(ತಾ. 13 ರ ಸಂಚಿಕೆಯಿಂದ)

ಅರಣ್ಯ ಇಲಾಖೆಯಲ್ಲಿ ವಲಯವಾರು ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿನ ಪ್ರಾಣಿಗಳ ಮೇಲೆ ನಿಗಾಇಡುವ ವ್ಯವಸ್ಥೆ ಮಾಡಬೇಕಾಗಿದೆ ಹಾಗೂ ಅವರಿಗೂ ಸೂಕ್ತವಾದ ಆಧುನಿಕ ಪರಿಕರಗಳು... ಹಾಗೂ ಜೀವನದ ಭದ್ರತೆ ಒದಗಿಸಬೇಕಿದೆ. ಕಾಡುಪ್ರಾಣಿಗಳು, ಕಾಡಾನೆಗಳು ಕಾಡಂಚನ್ನು ದಾಟಿ ನಾಡಿಗೆ ನುಸುಳದಂತೆ ವರ್ಷಕ್ಕೊಂದು ಪ್ರಯೋಗ ನಡೆಸದೆ ದೀರ್ಘಕಾಲದ ಯೋಜನೆ ರೂಪಿಸಬೇಕಿದೆ. ಇದಕ್ಕೆ ಸೂಕ್ತವಾದ ಅಧ್ಯಯನದ ಅನಿವಾರ್ಯತೆ ಇದೆ. ‘ಆನೆ ನಡೆದದ್ದೇ ದಾರಿ’ ಎಂಬಂತೆ ‘ತಾವು ತೆಗೆದುಕೊಂಡದ್ದೇ ತೀರ್ಮಾನ’ ಎಂಬ ಮನೋಭಾವನೆಯನ್ನು ಬದಿಗಿಟ್ಟು ತಜ್ಞರು, ಸ್ಥಳೀಯರೊಂದಿಗೆ ಚರ್ಚಿಸಿ ಮಾಡಬೇಕಾದ ವ್ಯವಸ್ಥೆಗಳ ಕುರಿತು ಯೋಚಿಸಬೇಕಿದೆ. ಇಂತಹ ವಿಷಯಗಳಲ್ಲಿ ಜನಸಾಮಾನ್ಯರಿಗೆ ಎಷ್ಟು ಕಾಳಜಿ ಇದೆಯೋ, ಜನಪ್ರತಿನಿಧಿಗಳು, ಮಂತ್ರಿ ಮಹೋದಯರು, ಅಧಿಕಾರಿ ವರ್ಗ ತಮ್ಮ ತಮ್ಮ ಸ್ವಹಿತಾಸಕ್ತಿ, ಪ್ರತಿಷ್ಠೆಗಳನ್ನು ಬದಿಗೊತ್ತಿ ರೈತರ, ಬೆಳೆಗಾರರನ್ನು ರಕ್ಷಿಸುವ ಜವಾಬ್ದಾರಿ ತೋರಬೇಕಾಗಿದೆ. ಕಾಡಾನೆಗಳಿಂದ ಬೆಳೆ ನಷ್ಟವಾದಾಗ, ಜೀವಹಾನಿಗಳಾದಾಗ ಕೇವಲ ಆ ಸಂದರ್ಭಕ್ಕೆ ಪರಿಹಾರ ರೂಪದಲ್ಲಿ ಒಂದಷ್ಟು ನಷ್ಟ ಪರಿಹಾರ, ಜೀವಹಾನಿಗೆ ಬೆಲೆಕಟ್ಟುವ ಪರಿಪಾಠವನ್ನು ಬಿಡಬೇಕಾಗಿದೆ.

ಈಗಾಗಲೇ ಕೊಡಗು ಜಿಲ್ಲೆಯ ಕೃಷಿ, ಬೆಳೆಗಾರ ಕಾಡಾನೆ ದಾಳಿಯಿಂದ ತನ್ನ ಭತ್ತದ ಬೆಳೆಗಳನ್ನು ಕಳೆದುಕೊಂಡು, ಕಾಫಿ ತೋಟದಲ್ಲಿ ಕಾಫಿ ಗಿಡಗಳು, ಕಾಫಿ ಫಸಲನ್ನು ಕಳೆದುಕೊಂಡು ರೋಸಿ ಹೋಗಿದ್ದಾನೆ. ಅರಣ್ಯ ಇಲಾಖೆಯವರಿಗೆ ಹಿಡಿಶಾಪ ಹಾಕುತ್ತಿದ್ದಾನೆ. ಸಿನೆಮಾದ ಅಂತ್ಯದಲ್ಲಿ ಎಲ್ಲಾ ಮುಗಿದ ಮೇಲೆ ಬಂದು ತಲುಪುವಂತೆ ಬರುವ ಅರಣ್ಯ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಸೆಟೆದು ನಿಂತಿದ್ದಾರೆ. ತೋರಿಕೆಯ ಸಾಂತ್ವನ ಹೇಳುವ, ಮಾಧ್ಯಮಗಳಲ್ಲಿ ಮಾತ್ರ ತಮ್ಮ ವೀರತ್ವ ಪ್ರದರ್ಶಿಸುವ, ಅಸಂಬದ್ಧ ಹೇಳಿಕೆಗಳನ್ನು ನೀಡುವ, ನಾವೇ ಓಟು ಹಾಕಿ ಗೆಲ್ಲಿಸಿ ಕಳುಹಿಸಿದ ಜನಪ್ರತಿನಿಧಿಗಳ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾನೆ.

ಈಗಾಗಲೇ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾಡಾನೆ ಹಾಗೂ ಇತರ ವನ್ಯ ಮೃಗಗಳ ಉಪಟಳದಿಂದಾಗಿ ತೋಟ ಮಾಲೀಕರು ತಲೆಮೇಲೆ ಕೈಇಟ್ಟು ಕುಳಿತ್ತಿದ್ದರೆ, ಕಾರ್ಮಿಕರು ಕೆಲಸಕ್ಕೆ ತೋಟಕ್ಕೆ ಬರುವುದಕ್ಕೂ ಹಿಂಜರಿಯುತ್ತಿರುವ ಸನ್ನಿವೇಷಗಳು ಎದುರಾಗಿವೆ. ಎಲ್ಲೆಂದರಲ್ಲಿ ಸಮಯದ ಅಂಕೆಯೇ ಇಲ್ಲದೆ ಓಡಾಡುತ್ತಿರುವ ಕಾಡಾನೆಗಳಿಗೆ ಹೆದರಿ ಪ್ರಾಣ ಭಯದಿಂದ ಮನೆಯಿಂದ ಹೊರಬರಲೂ ಅಂಜುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಮುಂದೊಂದು ದಿನ ಕಾಫಿ ಉದ್ಯಮಕ್ಕೆ ಬಲವಾದ ಪೆಟ್ಟು ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕಾಲಕ್ರಮೇಣ ತಾಳ್ಮೆ ಕಳೆದುಕೊಳ್ಳಬಹುದಾದ ಕೃಷಿಕ, ಬೆಳೆಗಾರರು ಕಾನೂನನ್ನೇ ಕೈಗೆತ್ತಿಕೊಳ್ಳುವ ಪರಿಸ್ಥಿತಿ ಬಂದೊದಗಿದರೂ ಅತಿಶಯೋಕ್ತಿ ಏನಿಲ್ಲ. ಇಡೀ ಕೊಡಗಿನ ಕೃಷಿಕ ಸಮಾಜ, ಬೆಳೆಗಾರ ಸಮೂಹ ಇಲಾಖೆಯ ವಿರುದ್ಧ, ಜನಪ್ರತಿನಿಧಿಗಳ ವಿರುದ್ಧ, ಸರಕಾರದ ವಿರುದ್ಧ ಧಂಗೆ ಎದ್ದರೂ ಆಶ್ಚರ್ಯಪಡಬೇಕಿಲ್ಲ.

ಹಾಗಾಗಿ ಇನ್ನಾದರೂ ಅರಣ್ಯ ಇಲಾಖೆಯವರು ನಿದ್ರಾವಸ್ಥೆಯಿಂದ ಎಚ್ಚೆತ್ತುಕೊಂಡು ಕಾಡು ಪ್ರಾಣಿಗಳನ್ನು ಕಾಡಿನಲ್ಲೇ ಉಳಿಸಿಕೊಳ್ಳುವ ಸೂಕ್ತ ಸಮಯದಲ್ಲಿ ಸಮಯ ಪ್ರಜ್ಞೆಯನ್ನರಿತು ಕೃಷಿಕ, ಬೆಳೆಗಾರರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯೋಚಿಸುವಂತಾಗಬೇಕು... ಬಣ್ಣದ ಮಾತುಗಳನ್ನಾಡುತ್ತಾ, ಪೊಳ್ಳು ಭರವಸೆಗಳನ್ನು ನೀಡುತ್ತಾ... ಅನುಷ್ಠಾನವಾಗದ ಆಶ್ವಾಸನೆಗಳನ್ನು ನೀಡುತ್ತಾ, ಕೇವಲ ಪರಿಹಾರದ ಹಾಡನ್ನೇ ಹಾಡುತ್ತಾ, ಮಾಧ್ಯಮಗಳಿಗೆ ‘ಫೋಸು’ ನೀಡುತ್ತಾ ಕಾಲಕಳೆಯುವ ನಮ್ಮ ಜನಪ್ರತಿನಿಧಿಗಳು, ಶಾಸಕರು, ಸಂಸದರು ಜಿಲ್ಲೆಯ ಕಾಡಾನೆ, ವನ್ಯ ಮೃಗಗಳ ಉಪಟಳದಿಂದ ಜಿಲ್ಲೆಯ ಬೆಳೆಗಾರರನ್ನು, ಕೃಷಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಪಡೆದುಕೊಂಡು ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ. ವಾರ್ಷಿಕವಾಗಿ ಒಂದಷ್ಟು ಸಾವಿರ ಕೋಟಿಗಳನ್ನು ವ್ಯಯಿಸಿ ಸರಕಾರದ ಬೊಕ್ಕಸವನ್ನು ಖಾಲಿ ಮಾಡುವ ಬದಲು ತಜ್ಞರೊಂದಿಗೆ ಸಮಾಲೋಚಿಸಿ, ಖಾಯಂ ಪರಿಹಾರವನ್ನು ಕಂಡುಹಿಡಿದು ಕ್ರಮ ಜರುಗಿಸಲು ಕ್ರಮ ವಹಿಸಬೇಕಿದೆ. ತಮ್ಮ ತಮ್ಮ ಸ್ವಪ್ರತಿಷ್ಠೆಗಳನ್ನು ಕಿತ್ತೆಸೆದು, ಪಕ್ಷಾತೀತವಾಗಿ, ಜನಪ್ರತಿನಿಧಿಯಾಗುವ ಮೊದಲು ತಾನೂ ಒಬ್ಬ ಈ ಜಿಲ್ಲೆಯ ಜನಸಾಮಾನ್ಯ, ನಾನೂ ಒಬ್ಬ ಕೃಷಿಕ ಅಥವಾ ಬೆಳೆಗಾರ ಎಂಬ ಕಾಳಜಿಯ ಮನೋಭಾವನೆಯೊಂದಿಗೆ ಚಿಂತಿಸಿ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಮಾಡಬೇಕಿದೆ.

ಕೊನೆ ಹನಿ...

‘ಕೋಣನ ಮುಂದೆ ಕಿನ್ನರಿ ಬಾರಿಸಿದರೆ, ಅದು ಒಮ್ಮೆ ತನ್ನ ಕಿವಿಯನ್ನು ಒದರಿ ಸುಮ್ಮನಾಗುತ್ತದಂತೆ’. ಇಚ್ಛಾಶಕ್ತಿ ಹಾಗೂ ಕ್ರಿಯಾಶೀಲತೆ ಇದ್ದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು’. ಮನಸ್ಸಿನ ಎಡತಾಕಲುಗಳು ಇವು... ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿರೋ... ನಿಮಗೇ ಬಿಟ್ಟಿದ್ದು.

ಸರಕಾರದ ಬೊಕ್ಕಸಕ್ಕೆ ಆರ್ಥಿಕ ತೆರಿಗೆ ನೀಡುತ್ತಿರುವ ಕೊಡಗು ಜಿಲ್ಲೆಯ ಕೃಷಿಕ, ಬೆಳೆಗಾರರ ಹಿತವನ್ನು ಬಯಸುವುದು ಕಾಳಜಿಯಾಗಬೇಕು, ಜವಾಬ್ದಾರಿಯಾಗಿರಬೇಕು.

(ಮುಗಿಯಿತು) - ಮಾದೇಟಿರ ಬೆಳ್ಯಪ್ಪ, ಕಡಗದಾಳು.