ಶನಿವಾರಸಂತೆ, ಅ. 13: ಕುಗ್ರಾಮವೊಂದರ ಬಡ ಕಾರ್ಮಿಕ ದಂಪತಿಯರ ಮಕ್ಕಳಾಗಿ ಜನಿಸಿದ ಸಹೋದರರು ಕಷ್ಟಪಟ್ಟು ಹಳ್ಳಿ ಸರಕಾರಿ ಶಾಲೆಯಲ್ಲಿ ಓದು ಪೂರೈಸಿ, ಪೊಲೀಸ್ ಇಲಾಖೆಯ ಪರೀಕ್ಷೆ ಬರೆದು ಇದೀಗ ಆರಕ್ಷಕ ನಿರೀಕ್ಷಕರಾಗಿ ಹೆತ್ತವರಿಗೂ, ಗ್ರಾಮಕ್ಕೂ ಕೀರ್ತಿ ತಂದಿದ್ದಾರೆ.ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಬೂದಿತಿಟ್ಟು ಗ್ರಾಮದ ಬಡ ಕೂಲಿ ಕಾರ್ಮಿಕರಾದ ಕರಿನಾಯಕ-ಶಾರದಮ್ಮ ದಂಪತಿಯ ಪುತ್ರರಾದ ಮನು ಹಾಗೂ ವಿನು ಸಬ್‍ಇನ್ಸ್ ಪೆಕ್ಟರ್‍ಗಳಾಗಿ ಆಯ್ಕೆಯಾದವರು. ಕುಗ್ರಾಮ ಬೂದಿತಿಟ್ಟು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಪಿರಿಯಾಪಟ್ಟಣ ಸರಕಾರಿ ಕಾಲೇಜಿನಲ್ಲಿ ಪಿಯುಸಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದಾರೆ.2014ರ ಬ್ಯಾಚ್‍ನಲ್ಲಿ ನಡೆದ ಪೊಲೀಸ್ ಸಬ್‍ಇನ್ಸ್‍ಪೆಕ್ಟ್ ನೇರ ನೇಮಕಾತಿಯಲ್ಲಿ ಮನು ಅವರು ರಾಜ್ಯಕ್ಕೆ 30ನೇ ರ್ಯಾಂಕ್ ಗಳಿಸಿ ಮೈಸೂರು ಪೊಲೀಸ್ ಅಕಾಡೆಮಿ ಯಲ್ಲಿ ತರಬೇತಿ ಪಡೆದು ಬೆಂಗಳೂರಿನ ಕೊತ್ನಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಹೋದರ ವಿನು 2019ನೇ ಸಾಲಿನ ಸಬ್‍ಇನ್ಸ್‍ಪೆಕ್ಟರ್ ನೇರ ನೇಮಕಾತಿಯ 200 ಹುದ್ದೆಗಳಲ್ಲಿ 111ನೇ ರ್ಯಾಂಕ್ ಹಾಗೂ 300 ಹುದ್ದೆಗಳ ನೇರ ನೇಮಕಾತಿಯಲ್ಲಿ 89ನೇ ರ್ಯಾಂಕ್
(ಮೊದಲ ಪುಟದಿಂದ) ಪಡೆದಿದ್ದು, ಈಗ 89ನೇ ರ್ಯಾಂಕ್‍ನಡಿ ತರಬೇತಿ ಪಡೆಯಲು ಅಣಿಯಾಗಿದ್ದಾರೆ. ತುಂಡು ಭೂಮಿಯನ್ನು ಹೊಂದಿರದ ತಂದೆ ಕರಿನಾಯಕ ಈಗಲೂ ಆನೆಚೌಕೂರು ರಸ್ತೆ ಬದಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ.
ಮೂಲಸೌಕರ್ಯಗಳಿಲ್ಲದೆ ಪುಟ್ಟ ಗ್ರಾಮದ ಯುವಕರು ಸರಕಾರಿ ಶಾಲೆ ಹಾಗೂ ಕಾಲೇಜಿನಲ್ಲೇ ಓದಿ ಸಬ್‍ಇನ್ಸ್‍ಪೆಕ್ಟರ್ ಹುದ್ದೆ ಗಿಟ್ಟಿಸಿಕೊಂಡಿರುವ ಬಗ್ಗೆ ಬೂದಿತಿಟ್ಟು ಗ್ರಾಮಸ್ಥರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. -ನರೇಶ್ಚಂದ್ರಬಡ ಕಾರ್ಮಿಕರ ಮಕ್ಕಳೀಗ ಪೊಲೀಸ್ ಅಧಿಕಾರಿಗಳು