ಮಡಿಕೇರಿ, ಅ. 13: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ, ಕೊಡಗು ಪ್ರದೇಶ ವ್ಯಾಪ್ತಿಯ ಅರೆಭಾಷಿಕ ಹಿರಿಯರು ಹಾಗೂ ಭಾಷಾಭಿಮಾನಿಗಳ ಸಮ್ಮುಖದಲ್ಲಿ

ಅರೆಭಾಷೆ ಶಬ್ಧ ನಿಷ್ಪತ್ತಿ ಶಾಸ್ತ್ರದ ಪ್ರಕಾರ ಅರ್ಥಕೋಶ ರಚನೆ ಮಾಡುವ ಯೋಜನೆಯ ಪೂರ್ವಭಾವಿ ಸಭೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡ ರಸ್ತೆಯಲ್ಲಿರುವ ಕೊಡಗು ಗೌಡ ಮಹಿಳಾ ಒಕ್ಕೂಟದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಹಿರಿಯ ಭಾಷಾ ತಜ್ಞ ಚೆ. ರಾಮಸ್ವಾಮಿ ಈ ಯೋಜನೆಯ ಬಗ್ಗೆ ಸೂಕ್ತ ರೀತಿಯ ಮಾಹಿತಿಗಳನ್ನು, ಸಲಹೆ ಸೂಚನೆಗಳನ್ನು ಆನ್‍ಲೈನ್ ಮೂಲಕ ನೀಡಿದರು. ಡಾ. ಕರುಣಾಕರ ನಿಡಿಂಜಿ ಮಾತನಾಡಿ, ಪದಕೋಶಕ್ಕೆ ಪದ ಸಂಗ್ರಹಣೆಯ ಬಗ್ಗೆ ಮತ್ತು ಪದಕೋಶದ ಪ್ರಾಮುಖ್ಯತೆಯನ್ನು ವಿವರಿಸಿದರು.

ವೇದಿಕೆಯಲ್ಲಿ ಅಕಾಡೆಮಿ ಸದಸ್ಯ ಅರ್ಥಕೋಶ ರಚನಾ ಸಮಿತಿ ಸಂಚಾಲಕ ಡಾ. ವಿಶ್ವನಾಥ ಬದಿಕಾನ ಉಪಸ್ಥಿತರಿದ್ದರು. ಜಿಲ್ಲೆಯ ಹಿರಿಯರು, ವಿದ್ವಾಂಸರು, ಅಕಾಡೆಮಿ ಸದಸ್ಯರು ಭಾಗವಹಿಸಿದ್ದರು.