ಕೂಡಿಗೆ, ಅ. 13: ಗ್ರಾಮೀಣ ಪ್ರದೇಶದ ರೈತರು ಹಾಲು ಉತ್ಪಾದಕರ ಸಂಘಗಳಿಗೆ ಗುಣಮಟ್ಟದ ಹಾಲನ್ನು ಹಾಕುವ ಮೂಲಕ ತಮ್ಮ ಪ್ರಗತಿಯ ಜೊತೆಗೆ ಸಹಕಾರ ಸಂಘಗಳ ಪ್ರಗತಿ ಸಾಧ್ಯ ಎಂದು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್‍ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಹುದುಗೂರು ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ರೈತರಿಗೆ ಹೈನುಗಾರಿಕೆಗೆ ಬೇಕಾಗುವ ಎಲ್ಲಾ ಸಾಲ ಸೌಲಭ್ಯಗಳನ್ನು ಒಕ್ಕೂಟದ ಸಹಕಾರದಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಂಕ್‍ಗಳಲ್ಲಿ ಮತ್ತು ಸಹಕಾರ ಸಂಘಗಳಲ್ಲಿ ನೀಡಲಾಗುತ್ತಿದೆ. ಅಲ್ಲದೇ ಒಕ್ಕೂಟದ ವತಿಯಿಂದ ಸಂಘದ ಪ್ರಗತಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ, ಜಿಲ್ಲೆಯ ರೈತರು ಹಾಲಿನ ಗುಣಮಟ್ಟವನ್ನು ಹೆಚ್ಚಿಸಲು ಹಸುಗಳಿಗೆ ನೀಡುವ ಆಹಾರ ಮತ್ತು ಆರೋಗ್ಯ ತಪಾಸಣೆ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ವಿಮಲ ವಹಿಸಿದ್ದರು. ಸಭೆಯಲ್ಲಿ ಆಡಿಟ್ ವರದಿ ಮತ್ತು 2020-21ನೇ ಸಾಲಿನ ಅಂದಾಜು ಬಜೆಟ್ ಮಂಜೂರು ಮಾಡುವುದು ಲೆಕ್ಕಪರಿಶೋಧನೆ ಮಾಡಲು ಇಲಾಖೆಯ ಅನುಮತಿಯನ್ನು ಕೋರುವ ಬಗ್ಗೆ ಸೇರಿದಂತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ವಿಚಾರಗಳು ಚರ್ಚೆಯಾದವು. ಸಭೆಯಲ್ಲಿ ಉಪಾಧ್ಯಕ್ಷೆ ರೋವಿನ್ ಸೇರಿದಂತೆ ನಿರ್ದೇಶಕರುಗಳಾದ ಜಮುನಾ, ಪುಟ್ಟಮ್ಮ, ರತ್ನ, ಉಮಾ, ಪೂರ್ಣಿಮಾ, ಸುಮಾ, ಕಾರ್ಯದರ್ಶಿ ಜಾನಕಿ ಹಾಜರಿದ್ದರು.