ವೀರಾಜಪೇಟೆ, ಅ. 13 : ದೇಶದ ಬೆನ್ನೆಲಬು ರೈತ, ಅನ್ನದಾತನ ಸಂಕಷ್ಟ ದೇವರಿಗೇ ಪ್ರೀತಿ. ವರ್ಷವಿಡಿ ಕೂಳಿಗಾಗಿ ಮೂರು ಹೊತ್ತು ದುಡಿದು ಬೆಳೆದ ಬೆಳೆಗಳು ಕೈಗೆಟುಕದೆ ಮಾಡಿದ ಸಾಲದ ಹೊರೆ ಒಂದು ಕಡೆ ಆದರೆ; ಸಂಸಾರ ಸಾಗಿಸುವ ದುಸ್ತರದ ಹೊಣೆ ಮತ್ತೊಂದೆಡೆ. ಇವೆರಡರ ನಡುವೆ ಕಾದ ಕಾವಲಿಯಲ್ಲಿ ಅರೆ ಬೆಂದ ಶೋಚನೀಯ ಸ್ಥಿತಿ ರೈತರದ್ದಾಗಿದೆ.

ತಾಲೂಕಿನ ಹೆಚ್ಚಿನಾಂಶ ರೈತರು ಮುಂಗಾರು ಹಂಗಾಮಿನಲ್ಲಿ ಭತ್ತ ಕೃಷಿ ಮಾಡುವುದು ವಾಡಿಕೆ. ಹವಮಾನ ವೈಪರೀತ್ಯದಿಂದ ಸಾಂಪ್ರದಾಯಿಕ ಸಸಿಮಡಿ ಮಾಡಲಾಗದೆ ನೇರ ಬಿತ್ತನೆಯಿಂದ ನಾಟಿ ಕಾರ್ಯಮಾಡಿದ ರೈತ, ಅಕಾಲಿಕ ಮಳೆ ನೆರೆಯಿಂದ ಗದ್ದೆಗಳು ಜಲಾವೃತವಾಗಿ ಸಂಪೂರ್ಣ ನಾಟಿ ನೀರಿನಲ್ಲಿ ಕೊಚ್ಚಿಕೂಂಡು ಹೋಗಿರುವುದನ್ನು ನೆನೆಯುತ್ತಾ ದುಃಖಿಸುತ್ತಾರೆ ಆರ್ಜಿ ಗ್ರಾಮದ ಜೀವನ್. ಕೂಲಿ ಕಾರ್ಮಿಕರ ಸಮಸ್ಯೆ, ದುಬಾರಿ ಕೂಲಿ ಹಾಗೂ ಖರ್ಚಿನಿಂದ ಬೇಸತ್ತು ಡ್ರಮ್ ಸಿಡ್ ಮಾಡಿದ ರೈತ ಎಡೆಬಿಡದೆ ಸುರಿದ ಮಳೆಯಿಂದ ಪೈರು ಸೆರಿಯಾಗಿ ಬಾರದೆ, ಕದನೂರು ಗ್ರಾಮದ ರೈತ ರಂಜು ನಂಜಪ್ಪ ಕಂಗಾಲಾಗಿದ್ದಾರೆ.

ಹೊಳೆ ಬದಿಯಲ್ಲಿ ಗದ್ದೆ ಇರುವ ರೈತನ ಸಂಕಷ್ಟ ಬೆರೆಯದೇ ರೀತಿ. ಜೋರು ಮಳೆಯಿಂದ ಗದ್ದೆಗಳು ಮುಳುಗಡೆಯಾಗುವ ಭೀತಿಯಿಂದ ಸೆಷ್ಟೆಂಬರ್ ಮೊದಲ ವಾರದಲ್ಲಿ ನಾಟಿ ಕಾರ್ಯ ಮಾಡಿದ ರೈತನಿಗೆ ಕಟಾವು ಸಮಯದಲ್ಲಿ ತೂಂದರೆ ಅಗುವ ಭೀತಿ ಕಾಡ ತೊಡಗಿದೆ. ಅತಿವೃಷ್ಟಿಯಿಂದ ಮುಳುಗಡೆಗೋಂಡ ಗದ್ದೆಯಲ್ಲಿ ಶೇಖರಣೆಯಾದ ಮರಳನ್ನು ಸಾಗಿಸುವುದೇ ತ್ರಾಸದಾಯಕ ಮತ್ತು ತ್ಯಾಜ್ಯ ಸಂಗ್ರಹಣೆಯಿಂದ ರೋಗ-ರುಜಿನಗಳು ಹರಡುವ ಸಾಧ್ಯತೆ ಇದೆ ಎಂದು ಕೊಟ್ಟೋಳಿಯ ರೈತ ಚರ್ಮಣ್ಣ ದುಃಖಿಸುತ್ತಾರೆ. ಸಾಂಪ್ರದಾಯಿಕ ಭತ್ತ ನಾಟಿ ಮಾಡಿದ ರೈತರ ಗೋಳು ಬೆರೆಯದೆ. ಕಾವೇರಿ ಸಂಕ್ರಮಣ ಸಮಯದಲ್ಲಿ ಪೈರು ಟಿಸಲು ಓಡೆಯುವ ಸಮಯದಲ್ಲಿ ಮಳೆ ಇದ್ದರೆ ಭತ್ತ ಜಳ್ಳಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಕೀಟ ಬಾಧೆಗಳು ಹೆಚ್ಚಾಗುತ್ತದೆ.

ದುಬಾರಿ ಕೂಲಿ ಸಮಸ್ಯೆಯಿಂದ ಯಾಂತ್ರಿಕ ನಾಟಿ ಮಾಡಿದ ರೈತ, ಭತ್ತ ಕಟಾವಿಗೂ ಯಂತ್ರ ಬಳಸಿದರೂ ಒಣ ಹುಲ್ಲು ಸಿಗದೆ ಆಧಾಯದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು.

ಇವು ಭತ್ತ ಕೃಷಿಕನ ಸಮಸ್ಯೆಯಾದರೆ, ವಾಣಿಜ್ಯ ಬೆಳೆ ಕಾಫಿ ಬೆಳೆಯುವ ರೈತನ ಸಮಸ್ಯೆ ಇನ್ನೊಂದು ರೀತಿಯದ್ದು, ರೊಬಸ್ಟಾ ಕಾಫಿ ಗೊಂಚಲಲ್ಲೇ ಕೊಳೆ ರೋಗದಿಂದಾಗಿ ಉದುರ ತೊಡಗಿದೆ. ಅಲ್ಪ ಸ್ವಲ್ಪ ಹಣ್ಣಾದ ಅರೆಬಿಕಾ ಕಾಫಿ ಮಳೆಯಿಂದ ಒಡೆದು ನೆಲಕ್ಕುರುಳಿರುವುದಲ್ಲದೆ ಗುಣಮಟ್ಟದಲ್ಲಿ ಏರು ಪೇರಾಗುವ ಸಾಧ್ಯತೆ ಹೆಚ್ಚಿದೆ. ಕುಯಿಲು ಮಾಡಿದ ಕಾಫಿಯನ್ನು ಒಣಗಿಸಲು ಮಳೆಯಿಂದ ತೊಂದರೆಯಾಗಿದೆ. ನೆರಳಿರುವ ಕಡೆ ಕಾಫಿ ಕಾಯಿಗಳು ಉದುರುತ್ತಿರುವುದು ಕಂಡುಬರುತ್ತಿದೆ.

ಕರಿಮೆಣಸು ಬಳ್ಳಿಗಳು ಶೀಘ್ರ ಸೊರಗು ರೋಗದಿಂದ ನಾಶವಾಗಿದೆ. ಅನಿಯಮಿತ್ತ ಮಳೆಯಿಂದ ಕರಿಮೆಣಸು ಫಸಲು ಅಷ್ಟೇನು ಫಲದಾಯಕವಾಗಿರುವುದಿಲ್ಲ.

ಮಿಶ್ರ ಬೆಳೆಯಾಗಿ ಬೆಳೆದ ಅಡಕೆಯ ಸ್ಥಿತಿ ಶೋಚನಿಯ. ಭತ್ತ ಗದ್ದೆಗಳನ್ನು ಮಾರ್ಪಡಿಸಿ ಮಾಡಿದ ಅಡಕೆ ತೋಟಗಳಲ್ಲಿ ನೆರೆಯಿಂದ ನೀರು ನಿಂತಿದ್ದರಿಂದ ಕೊಳೆ ರೋಗದಿಂದ ಅಡಕೆ ಉದುರುತ್ತಿದೆ.

ಮಳೆ ಗಾಳಿಯಿಂದ ಬಾಳೆ ಬೇಸಾಯ ನೆಲಕಚ್ಚಿದೆ. ಗ್ರಾಮೀಣ ರೈತರು ಕೃಷಿಯನ್ನೇ ನಂಬಿ ಬದುಕು ನಿರ್ವಹಣೆ ಮಾಡುತ್ತಿರುವುದು ತಮ್ಮ ಉಸಿರಿಗಾಗಿ ಮಾತ್ರ ಎಂಬಂತಾಗಿದೆ.

-ಚಿತ್ರ ವರದಿ : ಅಮ್ಮಣಿಚಂಡ ಪ್ರವೀಣ್ ಚಂಗಪ್ಪ