ಎಂಬವರು ಆರ್ಟಿಐ ಮೂಲಕ ಕೇಳಿದ್ದರು. ಆ ಮನವಿಗೆ ಪ್ರತಿಕ್ರಿಯಿಸಿ. ಜನನ ಮತ್ತು ಮರಣ ದೃಢೀಕರಣಕ್ಕೆ ಆಧಾರ್ ಸಂಖ್ಯೆ ಅಗತ್ಯವಿಲ್ಲ ಎಂದು ಆರ್ಜಿಐ ಹೇಳಿದೆ. 1969 ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ ಅಡಿಯಲ್ಲಿ ಪ್ರಸ್ತುತ ಜನನ ಮತ್ತು ಮರಣಗಳ ನೋಂದಣಿ ನಡೆಯುತ್ತಿದೆ ಎಂದು ಹೇಳಿದೆ. ದೇಶದಲ್ಲಿ ಸಂಭವಿಸುವ ಪ್ರತಿಯೊಂದು ಜನನ, ಮರಣ ನೋಂದಣಿಯನ್ನು ನೋಂದಣಿ ಅಧಿನಿಯಮ 1969 ರನ್ವಯ ಕಡ್ಡಾಯ ಮಾಡಲಾಗಿದೆ. ಕಾಯ್ದೆಯು ಕರ್ನಾಟಕ ರಾಜ್ಯದಲ್ಲಿ 1970 ರಿಂದ ಜಾರಿಗೆ ಬಂದಿದೆ. ರಾಜ್ಯದಲ್ಲಿ ಜನನ-ಮರಣ ನೋಂದಣಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಹೊರತಂದಿದ್ದು, ಈ ನಿಯಮಗಳು 1971 ರಿಂದ ರಾಜ್ಯಾದ್ಯಂತ ಜಾರಿಗೊಳಿಸಲಾಗಿತ್ತು.
ಮಾದಕ ದ್ರವ್ಯ ಸಾಗಾಟದ ಗ್ಯಾಂಗ್ ಬಂಧನ
ಚೆನ್ನೈ, ಅ. 13: ಚೆನ್ನೈ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, “ಸ್ಯೂಡೋಫೆಡ್ರಿನ್” ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಬಂಧಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸ್ಪೈಸಿ ಪದಾರ್ಥಗಳ ಮಾರಾಟ ಸಂಸ್ಥೆ “ಆಚಿ” ಪ್ಯಾಕೆಟ್ಗಳೊಳಗೆ “ಸ್ಯೂಡೋಫೆಡ್ರಿನ್” ಎಂಬ ಮಾದಕ ದ್ರವ್ಯವನ್ನು ಇಟ್ಟು ಕಳ್ಳ ಸಾಗಣೆಗೆ ಯತ್ನಿಸಿದ್ದ ನಾಲ್ವರ ತಂಡವನ್ನು ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದ ಕೊರಿಯರ್ ಏರ್ ಟರ್ಮಿನಲ್ನಲ್ಲಿ ಶಂಕಾಸ್ಪದವಾಗಿ ಬಾಕ್ಸ್ಗಳನ್ನು ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದ ನಾಲ್ವರನ್ನು ಶೋಧಕ್ಕೆ ಒಳಪಡಿಸಿದಾಗ ಅವರು ತಂದಿದ್ದ ಬಾಕ್ಸ್ನಲ್ಲಿ ಆಚಿ ಸ್ಪೈಸಿ ಪದಾರ್ಥಗಳ ಪ್ಯಾಕೆಟ್ಗಳಿದ್ದವು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಅದನ್ನು ತೆರೆದು ನೋಡಿದಾಗ ಅದರಲ್ಲಿ ಸುಮಾರು ರೂ. 30 ಲಕ್ಷ ಮೌಲ್ಯದ 3 ಕೆ.ಜಿ. “ಸ್ಯೂಡೋಫೆಡ್ರಿನ್” ಮಾದಕ ದ್ರವ್ಯ ಪತ್ತೆಯಾಗಿತ್ತು.
ಕೇಂದ್ರದೊಂದಿಗೆ ರೈತರ ಮಾತುಕತೆ
ನವದೆಹಲಿ, ಅ. 13: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತ ಸಂಘಟನೆಗಳು ಬುಧವಾರ ಕೇಂದ್ರದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿವೆ. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಲವಾರು ರೈತ ಸಂಘಟನೆಗಳ ಪ್ರತಿನಿಧಿಗಳು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಕೇಂದ್ರದೊಂದಿಗೆ ಮಾತುಕತೆ ನಡೆಸಲು ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ರಾಜೇವಾಲ್) ಮುಖ್ಯಸ್ಥ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿದ್ದಾರೆ. ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್, ಜಗ್ಜಿತ್ ಸಿಂಗ್ ದಲೆವಾಲ್, ಜಗ್ಮೋಹನ್ ಸಿಂಗ್, ಕುಲ್ವಂತ್ ಸಿಂಗ್, ಸುರ್ಜಿತ್ ಸಿಂಗ್ ಮತ್ತು ಸತ್ನಮ್ ಸಿಂಗ್ ಸಾಹ್ನಿ ಈ ಸಮಿತಿಯ ಸದಸ್ಯರಾಗಿದ್ದಾರೆ.
ಭಾರೀ ಮಳೆಗೆ ಇಬ್ಬರ ಸಾವು
ವಿಜಯವಾಡ, ಅ. 13: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಆಂಧ್ರಪ್ರದೇಶ, ತೆಲಂಗಾಣ, ವಿಜಯನಗರಂ, ನೆಲ್ಲೂರು, ಚಿತ್ತೂರು, ಅನಂತಪುರಂ, ಗುಂಟೂರು, ವಿಶಾಖಪಟ್ಟಣಂ ಸೇರಿ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ವಿಶಾಖಪಟ್ಟಣದ ನರ್ಶಿಪಟ್ನಂ-ತೂನಿ ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದು, ಮೃತ ಮಹಿಳೆಯನ್ನು ಜಿ. ದೇವಿ (58) ಎಂದು ಗುರುತಿಸಲಾಗಿದೆ. ಮಹಿಳೆ ನರ್ಸಿಪಟ್ಟಣಂದಿಂದ ತಿರುಪತಿಗೆ ಕಾರಿನಲ್ಲಿ ಸಂಬಂಧಿಕರಾದ ಅರ್ಚನಾ (28), ದೀಪಕ್ (34), ವೆಂಕಟೇಶ್ (30) ಎಂಬವರ ಜೊತೆಗೆ ತೆರಳುತ್ತಿದ್ದರು. ಕಾರಿನೊಳಗಿದ್ದ ದೀಪಕ್, ಅರ್ಚನಾ, ವೆಂಕಟೇಶ್ ಅವರು ಅದೃಷ್ಟವಶಾತ್ ಕಾರಿನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ದೇವಿಯವರು ಕಾರಿನೊಂದಿಗೆ ಕೊಚ್ಚಿ ಹೋಗಿದ್ದಾರೆ. ಘಟನೆ ಬಳಿಕ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂವರನ್ನು ರಕ್ಷಣೆ ಮಾಡಿದ್ದಾರೆ.